ಪಾಂಡವಪುರ: ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಂದ ಬೆಳೆದ ಕೆಲ ಸ್ವಾರ್ಥಿಗಳು ಇಂದು ಅವರ ಕೈ ಕಡಿಯುವ ನಿಟ್ಟಿನಲ್ಲಿ ನನ್ನನ್ನು ಸೋಲಿಸಲು ಇನ್ನಿಲ್ಲದ ಕುತಂತ್ರ ನಡೆಸಿದ್ದಾರೆ. ಆದರೆ ಈ ಧರ್ಮ ಯುದ್ಧದಲ್ಲಿ ಪುಟ್ಟರಾಜುನನ್ನು ಉಳಿಸಿಕೊಳ್ಳುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬಾವುಕರಾಗಿ ನುಡಿದರು.
ಪಟ್ಟಣದ ತಮ್ಮ ನಿವಾಸದ ಮುಂಭಾಗದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ನನ್ನ ತಂದೆ ಸಣ್ಣತಮ್ಮೇಗೌಡರು ದೈಹಿಕವಾಗಿ ಜನ್ಮ ನೀಡಿದರೆ ಹೆಚ್.ಡಿ.ದೇವೇಗೌಡರು ನನ್ನನ್ನು ಒಬ್ಬ ಜನನಾಯಕನಾಗಿ ಜನ್ಮ ನೀಡಿದ್ದಾರೆ. ಅವರು ನೀಡಿದ ರಾಜಕೀಯ ಶಕ್ತಿಯಿಂದ ಅಭಿವೃದ್ಧಿ ಕೆಲಸಗಳನ್ನು ಸಾಧಿಸಿದ್ದೇನೆ. ಗೌಡರು ಈ ಭಾಗದ ರೈತರಿಗೆ ಅನುಕೂಲವಾಗಲೆಂದು ಪಿಎಸ್‍ಎಸ್‍ಕೆ ಕಾರ್ಖಾನೆ ಸಾಲ ತೀರಿಸಿ ಕಾರ್ಖಾನೆ ಬಾಗಿಲು ತೆರೆಸಿದರು. ಆದರೆ, ನನಗೆ ಹೆಸರು ಬರುತ್ತದೆಂಬ ದುರ್ಬುದ್ಧಿಯಿಂದ ವಿರೋಧಿಗಳು ಕೆಲವೇ ದಿನಗಳಲ್ಲಿ ಅದರ ಬಾಗಿಲು ಹಾಕಿಸಿದರು. ಇದೇ ಪಾಂಡವಪುರಕ್ಕೆ ನಾನು ಮಂಜೂರು ಮಾಡಿಸಿಕೊಂಡು ಬಂದಿದ್ದ ಒಳಚರಂಡಿ ಕೆಲಸವನ್ನೂ ತಡೆದು ಪಟ್ಟಣದ ಜನತೆ ಮೂಗು ಮುಚ್ಚಿಕೊಂಡು ಓಡಾಡುವಂತೆ ಮಾಡಿದ್ದವರು ನನ್ನ ವಿರುದ್ಧ ಏನೆಲ್ಲ ಕುತಂತ್ರ ಮಾಡಿದರು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಗಳು ಯಾವ ಮಟ್ಟಕ್ಕೆ ನಡೆದಿವೆ ಎಂಬುದು ಜನತೆಗೆ ತಿಳಿದಿದೆ. ಇಂಥಹ ಸಾಧನೆ ಮಾಡಿದ್ದಕ್ಕೆ ಈ ಕಾಂಗ್ರೆಸ್‍ಗೆ ಜನ ಮತಹಾಕಬೇಕೇ ಎಂದು ಪ್ರಶ್ನಿಸಿದರು.
ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಂಡ್ಯ ರೈತರು ಬೆಳೆ ಬೆಳೆಯಲು ನೀರು ಬಿಡುವ ನಿರ್ಧಾರ ಮಾಡಿ ನೀರು ಬಿಟ್ಟರು. ಆದರೆ, ಸಿಎಂ ಸಿದ್ದರಾಮಯ್ಯ ರೈತ ಬೆಳೆ ಹಾಕಿದ ಬಳಿಕ ನೀರು ನಿಲ್ಲಿಸಿ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಈ ಕೂಡಲೇ ನಾಲೆಗಳಿಗೆ ನೀರು ಹರಿಸದಿದ್ದರೆ ಸಿಎಂ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಕಾಲಿಡಲು ನಾನು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಕಳೆದ ಬಾರಿ ಚುನಾವಣೆಯಲ್ಲಿ ನಾನು ಸೋತರೂ ಪಾಂಡವಪುರದ ಮತದಾರರು ಅತೀ ಹೆಚ್ಚಿನ ಲೀಡ್ ನೀಡಿದ್ದರು ಎಂದು ಕೃತಜ್ಞತೆಯಿಂದ ಸ್ಮರಿಸಿದ ಅವರು, ಇದೀಗ ಇಡೀ ಕ್ಷೇತ್ರದ ಎಲ್ಲ ಜಿಪಂ ಕ್ಷೇತ್ರಗಳಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಜನತೆ ನನ್ನ ಮೇಲೆ ಅತ್ಯಂತ ಪ್ರೀತಿ ವಿಶ್ವಾಸವಿರಿಸಿದ್ದಾರೆ. ಅವರ ವಿಶ್ವಾಸಕ್ಕೆ ನಾನೆಂದೂ ಚ್ಯುತಿ ತರುವುದಿಲ್ಲ. ನನ್ನ ರಾಜಕೀಯ ಜೀವನದಲ್ಲೇ ಇಷ್ಟೊಂದು ಭಾರೀ ಸಂಖ್ಯೆಯ ಜನರು ನನ್ನನ್ನು ಬೆಂಬಲಿಸಿ ಬಂದಿರುವುದಕ್ಕೆ ನಾನು ಆಭಾರಿಯಾಗಿದ್ದೇನೆಂದು ಬಾವುಕರಾಗಿ ನುಡಿದರು.
