ಮದ್ದೂರು ಕಾಲೋನಿಯಲ್ಲಿ ಜಿಪಂ ಸಿಇಓ ವಾಸ್ತವ್ಯ
ಚಾಮರಾಜನಗರ

ಮದ್ದೂರು ಕಾಲೋನಿಯಲ್ಲಿ ಜಿಪಂ ಸಿಇಓ ವಾಸ್ತವ್ಯ

September 25, 2018

ಚಾಮರಾಜನಗರ: ಜನರ ಅಹವಾಲು ಆಲಿಸಿ ಪರಿಹರಿಸಲು ಗ್ರಾಮ ವಾಸ್ತವ್ಯ ಆರಂಭಿಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು ಶನಿವಾರ ರಾತ್ರಿ ಗುಂಡ್ಲು ಪೇಟೆ ತಾಲೂಕಿನ ಮದ್ದೂರು ಕಾಲೋನಿಯಲ್ಲಿ ವಾಸ್ತವ್ಯ ಹೂಡಿ, ಸ್ಥಳೀಯರ ಕುಂದುಕೊರತೆ ವಿಚಾರಿಸಿದರು.

ಸಂಜೆ ವೇಳೆಗೆ ಹರೀಶ್‍ಕುಮಾರ್‍ರವರು ಕಾಲೋನಿಗೆ ಆಗಮಿಸುತ್ತಿದ್ದಂತೆಯೇ ಅರಣ್ಯವಾಸಿ ಗಳು ಆರತಿ ಮಾಡಿ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸಿ ಅಕ್ಕರೆಯಿಂದ ಬರಮಾಡಿಕೊಂಡರು.ಬಳಿಕ ಕಾಲೋನಿಯ ಎಲ್ಲಾ ಬೀದಿಗಳಲ್ಲೂ ಸಂಚರಿ ಸಿದ ಅವರು, ಮನೆಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಜನರು ಅನುಭವಿ ಸುತ್ತಿರುವ ಸಮಸ್ಯೆಗಳ ವಾಸ್ತವ ಚಿತ್ರಣ ಪಡೆದುಕೊಂಡರು.

ಕುಡಿಯುವ ನೀರು ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಸ್ಥಳೀಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಲಭಿಸುತ್ತಿಲ್ಲ. ಇರುವ ಮನೆಗಳು ತೀರಾ ಹಳೆಯದಾಗಿವೆ. ದುರಸ್ತಿಗೆ ಯಾವುದೇ ಕ್ರಮ ತೆಗೆದು ಕೊಂಡಿಲ್ಲ ಎಂದು ಜನರು ಅಳಲು ತೋಡಿಕೊಂಡರು.

ಕಾಲೋನಿಯ ಹಲವು ಭಾಗಗಳಿಗೆ ಸಿ.ಸಿ.ರಸ್ತೆಯಿಲ್ಲ. ಚರಂಡಿ ಸೌಲಭ್ಯ ಕಲ್ಪಿಸಿಲ್ಲ. ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಕಾಲೋನಿಯನ್ನು ಕಡೆಗಣಿಸಲಾಗು ತ್ತಿದೆ ಎಂದು ಸ್ಥಳೀಯರು ದೂರಿದರು. ತದನಂತರ ಗ್ರಾಮದಲ್ಲೇ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಆದಿವಾಸಿಗಳ ಮುಖಂಡರು, ಸ್ಥಳೀಯರಿಗೆ ಬಹುಮುಖ್ಯವಾಗಿ ವಸತಿ ಸೌಲಭ್ಯ ಕಲ್ಪಿಸ ಬೇಕಿದೆ. ಮನೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದಲೇ ನೇರವಾಗಿ ಫಲಾನುಭವಿಗಳಿಗೆ ನಿರ್ಮಿಸಿಕೊಡಬೇಕಿದೆ. ರಾಜೀವ್‍ಗಾಂಧಿ ವಸತಿ ನಿಗಮದ ವತಿಯಿಂದ ಯೋಜನೆ ಅನುಷ್ಠಾನವಾಗು ತ್ತಿದ್ದು, ದಾಖಲೆಗಳನ್ನು ನೀಡುವ ಬಿಗಿ ಪ್ರಕ್ರಿಯೆಯಿಂದ ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗು ತ್ತಿದ್ದಾರೆ. ಎಷ್ಟೋ ಅರ್ಹರಿಗೆ ಇನ್ನೂ ವೈಯಕ್ತಿಕ ಪ್ರಮಾಣ ಪತ್ರಗಳು, ದಾಖಲೆಗಳು ಹಲವು ಕಾರಣ ಗಳಿಂದ ಪಡೆಯಲು ಸಾಧ್ಯವೇ ಆಗುತ್ತಿಲ್ಲ. ಬಿಗಿ ನಿಯಮ ಅನುಸರಿಸಿದರೆ ಮನೆಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಗಮನ ಸೆಳೆದರು.

