ರಿಂಗ್ ರಸ್ತೆಯಲ್ಲಿ ಬಾರ್‍ಗಳಿಂದ ಅಪಘಾತ: ಸಂಸದ ಪ್ರತಾಪ್ ಸಿಂಹ ಅಸಮಾಧಾನ
ಮೈಸೂರು

ರಿಂಗ್ ರಸ್ತೆಯಲ್ಲಿ ಬಾರ್‍ಗಳಿಂದ ಅಪಘಾತ: ಸಂಸದ ಪ್ರತಾಪ್ ಸಿಂಹ ಅಸಮಾಧಾನ

July 4, 2018

ಮೈಸೂರು: ರಿಂಗ್ ರಸ್ತೆಯಲ್ಲಿ ತಲೆ ಎತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೈನ್ ಸ್ಟೋರ್‍ಗಳಿಂದ ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಸದ ಪ್ರತಾಪ್ ಸಿಂಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿನಕಲ್ ಬಳಿ ರಿಂಗ್ ರೋಡ್ ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಂಗ್ ರಸ್ತೆ ಇರುವುದು ಮೈಸೂರು ನಗರದ ವಾಹನ ದಟ್ಟಣೆ ತಪ್ಪಿಸುವುದಕ್ಕೆ. ಅಪಘಾತಗಳನ್ನು ನಿಯಂತ್ರಿಸಿ ಜನರ ಪ್ರಾಣ ಉಳಿಸಬೇಕೆಂಬ ಉದ್ದೇಶದಿಂದ ನಿರ್ಮಾಣವಾದ ರಿಂಗ್ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಇಲ್ಲಿ ಬಾರ್ ಮತ್ತು ವೈನ್ ಸ್ಟೋರ್‍ಗಳೂ ಹೆಚ್ಚಾಗಿರುವುದು ವಿಷಾದನೀಯ ಎಂದರು. ಬೆಳಿಗ್ಗೆಯಿಂದ ಮದ್ಯರಾತ್ರಿವರೆಗೂ ಬಾರ್ ಅಂಡ್ ರೆಸ್ಟೋ ರೆಂಟ್‍ಗಳು ತೆರೆದಿರುವುದರಿಂದ ಜನರು ಅಲ್ಲಿ ಮದ್ಯಪಾನ ಮಾಡಿ ಕಾರು, ದ್ವಿಚಕ್ರ ವಾಹನಗಳಲ್ಲಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಅಬಕಾರಿ ಇಲಾಖೆ ಅಧಿಕಾರಿಗಳು ಇಂತಹ ಬಾರ್‍ಗಳನ್ನು ತೆರವುಗೊಳಿಸ ಬೇಕು ಎಂದು ಒತ್ತಾಯಿಸಿದರು. ರಿಂಗ್ ರಸ್ತೆಯ 42 ಕಿ.ಮೀ. ಉದ್ದದ ರಸ್ತೆ ವಿಭಜಕ ಮತ್ತು ಸರ್ವಿಸ್ ರಸ್ತೆಗಳ ಬದಿಯಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗಿದೆ. ಆದರೆ ಭಾರೀ ವಾಹನಗಳು ಓಡಾಡುವುದರಿಂದ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಅವು ನಾಶವಾಗುತ್ತಿವೆ ಎಂದು ಅವರು ದೂರಿದರು.

Translate »