ಮೇ.18ರಂದು ಮಾಜಿ ಪ್ರಧಾನಿ ದೇವೇಗೌಡರ ಜನ್ಮದಿನ. ಅಂದು ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತ ಎಂದರು.
ಇದೇ ವೇಳೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಜೀರ್ ಅಹಮದ್, ಮುಸ್ಲಿಂ ಸಮುದಾಯದ ಮುಖಂಡ ಅಮೀರ್‍ಖಾನ್ ಸೇರಿದಂತೆ ನೂರಾರು ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಅವರಿಂದ ಪಕ್ಷದ ಟವಲ್ ಹಾಕಿಸಿಕೊಳ್ಳುವ ಮೂಲಕ ಕಾಂಗ್ರೆಸ್-ರೈತಸಂಘ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ಸಮಾವೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಅನಿತಾ ಕುಮಾರಸ್ವಾಮಿ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಲಕ್ಷ್ಮಿಅಶ್ವಿನ್‍ಗೌಡ, ಜಿಪಂ ಮಾಜಿ ಅಧ್ಯಕ್ಷ ಅಣ್ಣೇಗೌಡ, ಜೆಡಿಎಸ್ ಪರಿಶಿಷ್ಟ ವಿಭಾಗದ ಎಂ.ಬಿ.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ಏಜಾಜ್ ಅಲಿಖಾನ್, ಎ.ಆರ್.ನಾಸಿರ್, ಹಿಂದುಳಿದ ವರ್ಗಗಳ ಅಧ್ಯಕ್ಷ ಅಮರ್‍ನಾಥ್, ಉದ್ಯಮಿ ಅರವಿಂದ್ ರಾಘವನ್, ಜಿಪಂ ಸದಸ್ಯರಾದ ತಿಮ್ಮೇಗೌಡ, ಸಿ.ಅಶೋಕ್, ವಕೀಲ ಪುಟ್ಟೇಗೌಡ, ಎಚ್.ಎಲ್.ಸ್ವಾಮಿಗೌಡ, ಎಂ.ಸಂತೋಷ್, ಜಾ.ದಳ ತಾಲ್ಲೂಕು ಅಧ್ಯಕ್ಷ ಧರ್ಮರಾಜು, ಪೈಲ್ವಾನ್ ಮುಕುಂದ, ವೀರಶೈವ ಮುಖಂಡರಾದ ಮಲ್ಲೇಶ್, ದೇವಪ್ಪ ಮತ್ತಿತರರಿದ್ದರು.
ಭಾರೀ ಜನಸ್ತೋಮ: ಸಿಎಸ್‍ಪಿಗೆ ಅಭಿಮಾನಿಗಳಿಗೆ ಸೇಬಿನ ಹಾರದ ಸ್ವಾಗತ
ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಪಟ್ಟಣದ ಮಹಾಕಾಳೇಶ್ವರಿ ದೇವಾಲಯದಲ್ಲಿ ಬೆಳಿಗ್ಗೆ 10.30ಕ್ಕೆ ಕುಟುಂಬ ಸಮೇತ ವಿಶೇಷ ಪೂಜೆ ಸಲ್ಲಿಸಿ ಬೃಹತ್ ಮೆರವಣ ಗೆ ಮೂಲಕ ಮಿನಿವಿಧಾನಸೌಧಕ್ಕೆ ತೆರಳಿದರು. ಈ ಸಂದರ್ಭ ಹಾದಿಯುದ್ದಕ್ಕೂ ನೆರೆದಿದ್ದ ಅಭಿಮಾನಿಗಳು, ಕಾರ್ಯಕರ್ತರು ತೆರೆದ ವಾಹನದಲ್ಲಿ ಆಗಮಿಸಿದ ನೆಚ್ಚಿನ ನಾಯಕ ಪುಟ್ಟರಾಜು ಅವರಿಗೆ ಜೆಸಿಬಿ ಯಂತ್ರದ ಮೇಲೆ ನಿಂತು ಪುಷ್ಪ ವೃಷ್ಠಿಗರೆದು, ನೂರು ಕೆಜಿ ತೂಕದ ಸೇಬಿನ ಹಾರದೊಂದಿಗೆ ಸ್ವಾಗತಿಸಿದರು.
