ರೈಲ್ವೆ ಖಾಸಗೀಕರಣ ಹುನ್ನಾರಕ್ಕೆ ಕಾರ್ಮಿಕರ ವಿರೋಧ: ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಣೆ
ಮೈಸೂರು

ರೈಲ್ವೆ ಖಾಸಗೀಕರಣ ಹುನ್ನಾರಕ್ಕೆ ಕಾರ್ಮಿಕರ ವಿರೋಧ: ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಣೆ

July 4, 2019

ಮೈಸೂರು, ಜು.3(ಪಿಎಂ)- ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಉದ್ದೇಶಿಸಿದೆ ಎಂದು ಆರೋಪಿಸಿ ರಾಜ್ಯವೂ ಸೇರಿದಂತೆ ದೇಶದಾದ್ಯಂತ ರೈಲ್ವೆ ಕಾರ್ಮಿ ಕರು ವಾರ ಕಾಲ ಕಪ್ಪುಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿಸಲು ಮುಂದಾಗಿದ್ದಾರೆ.

ಮೈಸೂರಿನಲ್ಲೂ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‍ನ ಮೈಸೂರು ವಿಭಾಗದ ವತಿಯಿಂದ ಬುಧವಾರ ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆ ನಡೆಸಿ ರಾಷ್ಟ್ರದ ಆರ್ಥಿಕತೆಯ ಬೆನ್ನಲುಬಾದ ಸರ್ಕಾರಿ ಸ್ವಾಮ್ಯದ ಭಾರತೀಯ ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಉದ್ದೇಶಿಸಿದ್ದು, ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದಿನಿಂದ ಜು.6ರವರೆಗೆ ದೇಶದಾ ದ್ಯಂತ `ಬ್ಲ್ಯಾಕ್ ಡೇ ಪ್ರೊಟೆಸ್ಟ್ (ಕಪ್ಪು ದಿನದ ಪ್ರತಿಭಟನೆ)’ ಶೀರ್ಷಿಕೆಯಡಿ ಕಪ್ಪು ಪಟ್ಟಿ ಧರಿಸಿ ಕಾರ್ಯ ನಿರ್ವಹಿಸುವುದಕ್ಕೆ ಕಾರ್ಮಿಕ ಸಂಘಟನೆಗಳು ನಿರ್ಣಯಿ ಸಿದ್ದು, ಇದಕ್ಕೆ ಮೈಸೂರು ವಿಭಾಗದಲ್ಲೂ ಬೆಂಬಲ ನೀಡಲು ನಿರ್ಧರಿಸಲಾಯಿತು.

ಅದರಂತೆ ವಾರ ಕಾಲ ಮೈಸೂರಿ ನಲ್ಲೂ ನೈರುತ್ಯ ರೈಲ್ವೆ ಕಾರ್ಮಿಕರು ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ. ಇದರ ಅಂಗವಾಗಿ ಇಂದು ಮೈಸೂರು ರೈಲ್ವೆಯ ಡಿಆರ್‍ಎಂ ಕಚೇರಿ ಆವರಣದಲ್ಲಿರುವ ನೈರುತ್ಯ ರೈಲ್ವೆ ಮಜ್ದೂರ್ ಯೂನಿಯನ್‍ನ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ರೈಲ್ವೆ ನಿಲ್ದಾಣದ ಒಳಾ ವರಣದ ಮೂಲಕ ರೈಲ್ವೆ ನಿಲ್ದಾಣ ಎದುರಿನ ವೃತ್ತಕ್ಕೆ ತಲುಪಿದ ಪ್ರತಿಭಟನಾ ಮೆರವಣಿಗೆಯು ಇರ್ವಿನ್ ರಸ್ತೆಯಲ್ಲಿ ಸಾಗಿ ಮತ್ತೆ ರೈಲ್ವೆಯ ಡಿಆರ್‍ಎಂ ಕಚೇರಿ ಆವರಣದಲ್ಲಿ ಅಂತ್ಯ ಗೊಂಡಿತು. ಸಂಘಟನೆಯ ಮೈಸೂರು ವಿಭಾಗದ 14 ಶಾಖೆಗಳಿಂದಲೂ ಕಾರ್ಮಿ ಕರು ಇಂದು ಮೈಸೂರಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರಾಯ್‍ಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ ಸೇರಿದಂತೆ ಭಾರತೀಯ ರೈಲ್ವೆಯ 7 ಉತ್ಪಾದನಾ ಘಟಕ ಹಾಗೂ ಕಾರ್ಯಾಗಾರಗಳನ್ನು ಖಾಸಗೀಕರಣ ಮಾಡಲು ರೈಲ್ವೆ ಸಚಿವಾಲಯ ಪ್ರಸ್ತಾಪ ಹೊಂದಿತ್ತು. ಇದು ಹಂತ ಹಂತವಾಗಿ ರೈಲ್ವೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನೈರುತ್ಯ ರೈಲ್ವೆ ಮಜ್ದೂರ್ ಯೂನಿ ಯನ್‍ನ ಪದಾಧಿಕಾರಿಗಳಾದ ಆರ್.ಆರ್. ನಾಯ್ಕ್, ಸಿ.ಶಿವಕುಮಾರ್, ಪಿ.ಶಿವ ಪ್ರಕಾಶ್, ಡಾ.ಎ.ಎಂ.ಡಿ’ಕ್ರುಜ್, ಎಸ್.ಸೋಮ ಶೇಖರ್, ಕೆ.ಗುರುರಾಜ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Translate »