ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿ ಸಮಗ್ರ ಅಭಿವೃದ್ಧಿ
ಮೈಸೂರು

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ಸನ್ನಿಧಿ ಸಮಗ್ರ ಅಭಿವೃದ್ಧಿ

February 23, 2019

ಮೈಸೂರು: ಕೇಂದ್ರ ಸರ್ಕಾರದ ಪ್ರವಾ ಸೋದ್ಯಮ ಸಚಿವಾಲಯದ ಪ್ರಸಾದ್ (Pilgrimage Rejuvenation and Spiritual Augmentation Drive) ಯೋಜನೆಯಡಿ ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ಸಂಸದ ಪ್ರತಾಪ್ ಸಿಂಹ ಅವರ ಪ್ರಯತ್ನದಿಂದಾಗಿ ಪ್ರಸಾದ ಯೋಜನೆಯಡಿ ಮೈಸೂರಿಗೆ 100 ಕೋಟಿ ರೂ. ಯೋಜನೆ ಮಂಜೂರಾಗಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರು ಚಾಮುಂಡಿಬೆಟ್ಟ ಹಾಗೂ ಶ್ರೀ ಚಾಮುಂಡೇ ಶ್ವರಿ ದೇವಸ್ಥಾನವನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಯೋಜನೆ ರೂಪುರೇಷೆ ತಯಾರಿಸುತ್ತಿದ್ದಾರೆ. ಯೋಜನೆ ಅನುಷ್ಠಾನ ಗೊಳಿಸಲು ಐಡೆಕ್ (Infrastructure Development Corporation for Karnataka) ಸಂಸ್ಥೆಯಿಂದ ಕ್ರಿಯಾ ಯೋಜನೆ (Action Plan) ತಯಾರಿಸಲಾಗಿದೆ. ಈ ಕುರಿ ತಂತೆ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾ ಸೋದ್ಯಮ ಸಚಿವ ಸಾ.ರಾ. ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘ ಚರ್ಚೆ ನಡೆಸಿದರು. ಪ್ರವಾಸಿಗರಿಗೆ ಅನುಕೂಲಕರ ಯೋಜ ನೆಗಳ ಬಗ್ಗೆ ಐಡೆಕ್ ಸಂಸ್ಥೆಯ ಪ್ರತಿನಿಧಿಗಳು ಪವರ್ ಪಾಯಿಂಟ್ ಮೂಲಕ ಜನಪ್ರತಿನಿಧಿಗಳಿಗೆ ಪ್ರಸ್ತುತಪಡಿಸಿದರು.

ಲ್ಯಾಂಡ್ ಸ್ಕೇಪಿಂಗ್: ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಲ್ಯಾಂಡ್ ಸ್ಕೇಪಿಂಗ್ ಮಾಡಿ ಗ್ರೀನರಿ ನಿರ್ವ ಹಣೆ, ಶುದ್ಧ ಕುಡಿಯುವ ನೀರು, ಹೈಟೆಕ್ ಶೌಚಾಲಯ, ಮಹಿಷಾಸುರ ಪ್ರತಿಮೆ ವೃತ್ತ ಅಭಿವೃದ್ಧಿ ಮತ್ತು ಸೌಂದರ್ಯೀ ಕರಣದೊಂದಿಗೆ ಎಲ್ಲಾ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ಬೆಟ್ಟದ ಪಾದದಿಂದ ದೇವಸ್ಥಾನ ದವರೆಗೆ ಮೆಟ್ಟಿಲು ಹತ್ತುವವರಿಗೆ ಅನುಕೂಲವಾಗುವಂತೆ ಇಕ್ಕೆಲಗಳಲ್ಲಿ ಸ್ಟೀಲ್ ರೇಲಿಂಗ್ಸ್ ಅಳವಡಿಸುವುದು, ವಿಶ್ರಾಂತಿಗಾಗಿ ಅಲ್ಲಲ್ಲಿ ಬೆಂಚ್‍ಗಳು, ಶೌಚಾಲಯ, ಸಿಸಿ ಕ್ಯಾಮರಾ ಅಳವಡಿಸಲು ಸಿದ್ಧತೆ ಮಾಡಲಾಗಿದೆ.

ನಂದಿ, ವ್ಯೂ ಪಾಯಿಂಟ್: ಪ್ರವಾಸಿಗರು ಸರಾಗವಾಗಿ ಓಡಾಡಲು ಅನುಕೂಲ ವಾಗುವ ಹಾಗೆ ನಂದಿ ಬಳಿ ಸರ್ಕಲ್ ಹಾಗೂ ವ್ಯೂ ಪಾಯಿಂಟ್ ಸರ್ಕಲ್‍ಗಳನ್ನು ಅಭಿವೃದ್ಧಿಪಡಿಸಲು ಪ್ರಸಾದ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

ದೇವಿಕೆರೆ ಅಭಿವೃದ್ಧಿ: ಪುರಾತನ ದೇವಿ ಕೆರೆಯ ಸುತ್ತಲಿನ ಕಟ್ಟೆಯನ್ನು ಅಭಿವೃದ್ಧಿಪಡಿಸಿ ರಾತ್ರಿ ವೇಳೆ ವಿದ್ಯುದ್ದೀಪಾಲಂಕಾರಗಳಿಂದ ಕಂಗೊಳಿಸುವಂತೆ ಮಾಡುವುದು, ಚಾಮುಂಡಿ ಬೆಟ್ಟದ ಪ್ರವೇಶ ಗೋಪುರಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ.

