ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಣೆ ಮಾಡುವುದು ಅವಶ್ಯ

February 12, 2019

ಮೈಸೂರು: ಮೈಸೂರಿನ ಪಾರಂಪರಿಕ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಸಂರಕ್ಷಣೆ ಮಾಡ ಬೇಕೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಿಸಿದ್ದಾರೆ.

ಖಾಸಗಿ ಅರಮನೆಯಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಕೆಡವಿ, ಮರು ನಿರ್ಮಾಣ ಮಾಡಲು ನಗರ ಪಾಲಿಕೆ ಕೈಗೊಂಡಿರುವ ತೀರ್ಮಾನದ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಆದರೆ ಈ ಕಟ್ಟಡಗಳು ಭಾವನಾತ್ಮಕ ಕುರುಹುಗಳಾಗಿವೆ.

ವೈಸರಾಯ್ ಲ್ಯಾನ್ಸ್‍ಡೌನ್ ಅವರ ಹೆಸರಿನಲ್ಲಿ ಲ್ಯಾನ್ಸ್‍ಡೌನ್ ಕಟ್ಟಡವನ್ನು ನಿರ್ಮಿಸಲಾಗಿದೆ. ಹಾಗೆಯೇ ಚಾಮರಾಜ ಒಡೆಯರ್ ಅವರ ಪುತ್ರ ದೇವರಾಜ ಒಡೆಯರ್ ಹೆಸರನ್ನು ಮಾರುಕಟ್ಟೆ ಕಟ್ಟಡಕ್ಕೆ ನಾಮ ಕರಣ ಮಾಡಿದ್ದಾರೆ. ಇನ್ನೂ ಸದೃಢವಾಗಿರುವ ಈ ಕಟ್ಟಡಗಳನ್ನು ಪುನರುಜ್ಜೀವನಗೊಳಿಸಿ, ಸಂರಕ್ಷಣೆ ಮಾಡಬೇಕು. ತಜ್ಞರ ಅಭಿಪ್ರಾಯವೂ ಇದೇ ಆಗಿದೆ ಎಂದು ತಿಳಿಸಿದರು. ಅರಮನೆಯೂ ಮಹಾ ಸಂಸ್ಥಾನದ ಕಾಲದಲ್ಲೇ ನಿರ್ಮಾಣವಾಗಿರುವುದು. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ನೂರಾರು ಪಾರಂಪರಿಕ ಕಟ್ಟಡಗಳು, ಪುರಾತತ್ವ ಸ್ಥಳಗಳಿವೆ. ಇವೆಲ್ಲವನ್ನೂ ಸಂರಕ್ಷಿಸಿಕೊಳ್ಳುವ ಕಾರ್ಯ ವಾಗಬೇಕು. ಮೈಸೂರಿಗೆ ಬರುವಾಗ `ಸಾಂಸ್ಕøತಿಕ ನಗರಿಗೆ ಸ್ವಾಗತ’ ಎಂಬ ಫಲಕವನ್ನು ಕಾಣುತ್ತೇವೆ. ಹೀಗೆ ಪಾರಂಪರಿಕ ಕಟ್ಟಡಗಳನ್ನು ಕೆಡವಿದರೆ, ಸಾಂಸ್ಕøತಿಕ ನಗರಿ ಎಂದು ಹೇಳಿ ಕೊಳ್ಳಲು ಏನೂ ಉಳಿಯುವುದಿಲ್ಲ. ಜೈಪುರ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಕುಸಿ ಯುವ ಹಂತದಲ್ಲಿದ್ದ ಕಟ್ಟಡಗಳನ್ನು ಉಳಿಸಿಕೊಂಡು ವಿವಿಧ ವಾಣಿಜ್ಯ ಚಟುವಟಿಕೆಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ ಮೈಸೂರಿನ ಲ್ಯಾನ್ಸ್‍ಡೌನ್ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡಗಳನ್ನು ಸಂರಕ್ಷಣೆ ಮಾಡಿಕೊಳ್ಳ ಬೇಕು. ಈ ಸಂಬಂಧ ಇನ್ನೂ ಚರ್ಚೆಯಾಗಬೇಕು. ಸರ್ಕಾರ ಬಯಸಿದರೆ ಸಹಕಾರ ನೀಡಲು ಅರಮನೆ ಸಿದ್ಧವಾಗಿದೆ. ಸಾರ್ವಜನಿಕರು, ತಜ್ಞರು, ಕಟ್ಟಡಗಳ ವ್ಯಾಪಾರಿ ಸಂಘದವರ ಅಭಿಪ್ರಾಯ ಪಡೆಯು ವುದು ಉತ್ತಮ ಎಂದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ನಿಟ್ಟಿನಲ್ಲಿ ನಾವು ಸರ್ಕಾರದ ಜೊತೆಯಲ್ಲೇ ಮುಂದುವರೆಯಬೇಕು. ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕೆಂಬ ಭಾವನೆ ಜನರಲ್ಲಿದೆ. ಇದಕ್ಕೆ ಸರ್ಕಾರದ ಸಹಕಾರ ಅಗತ್ಯವಾಗಿ ಬೇಕು. ಈ ಎರಡೂ ಕಟ್ಟಡಗಳನ್ನು ಪುನರುಜ್ಜೀವ ಗೊಳಿಸಬೇಕೆಂದು ಅಭಿಪ್ರಾಯಿಸಿರುವ ತಜ್ಞರ ಸಮಿತಿ, ಯಾವ ವಿಧಾನದಲ್ಲಿ ಈ ಕಾರ್ಯ ಮಾಡಬೇಕೆಂಬುದರ ಬಗ್ಗೆಯೂ ವಿವರವಾಗಿ ತಿಳಿಸಿದ್ದಾರೆ. ಅರಮನೆ ವತಿಯಿಂದ ತರಿಸಿಕೊಳ್ಳಲಾಗಿರುವ ತಜ್ಞರ ವರದಿಯಲ್ಲೂ, ಕಟ್ಟಡಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡು ಬಳಕೆಗೆ ಅವಕಾಶ ನೀಡಬಹು ದೆಂದು ಸೂಚಿಸಿದ್ದಾರೆ. ಕಟ್ಟಡಗಳನ್ನು ಸಮರ್ಪಕ ರೀತಿಯಲ್ಲಿ ಸಂರಕ್ಷಣೆ ಮಾಡುವ ಅನೇಕ ಸಂಸ್ಥೆಗಳಿವೆ ಎಂದು ತಿಳಿಸಿದ ಯದುವೀರ್, ಪಾರಂಪರಿಕ ಕಟ್ಟಡಗಳ ನಿರ್ವ ಹಣೆ ಕಷ್ಟ. ಹಾಗಾಗಿ ಈ ರೀತಿಯ ಕಟ್ಟಡಗಳ ಪಟ್ಟಿ ಮಾಡಿ, ಸಂರಕ್ಷಣೆ ಹಾಗೂ ನಿರ್ವಹಣೆಗೆ ಸರ್ಕಾರದ ನೆರವು ಕೇಳಬೇಕಾಗುತ್ತದೆ. ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳ ಸಂಬಂಧ ಈವರೆಗೂ ಯಾರೂ ನನ್ನೊಂದಿಗೆ ಮಾತನಾಡಿಲ್ಲ. ಚರ್ಚೆಗೆ ಬಂದರೆ ನಾವು ಸಿದ್ಧರಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Translate »