ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ
ಮೈಸೂರು

ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ

December 1, 2018

ಮೈಸೂರು: ವಿಶ್ವ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದ ಆವರಣದಲ್ಲಿರುವ ವನ್ಯರಂಗದಲ್ಲಿ ಡಿ.5ರಂದು ಮಧ್ಯಾಹ್ನ 2.30ಕ್ಕೆ ತಜ್ಞರಿಂದ ಮಣ್ಣಿನ ಸವಕಳಿ ತಡೆ, ಸ್ಥಿತಿಗತಿ ಹಾಗೂ ಮಹತ್ವ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ.

ನೈಸರ್ಗಿಕ ಸಂಪನ್ಮೂಲಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣು ಇತ್ತೀಚಿನ ದಿನಗಳಲ್ಲಿ ಅವನತಿಯತ್ತ ಸಾಗುತ್ತಿದೆ. ನವೀಕರಿಸಲಾಗದ ಸಂಪನ್ಮೂಲವಾಗಿರುವ ಮಣ್ಣಿನ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಂತರರಾಷ್ಟ್ರೀಯ ಮಣ್ಣಿನ ವೈಜ್ಞಾನಿಕ ಒಕ್ಕೂಟವು 2002ರಿಂದ ಡಿ.5ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿ ಪ್ರವಾಸಿಗರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಣ್ಣಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಅಂದು ಮಧ್ಯಾಹ್ನ 2.30ಕ್ಕೆ ಆ್ಯಂಪಿ ಥಿಯೇಟರ್‍ನಲ್ಲಿ ನಡೆಯಲಿರುವ ಮಣ್ಣಿನ ದಿನದ ಕಾರ್ಯಕ್ರಮದಲ್ಲಿ ಸುತ್ತೂರಿನ ಕೆವಿಕೆ ಸಂಸ್ಥೆಯ ಮಣ್ಣಿನ ವಿಜ್ಞಾನಿ ಡಾ.ರಾಜಣ್ಣ, ಮೈಸೂರು ಜಿಲ್ಲೆಯ ಉಲ್ಲೇಖದೊಂದಿಗೆ ಕರ್ನಾಟಕದ ಮಣ್ಣಿನ ಸ್ಥಿತಿಗತಿ ಕುರಿತು ಮಾತನಾಡಲಿದ್ದಾರೆ. ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಎ.ಎಂ.ಅಣ್ಣಯ್ಯ, ಕೃಷಿ ಅರಣ್ಯ ಹಾಗೂ ಕೃಷಿ ಕ್ಷೇತ್ರದಲ್ಲಿ ಹಾವುಗಳ ಪ್ರಾಮುಖ್ಯತೆ ಕುರಿತು ಅಂತರರಾಷ್ಟ್ರೀಯ ಮಾನವ ಸಮಾಜ ಸಂಸ್ಥೆಯ ಸುಮಂತ್ ಬಿಂದು ಮಾಧವ್ ಅವರು ವಿಷಯ ಮಂಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಚ್ಛಿಸುವವರಿಗೆ ಡಿ.5ರಂದು ಮಧ್ಯಾಹ್ನ 2ಕ್ಕೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 0821-2440752, 9686668099 ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

Translate »