ಮ್ಯೂಸಿಯಂ, ಕಮಾಂಡ್ ಸೆಂಟರ್: ಚಾಮುಂಡಿಬೆಟ್ಟದ ತಪ್ಪಲಿನ 22 ಎಕರೆ ಸರ್ಕಾರಿ ಜಾಗದಲ್ಲಿ ಮ್ಯೂಸಿಯಂ ಮಾಡಿ ಅಲ್ಲಿ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳ ಸಂಗ್ರಹಾಲಯ ಸ್ಥಾಪಿಸಿ ಪ್ರವಾಸಿ ತಾಣಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸು ವುದು. ಅಲ್ಲಿ ಸಾರ್ವಜನಿಕ ವಾಹನಗಳ ನಿಲುಗಡೆ ಮಾಡಿ, ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಸಂಚಾರ ನಿಷೇಧಿಸಿ, ತಪ್ಪಲಿಂದ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನ ವ್ಯವಸ್ಥೆ ಮಾಡಲು ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಕಮಾಂಡ್ ಸೆಂಟರ್: ಚಾಮುಂಡಿಬೆಟ್ಟ, ನಂದಿ, ವ್ಯೂ ಪಾಯಿಂಟ್‍ಗಳಲ್ಲಿ ಅಳವಡಿ ಸಿರುವ ಸಿಸಿ ಕ್ಯಾಮರಾಗಳ ಕಮಾಂಡ್ ಸೆಂಟರ್ ನಿರ್ಮಿಸಿ, ತೀವ್ರ ನಿಗಾ ವಹಿಸುವುದು, ಇಂಟಿಗ್ರೇಟೆಡ್ ಇಂಟರ್‍ಪ್ರಿಟೇಷನ್ ಸೆಂಟರ್ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಡ್ಗಿಚ್ಚು ತಡೆಯಿರಿ: ಬೆಟ್ಟದಲ್ಲಿ ಆಗಿಂದಾಗ್ಗೆ ಬೆಂಕಿ ಉಂಟಾಗಿ ಅಮೂಲ್ಯ ಅರಣ್ಯ ನಾಶವಾಗುತ್ತಿರುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಯೋಜನೆ ರೂಪಿಸಿ ಮಳೆ ನೀರು ಹರಿದು ಹೋಗದಂತೆ ತಡೆಯಲು ಅಲ್ಲಲ್ಲಿ ಚೆಕ್‍ಡ್ಯಾಂ ನಿರ್ಮಿಸಿ ಅಂತರ್ಜಲ ಹೆಚ್ಚಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಲಹೆ ನೀಡಿದರು.

ಅಕ್ರಮ ಮನೆ ತೆರವುಗೊಳಿಸಿ: ಚಾಮುಂಡಿಬೆಟ್ಟದ ಮೇನ್ ರಸ್ತೆಯಲ್ಲೇ ಸರ್ಕಾರಿ ಜಾಗದಲ್ಲೇ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಮನೆಗಳನ್ನು ತೆರವುಗೊಳಿಸಿ ಎಂದು ಸಚಿವ ಸಾ.ರಾ. ಮಹೇಶ್ ಜಿಪಂ ಸಿಇಓ ಕೆ.ಜ್ಯೋತಿ ಅವರಿಗೆ ಸೂಚನೆ ನೀಡಿದರು.

ಫೆ. 28ಕ್ಕೆ ಪ್ರಸ್ತಾವನೆ: ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಯೋಜನೆ ಕುರಿತು 50 ಕೋಟಿ ರೂ.ಗಳ ಡಿಪಿಆರ್ ಅನ್ನು ಕೇಂದ್ರದ ಪ್ರವಾಸೋದ್ಯಮ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಂಡು ಶೀಘ್ರ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಸ್ಥಳ ಪರಿಶೀಲನೆ: ನಾಳೆ (ಫೆ. 23) ಬೆಳಿಗ್ಗೆ 6.30 ಗಂಟೆಗೆ ಸಚಿವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚಾಮುಂಡಿಬೆಟ್ಟದ ಪಾದದಿಂದ ಪರಿಶೀಲನೆ ನಡೆಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಸಿಇಓ ಕೆ. ಜ್ಯೋತಿ, ಪಾರಂಪರಿಕ ಆಯುಕ್ತ ಟಿ. ವೆಂಕಟೇಶ, ಮುಡಾ ಆಯುಕ್ತ ಪಿ.ಎಸ್. ಕಾಂತರಾಜು, ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಉಪ ವಿಭಾಗಾಧಿಕಾರಿ ಶಿವೇಗೌಡ, ತಹಸೀಲ್ದಾರ್ ಟಿ.ರಮೇಶ್‍ಬಾಬು, ಚಾಮುಂಡೇಶ್ವರಿ ದೇವಸ್ಥಾನದ ಎಕ್ಸಿಕ್ಯೂಟಿವ್ ಆಫೀಸರ್ ಪ್ರಸಾದ್, ಮುಡಾ ಸೂಪರಿಂಟೆಂಡಿಂಗ್ ಇಂಜಿನಿಯರ್ ಬಿ.ಕೆ. ಸುರೇಶ್ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »