ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ಗುಣಮಟ್ಟದ ಹಾಲು ಪೂರೈಕೆ ಸಾಧ್ಯ
ಮೈಸೂರು

ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ಗುಣಮಟ್ಟದ ಹಾಲು ಪೂರೈಕೆ ಸಾಧ್ಯ

September 26, 2018

ಬೆಟ್ಟದಪುರ:  ಜಾನುವಾರುಗಳ ಉತ್ತಮ ಆರೋಗ್ಯ ನಿರ್ವಹಣೆಯಿಂದ ಮಾತ್ರ ನಿರೀಕ್ಷಿತ ಹಾಲು ಪೂರೈಕೆ ಸಾಧ್ಯವಾಗುತ್ತದೆ ಎಂದು ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ತಿಳಿಸಿದರು.

ಬೆಟ್ಟದಪುರ ಸಮೀಪದ ಕೆ.ಬಸವನಹಳ್ಳಿ ಹಾಗೂ ಕೋಟೆಯ್ಯನಕೊಪ್ಪಲು ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕ ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಗುಜರಾತಿನ ಅಮುಲ್ ಹಾಲು ಉತ್ಪನ್ನಗಳು ಇಂದು ವಿಶ್ವದಾದ್ಯಂತ ಹೆಚ್ಚು ಮಾರಾಟವಾಗುತ್ತಿದ್ದು, ಗುಜರಾತಿನಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ವರ್ಗೀಸ್ ಕುರಿಯನ್ ಅವರ ಪರಿಶ್ರಮದಿಂದ ಮಾತ್ರ ಇದು ಯಶಸ್ವಿಯಾಗಿದೆ. ಅದೇ ರೀತಿ ನಮ್ಮ ರಾಜ್ಯದ ನಂದಿನಿ ಹಾಲಿನ ಉತ್ಪನ್ನಗಳಿಗೂ ಬೇಡಿಕೆ ಇದ್ದು, ಇವೆಲ್ಲವಕ್ಕೂ ಗುಣಮಟ್ಟದ ಹಾಲು ಪೂರೈಕೆಯೇ ತಳಹದಿಯಾಗಿದೆ ಎಂದರು.

ನಂತರ ಮಾತನಾಡಿದ ಮೈಮುಲ್ ವಿಸ್ತರಣಾಧಿಕಾರಿ ತುಳಸಿಕುಮಾರ್ ಸಹಕಾರಿ ಸಂಘಗಳ ಅಭಿವೃದ್ಧಿ ಹೊಂದಲು ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರ ಪ್ರಮುಖವಾಗಿದೆ. ಯಶಸ್ವಿನಿ ಆರೋಗ್ಯ ಕಾರ್ಡ್ ಅನ್ನು ಕರ್ನಾಟಕ ಆರೋಗ್ಯ ಕಾರ್ಡ್‍ನೊಂದಿಗೆ ವಿಲೀನಗೊಳಿಸಿದ್ದು, ಪ್ರತಿ ಕುಟುಂಬದ ಸದಸ್ಯರು ಆಧಾರ್ ಮತ್ತು ಬಿಪಿಎಲ್ ಕಾರ್ಡ್‍ನೊಂದಿಗೆ ತೆರಳಿ ದೊಡ್ಡ ದೊಡ್ಡ ಖಾಯಿಲೆಗಳಿಗೂ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಬಸವನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಅನಂತು ಮಾತನಾಡಿ ರೈತರು ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡುವುದರಿಂದ ಜೀವನ ನಿರ್ವಹಣೆಗೆ ಅನುಕೂಲವಾಗಿ, ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಕೋಟೆಯ್ಯನಕೊಪ್ಪಲು ಅಧ್ಯಕ್ಷೆ ಕಾವೇರಿ, ಉಪಾಧ್ಯಕ್ಷ ಸುರೇಶ, ನಂಜೇಗೌಡ, ನಿರ್ದೇಶಕರಾದ ಲೋಕೇಶ್, ಅರುಣ, ಮಹೇಶ, ಪ್ರಮೀಣ್, ಚಂದ್ರಶೇಖರ್, ನಂಜುಂಡೇಗೌಡ, ಜಯಲಕ್ಷ್ಮಿ,ಗೋವಿಂದೇಗೌಡ, ರಾಮೇಗೌಡ, ಪ್ರಕಾಶ, ಮಂಜಾಚಾರಿ, ಮೇಲೇಗೌಡ, ಭಾರತಿ, ಬಾಲಕೃಷ್ಣ, ವಿನೋದ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Translate »