ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು
ಹಾಸನ

ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು

June 18, 2018

ಅರಸೀಕೆರೆ: ತಾಲೂಕಿನ ಬಾಣಾವರ ಜಿಪಂ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಬಿಳಿಚೌಡಯ್ಯ ಗೆಲುವು ಸಾಧಿಸಿದ್ದು, ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರ ಭದ್ರ ಕೋಟೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಕಳೆದ ವಿಧಾನ ಸಭಾ ಚುನಾವಣೆ ಪೂರ್ವ ದಲ್ಲಿ ನಡೆದ ನಾಟಕೀಯ ಬೆಳವಣ ಗೆಯಲ್ಲಿ ಹಾಸನ ಜಿಪಂನ ಬಾಣಾವರ ಕ್ಷೇತ್ರದ ಸದಸ್ಯರಾಗಿದ್ದ ಬಿ.ಎಸ್. ಅಶೋಕ್ ಕಾಂಗ್ರೆಸ್ `ಬಿ’ ಫಾರಂ ಬಹುತೇಕ ಖಚಿತ ಎಂಬ ಆಸೆಯೊಂದಿಗೆ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಪಂ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ದ್ದರು. ಆದರೆ ಅಶೋಕ್‍ಗೆ ಕಾಂಗ್ರೇಸ್ `ಬಿ’ ಫಾರಂ ಸಿಗಲಿಲ್ಲ. ಅತ್ತ ಜೆಡಿಎಸ್ ತೊರೆದು ಇದ್ದ ಜಿಪಂ ಸ್ಥಾನವನ್ನೂ ಕಳೆದುಕೊಂಡು ವಂಚಿತರಾಗಿ ರಾಜಕಾರಣ ಜೀವನದಲ್ಲಿ ಅತಂತ್ರರಾದರು.

ಇವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜೂ.14ರಂದು ಉಪಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಜೆಡಿಎಸ್‍ನಿಂದ ಬಿಳಿಚೌಡಯ್ಯ, ಕಾಂಗ್ರೆಸ್‍ನಿಂದ ಎಸ್‍ಎಸ್ ರಮೇಶ್, ಬಿಜೆಪಿ ಯಿಂದ ವಿರೂಪಾಕ್ಷಪ್ಪ, ಪಕ್ಷೇತರರಾಗಿ ಬಿ.ಎಸ್. ಗುರುಸಿದ್ದಪ್ಪ, ಹೊಳೆಯಪ್ಪ ನಾಮಪತ್ರ ಸಲ್ಲಿಸಿ ಕಣಕ್ಕಿಳಿದಿದ್ದರು. ಒಟ್ಟು 47 ಮತಗಟ್ಟಗಳಲ್ಲಿ ಮತ ದಾನ ನಡೆದು, ಭಾನುವಾರ ಸರ್ಕಾರಿ ಪದವಿ ಕಾಲೇಜಿನಲ್ಲಿ ಮತ ಏಣಿಕೆ ನಡೆಯಿತು. ಒಟ್ಟು 17,733 ಮತಗಳಲ್ಲಿ ಜೆಡಿಎಸ್‍ನ ಬಿಳಿಚೌಡಯ್ಯ 11,432 ಮತಗಳ ಪಡೆಯುವ ಮೂಲಕ ಭರ್ಜರಿ ಜಯಭೇರಿ ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ 3,679 ಮತ್ತು ಬಿಜೆಪಿ-2,337 ಮತಗಳನ್ನು ಪಡೆದಿದ್ದರೆ, ಉಳಿದೆರಡು ಅಭ್ಯರ್ಥಿಗಳು ಅತ್ಯಲ್ಪ ಅಂದರೆ 94, 86 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ. 105 ಮತಗಳು ನೋಟಾಗೆ ಚಲಾವಣೆಯಾಗಿವೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ್ದ ಜೆಡಿಎಸ್‍ನ ನೂರಾರು ಕಾರ್ಯಕರ್ತರು, ಬೆಂಬಲಿಗರು ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಕೆ.ಎಂ.ಶಿವಲಿಂಗೇಗೌಡ ಗೆದ್ದ ಅಭ್ಯರ್ಥಿಯನ್ನು ಅಭಿನಂದಿಸಿದರು.

Translate »