ಬಳಿಕ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಪುಟ್ಟರಾಜು ಅವರು ತಮ್ಮ ಪತ್ನಿ ನಾಗಮ್ಮ, ಪುತ್ರ ಶಿವರಾಜು, ವಕೀಲ ಕೆ.ಪುಟ್ಟೇಗೌಡ ಹಾಗೂ ನಾಗಣ್ಣ ಅವರೊಂದಿಗೆ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ಅಲ್ಲಿಂದ ಹೊರಗೆ ಬರುತ್ತಿದ್ದಂತೆ ದುದ್ದ, ಹೊಳಲು, ಚಿನಕುರುಳಿ, ಕ್ಯಾತನಹಳ್ಳಿ, ಜಕ್ಕನಹಳ್ಳಿ ಹೋಬಳಿ ಸೇರಿದಂತೆ ಇಡೀ ಕ್ಷೇತ್ರದ ಮೂಲೆಮೂಲೆಗಳಿಂದ ಆಗಮಿಸಿದ್ದ ಸುಮಾರು 50 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ನೆರೆದಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ ಹರ್ಷೋದ್ಘಾರದಿಂದ ಕುಣ ದು ಕುಪ್ಪಳಿಸಿದರು. ನಗಾರಿ, ತಮಟೆ, ಡೊಳ್ಳುಕುಣ ತ, ಪೂಜಾ ಕುಣ ತ, ನಂದಿಕಂಬ, ಗಾರುಡಿಗೊಂಬೆ ಮತ್ತಿತರ ಜನಪದ ಕಲಾತಂಡದೊಂದಿಗೆ ಹೊರಟ ಮೆರವಣ ಗೆಯಲ್ಲಿ ಪುಟ್ಟರಾಜು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು.
ದೇವೇಗೌಡರ ಪಾಲಿಗೆ ಮಂಡ್ಯವೇ ಶಕ್ತಿ ಕೇಂದ್ರ
ಪುಟ್ಟರಾಜು ಗೆಲ್ಲಿಸಿ ಗೌಡರಿಗೆ ಬಲನೀಡಿ: ಅನಿತಾಕುಮಾರಸ್ವಾಮಿ ಮನವಿ
ಪಾಂಡವಪುರ: ಸಮಾವೇಶ ಉದ್ಘಾಟಿಸಿ ಮಾತನಾಡಿದ ಅನಿತಾಕುಮಾರಸ್ವಾಮಿ ಅವರು, ದೇವೇಗೌಡರಿಗೆ ಹಾಸನ ತವರಾದರೂ ಅವರಿಗೆ ಮಂಡ್ಯ ಒಂದು ಶಕ್ತಿ ಕೇಂದ್ರವಿದ್ದಂತೆ. ಪುಟ್ಟರಾಜು ಅವರು ದೇವೇಗೌಡರಿಗೆ ಮಾನಸ ಪುತ್ರ. ಕುಮಾರಸ್ವಾಮಿಗೆ ಸಹೋದರನಾದರೆ, ನನಗೆ ಮೈದುನ. ಹಾಗಾಗಿ ಅವರು ಪಕ್ಷಕ್ಕೆ ನಿಷ್ಠರಾಗಿರುವಂತೆ ನಮ್ಮ ಕುಟುಂಬಕ್ಕೂ ನಿಷ್ಠರಾಗಿದ್ದಾರೆ. ಅವರನ್ನು ಗೆಲ್ಲಿಸಿದರೆ ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಗೆಲ್ಲಿಸಿದಂತೆ ಎಂದು ಹೇಳಿದರು.
ಪುಟ್ಟರಾಜು ಅವರು ಜನಸಾಮಾನ್ಯರ ಕಷ್ಟಸುಖಗಳಿಗೆ ಸ್ಪಂದಿಸುವ ಸರಳವ್ಯಕ್ತಿ. ಇಂಥವರು ಜನನಾಯಕರಾಗಬೇಕು. ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಆಡಳಿತದಲ್ಲಿ ಮಾಡಿದ ಕೆಲಸವನ್ನೂ ನೋಡಿದ್ದೀರಿ, ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತವನ್ನೂ ನೋಡಿದ್ದೀರಿ. ಹೀಗಿರುವಾಗ ಸ್ವಾಭಿಮಾನದ ಆಡಳಿತ ನೀಡಲು ಕುಮಾರಸ್ವಾಮಿಯವರು ಮತ್ತೆ ಮುಖ್ಯಮಂತ್ರಿಯಾಗಬೇಕಿದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಸಿ.ಎಸ್.ಪುಟ್ಟರಾಜು ಅವರನ್ನು ಹೆಚ್ಚು ಮತಗಳ ಲೀಡ್‍ನಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.