ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್  ಹೆಸರಲ್ಲಿ ಬೆಂಗಳೂರು ವ್ಯಕ್ತಿಗೆ ಲಕ್ಷ ರೂ. ವಂಚನೆ
ಕೊಡಗು

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್  ಹೆಸರಲ್ಲಿ ಬೆಂಗಳೂರು ವ್ಯಕ್ತಿಗೆ ಲಕ್ಷ ರೂ. ವಂಚನೆ

November 6, 2018

ಮಡಿಕೇರಿ: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರ ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ 1.01 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಮಡಿಕೇರಿಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾಗಿದ್ದು 3 ಜನರ ತಂಡ ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಶಂಕೆ ವ್ಯಕ್ತಗೊಂಡಿದೆ. ಈ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಬೆಂಗಳೂರಿನ ಬನಶಂಕರಿ ನಿವಾಸಿ ಮೂಲತಃ ಮದ್ದೂರು ಗ್ರಾಮದವರಾದ ಲಿಂಗೇಗೌಡ ಎಂಬುವರು ಕುಶಾಲನಗರದಲ್ಲಿ 7 ಎಕರೆ ಭೂಮಿ ಹೊಂದಿದ್ದರು. ಈ ಭೂಮಿಯ ಭೂ ಪರಿವರ್ತನೆ ಮಾಡಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ 7 ಎಕರೆ ಭೂಮಿಯ ಭೂ ಪರಿವರ್ತನೆಯಾಗಿ ಕಡತಗಳು ಸಿದ್ಧಗೊಂಡಿದ್ದವು. ಈ ಹಿನ್ನೆಲೆಯಲ್ಲಿ ದಾಖಲೆ ಪಡೆದುಕೊಳ್ಳಲು ಲಿಂಗೇಗೌಡ ಅವರು ನ.3 ರಂದು ಕುಶಾಲನಗರಕ್ಕೆ ಆಗಮಿಸಿ, ರಾತ್ರಿ ಅಲ್ಲಿಯೇ ವ್ಯಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ನವೆಂಬರ್ 4 ರಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಲಿಂಗೇ ಗೌಡ ಅವರನ್ನು ವ್ಯಕ್ತಿಯೊಬ್ಬ ಬಂದ ಕಾರಣವನ್ನು ವಿಚಾರಿಸಿದ್ದಾನೆ. ಈ ಸಂದರ್ಭ ಲಿಂಗೇಗೌಡ ಭೂ ದಾಖಲೆ ಪಡೆಯಲು ಬಂದಿರುವುದಾಗಿ ಮಾಹಿತಿ ನೀಡಿ ದಾಗ, ನಿಮ್ಮ ಭೂ ದಾಖಲೆಗಳನ್ನು ನಾನೇ ಸಿದ್ಧಪಡಿ ಸಿರುವುದಾಗಿ ತಿಳಿಸಿದ ಆ ವ್ಯಕ್ತಿ, ತನ್ನನ್ನು ‘ಕೇಸ್ ವರ್ಕರ್’ ಗಿರೀಶ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಭೂ ಪರಿವರ್ತನೆಗೆ 1 ಲಕ್ಷ ರೂಪಾಯಿ ಶುಲ್ಕ ಪಾವತಿ ಮಾಡ ಬೇಕಿದ್ದು, ಹೆಚ್ಚುವರಿ 1 ಸಾವಿರ ಹಣವನ್ನು ಕಚೇರಿಯ ಇತರ ಸಿಬ್ಬಂದಿಗಳಿಗೆ ನೀಡಬೇಕಿದೆ ಎಂದು ತಿಳಿಸಿದ್ದಾನೆ.

ಮಾತ್ರವಲ್ಲದೆ ಈ ನಡುವೆ ಬೇರೊಬ್ಬ ವ್ಯಕ್ತಿಗೆ ಫೋನ್ ಮಾಡಿ ಸಚಿವ ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿಯೊಂದಿಗೆ ಮಾತನಾಡಿ ಎಂದು ಮೊಬೈಲನ್ನು ಲಿಂಗೇಗೌಡರಿಗೆ ನೀಡಿದ್ದಾನೆ. ದೂರವಾಣಿಯಲ್ಲಿ ಮಾತ ನಾಡಿದ ವ್ಯಕ್ತಿ ತನ್ನನ್ನು ಸಾ.ರಾ. ಮಹೇಶ್ ಅವರ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ನಿಮ್ಮ ಭೂ ದಾಖಲೆಗಳು ರೆಡಿಯಾಗಿದೆ ಎಂದು ಹೇಳಿ, ಸಚಿವ ಸಾ.ರಾ. ಮಹೇಶ್ ಮಾತನಾಡುತ್ತಾರೆ ಎಂದು ಬೇರೊಬ್ಬನಿಗೆ ಫೋನ್ ನೀಡಿದ್ದಾನೆ. ಆ ವ್ಯಕ್ತಿ ನಾನು ಸಾ.ರಾ. ಮಹೇಶ್ ಎಂದು ಹೇಳಿದಲ್ಲದೆ, ನಿಮ್ಮ ದಾಖಲೆಗಳು ಸಿದ್ಧವಾಗಿದೆ. ಗಿರೀಶನ ಕೈಯಿಂದ ಪಡೆದುಕೊಳ್ಳಿ ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ.

