ಮೈಸೂರು: ಶಾಸಕರಿಗೆ ಹಣದ ಆಮಿಷವೊಡ್ಡುವ ಮೂಲಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧ ಕೆಲಸ ಮಾಡಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಸಿನ್ ಖಾನ್ ಅವರು ಇಂದು ಮೈಸೂರಿನ ಟಿಪ್ಪು ಸರ್ಕಲ್ ಬಳಿ ಇರುವ ಎಸಿಬಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸಿ ಹಿಂಬಾಗಿಲಿನಿಂದ ಅಧಿಕಾರ ಪಡೆಯಲು ಬಿ.ಎಸ್.ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕರಿಗೆ ಬಹಿರಂಗವಾಗಿಯೇ ಆಮಿಷವೊಡ್ಡಿದ್ದಾರೆ ಎಂದಿರುವ ಅವರು, ಒಬ್ಬ ಶಾಸಕರಿಗೆ 10 ಕೋಟಿ ರೂ. ಆಫರ್ ನೀಡಿರುವುದರಿಂದ ಇಷ್ಟೊಂದು ಬೃಹತ್ ಮೊತ್ತದ ಹಣ ಯಡಿಯೂರಪ್ಪ ಅವರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.
ಹಣದ ಆಮಿಷ ಕುರಿತು ಸರಿಯಾದ ತನಿಖೆಯಾಗಬೇಕು. ಸತ್ಯಾಸತ್ಯತೆ ಬಹಿರಂಗ ಗೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಮೊಸಿನ್ ಖಾನ್ ಅವರು ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭ ಜಿಲ್ಲಾ ಯುವ ಕಾಂಗ್ರೆಸ್ ಸದಸ್ಯರೂ ಹಾಜರಿದ್ದರು. ದೂರು ಸ್ವೀಕರಿಸಿರುವ ಎಸಿಬಿ ಡಿವೈಎಸ್ಪಿ ಉಮೇಶ ಜಿ.ಶೇಟ್ ಅವರು ಈಗಾಗಲೇ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲಾಗಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರು ನೀಡಿರುವ ದೂರಿನ ಪ್ರತಿಯನ್ನು ಎಸ್‍ಐಟಿಗೆ ರವಾನಿಸುತ್ತೇವೆ ಎಂದರು.