ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ
ಮೈಸೂರು

ಭಯ ಬಿಟ್ಟು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ

March 17, 2019

ಮೈಸೂರು: ವಿದ್ಯಾರ್ಥಿಗಳು ಪರೀಕ್ಷೆ ಎಂಬುದನ್ನು ಭೂತಾಕಾರವಾಗಿ ತಲೆಯಲ್ಲಿ ತುಂಬಿಕೊಂಡು ಅಧೀರತೆಗೆ ಒಳಗಾಗದೆ ಭಯ, ಆತಂಕ, ಗೊಂದಲಗಳ ನ್ನೆಲ್ಲಾ ಮನಸ್ಸಿನಿಂದ ಹೊರಹಾಕಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕೆಂದು ಸಾಹಿತಿ ಬನ್ನೂರು ಕೆ. ರಾಜು ಹೇಳಿದರು. ನಗರದ ಕನಕಗಿರಿಯ ಶಾರದಾ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸ್ತುತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯುತ್ತಿರುವ ಶಾಲಾ ವಿದ್ಯಾರ್ಥಿಗಳಿಗಾಗಿ ಶುಭ ಹಾರೈಕೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಸಾಮಾನ್ಯವಾಗಿ ಪರೀಕ್ಷೆ ಎಂದರೆ ಅದರಲ್ಲೂ ವಿಶೇಷವಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎಂದರೆ ಚಳಿಜ್ವರಬಂದಂತೆ ವಿದ್ಯಾರ್ಥಿ ಗಳು ಭಯಗೊಳ್ಳುತ್ತಾರೆ. ಇದರಿಂದಾಗಿ ಅವರು ಎಷ್ಟೇ ಬುದ್ಧಿವಂತರಾಗಿದ್ದರೂ, ಎಷ್ಟೇ ಚೆನ್ನಾಗಿ ಓದಿ ಪರೀಕ್ಷೆಗೆ ಸಿದ್ಧಗೊಂಡಿದ್ದರೂ ಮಾನಸಿಕ ಖಿನ್ನತೆಗೊಳಗಾಗಿ ಕಲಿತದ್ದು ಮರೆತು ಹೋಗಿ ಬರೆಯಲಾಗದೆ ಪರೀಕ್ಷೆಯಲ್ಲಿ ವಿಫಲ ರಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳಾಗಿ ಇದುವರೆಗೆ ವರ್ಷವಿಡೀ ಓದಿದ್ದು, ಕಲಿತದ್ದು ಸಾರ್ಥಕವಾಗಬೇಕಾದರೆ ಭಯವೆಂಬ ಭೂತವನ್ನು ಮನಸ್ಸಿನಿಂದ ಕಿತ್ತುಹಾಕಿ ಪರೀಕ್ಷೆ ಯನ್ನು ಪರೀಕ್ಷೆಯಾಗಿ ನೋಡದೆ ಇದೊಂದು ವಾರ್ಷಿಕ ಹಬ್ಬವೆಂದು ಭಾವಿಸಬೇಕು. ಒಂದು ಚೂರೂ ಅಳುಕದೆ ಧೈರ್ಯದಿಂದ ಪರೀಕ್ಷೆಯಲ್ಲಿ ಬರೆದರೆ ಖಂಡಿತಾ ಎಲ್ಲರೂ ಯಶಸ್ವಿಯಾಗುತ್ತೀರಿ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್‍ಎಸ್‍ಎಲ್‍ಸಿ ಎಂಬುದು ಒಂದು ಪ್ರಮುಖವಾದ ಘಟ್ಟ. ಇದನ್ನು ಯಶಸ್ವಿಯಾಗಿ ದಾಟಿ ಹೋದಲ್ಲಿ ಮುಂದಿನ ಓದಿಗೆ ಸುಲಭವಾಗುತ್ತದೆ ಎಂದು ಧೈರ್ಯ ತುಂಬಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪಾಸಾದರೆ ಸಾಲದು, ಭವಿಷ್ಯದ ದೃಷ್ಟಿಯಿಂದ ಹೆಚ್ಚು ಅಂಕಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗಾಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸಬೇಕೆಂದು ರಾಜು ಕಿವಿಮಾತು ಹೇಳಿದರು.

ಖ್ಯಾತ ಶಿಕ್ಷಣ ತಜ್ಞ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಎಲ್ಲಾ ವಿದ್ಯಾರ್ಥಿ ಗಳಿಗೂ ಯಶಸ್ಸಿನ ಸಂಕೇತವಾಗಿ ಪೆನ್ನು ಮತ್ತು ಪೆನ್ಸಿಲ್‍ಗಳನ್ನು ನೀಡಿ ಶುಭ ಹಾರೈಸಿದರಲ್ಲದೆ. ಪರೀಕ್ಷೆಯನ್ನು ಹೇಗೆ ಬರೆಯಬೇಕೆಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮುಖ್ಯ ಶಿಕ್ಷಕಿ ಸಿ.ಮಲ್ಲಿಕಾರ್ಜುನ, ಸಹ ಶಿಕ್ಷಕರಾದ ಅಶ್ವಿನಿ ಬಿ.ನಾಯಕ, ಎನ್.ಸುಗುಣ, ಕೆ.ಶೋಭಾ, ಜಿ.ಟಿ.ವಸಂತ, ಎ.ಸುಮ, ಎಲ್.ಆರ್. ಶ್ವೇತಾ, ಡೈಸಿಫ್ರಾಂಕ್ ಉಪಸ್ಥಿತರಿದ್ದರು. ಇದೇ ವೇಳೆ ಪೌರ ಪ್ರಜ್ಞೆಗಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಕಿ ಯಶೋದಾ ಅವರಿಗೆ ಶಾಲೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

Translate »