ಅರಣ್ಯ ಹಕ್ಕುಗಳನ್ನು ತ್ವರಿತವಾಗಿ ನೀಡಿದರೆ ಅನುಕೂಲವಾಗುತ್ತದೆ. ಕಿರುಅರಣ್ಯ ಉತ್ಪನ್ನ ಸಂಗ್ರಹಣೆಗೆ ಯಾವುದೇ ಅಡಚಣೆ ಮಾಡಬಾರದು ಎಂಬುದು ಸೇರಿದಂತೆ ಇನ್ನೂ ಹಲವು ಸಮಸ್ಯೆ ಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.
ಎಲ್ಲಾ ಅಹವಾಲುಗಳನ್ನು ಆಲಿಸಿ ಮಾತನಾಡಿದ ಸಿಇಓ ಹರೀಶ್‍ಕುಮಾರ್ ಅವರು, ವಸತಿ ಯೋಜನೆ ಯಲ್ಲಿ ದುರುಪಯೋಗವಾಗದಂತೆ ನೋಡಿಕೊಳ್ಳುವ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುವ ಉದ್ದೇಶದಿಂದ ರಾಜೀವ್‍ಗಾಂಧಿ ವಸತಿ ನಿಗಮದ ಮೂಲಕ ಮನೆಗಳ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ದಾಖಲೆಗಳನ್ನು ಒದಗಿಸುವಲ್ಲಿ ಸರಳೀಕರಣ ಪ್ರಕ್ರಿಯೆ ಅಳವಡಿಸಿ ಕೊಳ್ಳಲು ಸ್ಥಳೀಯರು ಕೋರಿರುವಂತೆ ಉನ್ನತ ಮಟ್ಟದಲ್ಲಿ ಈ ಬಗ್ಗೆ ಗಮನ ಸೆಳೆಯುವುದಾಗಿ ನುಡಿದರು.
ಸ್ಥಳೀಯವಾಗಿ ವಸತಿ ಸೌಲಭ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಈ ಬಗ್ಗೆ ಆದ್ಯತೆ ನೀಡಿ ಸ್ಥಳೀಯ ಇತರೆ ಸಮಸ್ಯೆಗಳನ್ನು ಸಹಾ ಪ್ರಾಮಾಣಿಕವಾಗಿ ಪರಿಹರಿ ಸಲು ಕಾರ್ಯೋನ್ಮುಖರಾಗುವುದಾಗಿ ತಿಳಿಸಿದರು.

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಚೆನ್ನಪ್ಪ, ಸದಸ್ಯ ಬಿ.ಕೆ.ಬೊಮ್ಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಜಗದೀಶ ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷÀ ರಾಜೇಶ್, ಮುಖಂಡರಾದ ಮುದ್ದಮ್ಮ, ರಾಜೇಂದ್ರ, ಮುದ್ದಯ್ಯ, ನಾಗರಾಜು ಮಾತನಾಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರೂಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Translate »