ಮಳೆಯ ಅಬ್ಬರಕ್ಕೆ ಅಪಾರ ಹಾನಿ
ಕೊಡಗು

ಮಳೆಯ ಅಬ್ಬರಕ್ಕೆ ಅಪಾರ ಹಾನಿ

June 12, 2018

ಸೋಮವಾರಪೇಟೆ: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಳೆದ 24ಗಂಟೆಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಹಾನಿ ಮುಂದುವರಿದಿದೆ.

ಮರಗಳು ವಿದ್ಯುತ್ ಕಂಬಗಳು ಮುರಿದು ಬೀಳುತ್ತಿರು ವುದರಿಂದ ಸೆಸ್ಕ್ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಅತಿಹೆಚ್ಚು ಮಳೆ ಬೀಳುವ ಶಾಂತಳ್ಳಿ ಹೋಬಳಿಯಲ್ಲಿ, ದುರಸ್ತಿ ಕೆಲಸ ಭರದಿಂದ ಸಾಗುತ್ತಿದ್ದರೂ, ಮಳೆ ಅರ್ಭಟ ದಿಂದ ಕೆಲಸಕ್ಕೆ ಹಿನ್ನಡೆಯಾಗಿದೆ. ಪುಷ್ಪಗಿರಿ ತಪ್ಪಲು ಗ್ರಾಮ ಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಅಲ್ಲಿ ದುರಸ್ತಿ ಕೆಲಸಕ್ಕೆ ತೆರಳಲು ಸೆಸ್ಕ್ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ.

ಗೌಡಳ್ಳಿ ಗ್ರಾಮ ಪಂಚಾಯಿತಿಯ ಹಿರಿಕರ ಗ್ರಾಮದ ಜಿ.ಡಿ.ದಾಮೋಧರ್ ಎಂಬುವರ ವಾಹನ ನಿಲ್ಲಿಸುವ ಶೆಡ್ ಮೇಲೆ ಮರ ಬಿದ್ದ ಪರಿಣಾಮ ಒಂದು ಕಾರು ಹಾಗೂ ಜೀಪು ಜಖಂಗೊಂಡಿದೆ. ಹಾನಗಲ್ ಬಾಣೆಯ ಅನಿತಾ, ಗರಗಂದೂರಿನ ಕಮಲ, ಕೂತಿ ಗ್ರಾಮದ ದೇವಮ್ಮ, ಕಲ್ಕಂದೂರಿನ ಜೀನತ್, ಚೌಡ್ಲು ಗ್ರಾಮದ ವರಲಕ್ಷ್ಮಿ ಸಿದ್ದೇಶ್ವರ ಎಂಬವರುಗಳ ಮನೆಯ ಗೋಡೆ ಕುಸಿದು ಹಾನಿಯಾಗಿದೆ. ಸಿದ್ದಾರ್ಥ ಬಡಾವಣೆಯ ಎಚ್.ಎಂ. ರವಿ, ಗರ್ವಾಲೆ ಗ್ರಾಮದ ಟಿ.ಎಂ. ಬೇಬಿ, ಹರಗ ಗ್ರಾಮದ ಬೋಜಮ್ಮ ಅಣ್ಣಯ್ಯ ಎಂಬುವರುಗಳ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

ಯಡೂರು ಗ್ರಾಮದ ಲೋಕೇಶ್ ಎಂಬುವರಿಗೆ ಸೇರಿದ ಎತ್ತುಗಳು ಗದ್ದೆಯಲ್ಲಿ ಮೇಯುತ್ತಿದ್ದ ಸಂದರ್ಭ ಮಳೆ, ಗಾಳಿಯ ರಭಸಕ್ಕೆ ವಿದ್ಯುತ್ ತಂತಿ ತುಂಡಾಗಿ ಎತ್ತನ ಮೇಲೆ ಬಿದ್ದ ಪರಿಣಾಮ ಒಂದು ಎತ್ತು ಸಾವಿಗೀಡಾಗಿದ್ದು, ಸುಮಾರು 40 ಸಾವಿರ ರೂ. ನಷ್ಟವಾಗಿದೆ ಎನ್ನಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳು ಚೆಸ್ಕಾಂ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೋಮವಾರ ಶಾಸಕ ಅಪ್ಪಚ್ಚು ರಂಜನ್ ಹಲವು ಗ್ರಾಮ ಗಳಿಗೆ ಭೇಟಿ ನೀಡಿ ಮಳೆಯಿಂದಾದ ಹಾನಿಯ ಬಗ್ಗೆ ಮಾಹಿತಿ ಪಡೆದರು. ಕಳೆದ 24 ಗಂಟೆ ಅವಧಿಯಲ್ಲಿ ಸೋಮವಾರ ಪೇಟೆ ಕಸಬಾ ಹೋಬಳಿಗೆ 138.8ಮಿಲಿ.ಮೀಟರ್, ಶಾಂತಳ್ಳಿ 196ಮಿ.ಮೀ, ಶನಿವಾರಸಂತೆ 101.4 ಮಿ.ಮೀ. ಕೊಡ್ಲಿಪೇಟೆ 135.5ಮಿ.ಮೀ., ಸುಂಠಿಕೊಪ್ಪ 42ಮಿ.ಮೀ., ಕುಶಾಲನಗರ 11ಮಿ.ಮೀ. ಮಳೆಯಾಗಿದೆ.

Translate »