ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ
ಮೈಸೂರು

ಬಿ.ಎಂ.ರಾಮಚಂದ್ರ, ಹೆಚ್.ಬಿ.ಯಶೋಧಗೆ ಸಿಜಿಕೆ ರಂಗ ಪುರಸ್ಕಾರ

June 28, 2018

ಮೈಸೂರು: ಹಿರಿಯ ರಂಗಕರ್ಮಿಗಳಾದ ಬಿ.ಎಂ.ರಾಮಚಂದ್ರ ಹಾಗೂ ಹೆಚ್.ಬಿ.ಯಶೋಧ ಅವರಿಗೆ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್ ಹಾಗೂ ಚಿಂತಕ ಪ್ರೊ.ನಟರಾಜ್ ಹುಳಿಯಾರ್ ‘ಸಿಜಿಕೆ ರಂಗ ಪುರಸ್ಕಾರ’ ನೀಡಿ ಗೌರವಿಸಿದರು.
ಮೈಸೂರಿನ ಕಲಾಮಂದಿರ ಆವರಣದಲ್ಲಿ ನೆಲೆ ಹಿನ್ನೆಲೆ ವತಿಯಿಂದ ಆಯೋಜಿಸಿದ್ದ ಸಿಜಿಕೆ (ಸಿ.ಜಿ.ಕೃಷ್ಣಸ್ವಾಮಿ) ರಂಗ ಪುರಸ್ಕಾರ ಪ್ರಶಸ್ತಿಯನ್ನು ಬುಧವಾರ ನೀಡಿ ಗೌರವಿಸಿದರು.

ನಂತರ ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್(ಜನ್ನಿ) ಮಾತನಾಡಿ, ಕಲೆ ಎಂಬುದು ವಾಸ್ತವ. ರಂಗಭೂಮಿಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಲು ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ, ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ ಎಂದು ಹೇಳಿದರು.

ಚಲನಾ ಶಕ್ತಿ ಕಳೆದುಕೊಂಡಿದ್ದ ರಂಗಭೂಮಿಗೆ ಶಕ್ತಿ ನೀಡಿದವರು ಸಿಜಿಕೆ. ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗ ಮಾಡಿ, ಯುವಕರನ್ನು ರಂಗಭೂಮಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ, ಸಿಜಿಕೆ ಅವರ ವ್ಯಕ್ತಿತ್ವವು ಜನರ ಮಧ್ಯೆ ಮತ್ತು ಚಳವಳಿಗಳ ನಡುವೆ ಅರಳಿದೆ ಎಂದರು.

ಚಿಂತಕ ಪ್ರೊ.ನಟರಾಜ್ ಹುಳಿಯಾರ್ ಮಾತನಾಡಿ, ಸಿಜಿಕೆ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಬೀದಿ ನಾಟಕಗಳ ಮೂಲಕ ಆಳುವ ಸರ್ಕಾರದ ಗಮನಕ್ಕೆ ತರುತ್ತಿದ್ದರಲ್ಲದೆ, ಯುವಕರನ್ನು ರಂಗಭೂಮಿಗೆ ತರುವಲ್ಲಿ ಇವರ ಪಾತ್ರ ಪ್ರಮುಖವಾದುದು ಎಂದರು.

ಸಿಜಿಕೆ ಎಡಪಂಥೀಯ ಸಿದ್ಧಾಂತದ ಹಿನ್ನೆಲೆಯಿಂದ ಬಂದವರಾದರೂ ರಂಗದ ಮೇಲೆ ಎಲ್ಲಾ ಸಿದ್ಧಾಂತಗಳಿಗೂ ಸಮಾನ ಅವಕಾಶ ನೀಡುತ್ತಿದ್ದರು. ಜತೆಗೆ ಎಲ್ಲಾ ರಾಜಕೀಯ ಪಕ್ಷಗಳ ಸಿದ್ಧಾಂತಗಳ ಒಳಸುಳಿಗಳ ಸೂಕ್ಷ್ಮತೆ ಗ್ರಹಿಸಿ, ತೆರೆಯ ಮೇಲೆ ಪ್ರಯೋಗ ವಿಶೇಷವಾಗಿತ್ತು ಎಂದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಡಿ.ರಾಜಣ್ಣ, ದಲಿತ ಮುಖಂಡ ಗುರುಪ್ರಸಾದ್ ಕೆರಗೋಡು ಇದ್ದರು. ನಂತರ ಬೆಲ್ಚಿ ಬೀದಿನಾಟಕ ಪ್ರದರ್ಶಿಸಿದರು.

Translate »