ಹುಣಸೂರಿಂದ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಸಲು ಯಡಿಯೂರಪ್ಪ ಒಲವು
ಮೈಸೂರು

ಹುಣಸೂರಿಂದ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಸಲು ಯಡಿಯೂರಪ್ಪ ಒಲವು

November 12, 2019

ಬೆಂಗಳೂರು, ನ.11(ಕೆಎಂಶಿ)- ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾ ವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವ ರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಲವು ವ್ಯಕ್ತಪಡಿಸಿದ್ದಾರೆ. ಆದರೆ, ಜೆಡಿಎಸ್‍ನಿಂದ ಒಂದು ಕಾಲು ಹೊರಗೆ ಇಟ್ಟಿರುವ ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ. ದೇವೇಗೌಡ ಅವರ ನಿಲುವು ನಿಗೂಢವಾಗಿದೆ. ಮಗನಾಗಲಿ, ಇಲ್ಲವೇ ನಮ್ಮ ಕುಟುಂಬದ ಯಾವುದೇ ಸದಸ್ಯರು ಉಪ ಚುನಾ ವಣೆಯಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಜಿಟಿಡಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇತ್ತ ವಿಶ್ವನಾಥ್ ಅವರಿಗೆ ನೇರ ಚುನಾವಣೆಗಿಂತ ವಿಧಾನ ಪರಿ ಷತ್‍ಗೆ ಆಯ್ಕೆಗೊಂಡು ಮಂತ್ರಿಮಂಡಲ ಸೇರಲು ಆಸಕ್ತರಾಗಿದ್ದಾರೆ. ಇವರ ಮಾತಿಗೆ ಮುಖ್ಯಮಂತ್ರಿ ಕೂಡ ಸಮ್ಮತಿ ನೀಡಿದ್ದಾರೆ. ಹೀಗಾಗಿ ಒಟ್ಟಾರೆ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ ತೆರೆಮರೆಯಲ್ಲಿ ಕಾರಣಕರ್ತರಾದ ಮಾಜಿ ಸಚಿವ, ಚನ್ನಪಟ್ಟಣದ ಸಿ.ಪಿ. ಯೋಗೇಶ್ವರ್ ಅವರನ್ನು ಹುಣಸೂರಿಗೆ ಕರೆತರುವ ಪ್ರಯತ್ನ ನಡೆದಿದೆ. ಯೋಗೇಶ್ವರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿದರೆ ಒಕ್ಕಲಿಗ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿ ದೊರೆಯುತ್ತವೆ ಎಂಬ ಲೆಕ್ಕಾಚಾರ. ಅದೇ ರೀತಿ ವಿವಿಧ ಸಮುದಾಯಗಳ ಮತ ಗಣನೀಯ ಪ್ರಮಾಣದಲ್ಲಿ ಸಿಕ್ಕರೆ ಬಿಜೆಪಿ ಗೆಲುವು ಸುಲಭ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಲೆಕ್ಕಾಚಾರ ಎಂದು ಮೂಲಗಳು ತಿಳಿಸಿವೆ. ಈ ಉಪಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸವಾಲಿನ ಪ್ರಶ್ನೆಯಾಗಿ ತೆಗೆದುಕೊಳ್ಳಲಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಹೆಚ್.ವಿಶ್ವನಾಥ್ ಅವರನ್ನೇ ಕಣಕ್ಕಿಳಿಸಬೇಕು.ಇಲ್ಲದಿದ್ದರೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ ಎಂದು ಕೆಲವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಮಂಜುನಾಥ್ ಅವರನ್ನು ಕಣಕ್ಕಿಳಿ ಸಲು ತೀರ್ಮಾನಿಸಿದೆಯಾದರೆ ಸದ್ಯದ ಎಲ್ಲ ಬೆಳವಣಿಗೆಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿರುವ ಜೆಡಿಎಸ್ ಮಾತ್ರ ತನ್ನ ಅಭ್ಯರ್ಥಿ ಯಾರು ಎಂಬುದನ್ನು ಇದುವರೆಗೂ ನಿಗೂಢವಾಗಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ಯಡಿಯೂರಪ್ಪ ಒಂದು ರೀತಿಯ ಒಲವು ವ್ಯಕ್ತಪಡಿಸಿದ್ದರೆ, ಜಿಟಿಡಿಯವರ ನಿರ್ಧಾರ ತೀವ್ರ ಕುತೂಹಲ ಮೂಡಿಸಿದೆ. ಈ ಮಧ್ಯೆ ನಿಮ್ಮ ಮಗನನ್ನೇ ಕ್ಯಾಂಡಿಡೇಟ್ ಮಾಡೋಣ. ಗೆಲ್ಲಿಸಿಕೊಂಡು ಬನ್ನಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈಗಾಗಲೇ ಜಿ.ಟಿ.ದೇವೇಗೌಡರಿಗೆ ಹೇಳಿದ್ದರೂ ಈ ಪ್ರಸ್ತಾವಕ್ಕೆ ಅವರು ಒಪ್ಪಿಲ್ಲ ಎನ್ನಲಾಗಿದೆ.

Translate »