ಇದನ್ನು ನಿಜವೆಂದು ನಂಬಿದ ಲಿಂಗೇಗೌಡ ತನ್ನ ಕೈಯಲ್ಲಿ ಕೇವಲ 4 ಸಾವಿರ ಮಾತ್ರ ಹಣವಿದ್ದು, ಬ್ಯಾಂಕಿ ನಲ್ಲಿ 47 ಸಾವಿರ ರೂಪಾಯಿ ಹಣವಿದೆ ಎಂದು ತಿಳಿಸಿ ದ್ದಾರೆ. ಬಳಿಕ ಲಿಂಗೇಗೌಡ ಅನಾಮಿಕ ವ್ಯಕ್ತಿಯನ್ನು ತನ್ನೊಂ ದಿಗೆ ಬ್ಯಾಂಕಿಗೆ ಕರೆದೊಯ್ದಿದಾರೆ. ಉಳಿದ 50 ಸಾವಿರ ಹಣಕ್ಕಾಗಿ ಲಿಂಗೇಗೌಡ ಕುಶಾಲನಗರದ ತನ್ನ ಸ್ನೇಹಿತನಿಗೆ ಕರೆ ಮಾಡಿ ಖಾತೆಗೆ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ತದನಂತರ ನಗರದ ಕೊಡವ ಸಮಾಜದ ವಾಣಿಜ್ಯ ಕಟ್ಟಡದಲ್ಲಿರುವ ಖಾಸಗಿ ಬ್ಯಾಂಕಿನಿಂದ ಒಟ್ಟು 97 ಸಾವಿರ ಹಾಗೂ ತನ್ನಲ್ಲಿದ್ದ 4 ಸಾವಿರ ಹಣವನ್ನು ತೆಗೆದು ಅನಾಮಿಕ ವ್ಯಕ್ತಿಗೆ ನೀಡಿದ್ದಾರೆ. ಹಣ ಪಡೆದುಕೊಂಡ ಅನಾಮಿಕ ವ್ಯಕ್ತಿ ತಾನು ತಾಲೂಕು ಕಚೇರಿಗೆ ತೆರಳಿ ಭೂ ಪರಿವರ್ತನೆಯ ಶುಲ್ಕ ಪಾವತಿಸಿ ಜಿಲ್ಲಾಡಳಿತ ಭವನಕ್ಕೆ ಬರುವುದಾಗಿ ತಿಳಿಸಿ, ನೀವು ಕೂಡ ಅಲ್ಲಿಗೆ ಬಂದು ದಾಖಲೆ ಪಡೆದುಕೊಳ್ಳುವಂತೆ ಹೇಳಿದ್ದಾನೆ. ಬ್ಯಾಂಕಿನಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿದ ಲಿಂಗೇಗೌಡ ಕೇಸ್ ವರ್ಕರ್(ಅನಾಮಿಕ ವ್ಯಕ್ತಿ)ಗಾಗಿ ಹಲವು ಸಮಯ ಕಾದರೂ ಆ ವ್ಯಕ್ತಿ ಮಾತ್ರ ಬರಲಿಲ್ಲ. ಆತ ನೀಡಿದ ಮೊಬೈಲ್ ಸಂಖೈಗೆ ಕರೆ ಮಾಡಿದ ಸಂದರ್ಭ ಅದು ‘ಸ್ವಿಚ್ಚ್ ಆಫ್’ ಆಗಿದೆ ಎಂಬ ಉತ್ತರ ದೊರಕಿದೆ. ಇದರಿಂದ ಗಾಬರಿ ಯಾದ ಲಿಂಗೇಗೌಡ ಕಚೇರಿಯಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ಅರಿವಾಗಿದೆ.

ಬಳಿಕ ನಗರ ಪೊಲೀಸ್ ಠಾಣೆಗೆ ತೆರಳಿದ ಲಿಂಗೇ ಗೌಡ ನಡೆದ ವಿಷಯವನ್ನು ತಿಳಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಜಿಲ್ಲಾಡಳಿತ ಭವನ ಮತ್ತು ಬ್ಯಾಂಕಿಗೆ ತೆರಳಿ ಹಣ ದೋಚಿದ ವ್ಯಕ್ತಿಯ ಚಹರೆ ಪತ್ತೆ ಹಚ್ಚಲು ಸಿ.ಸಿ.ಕ್ಯಾಮರಾ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಹಣ ದೋಚಿ ಪರಾರಿಯಾದ ವ್ಯಕ್ತಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆಂದು ವಿಶ್ವಾಸನೀಯ ಮೂಲಗಳು ಮಾಹಿತಿ ನೀಡಿವೆ.

Translate »