ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…
ಚಾಮರಾಜನಗರ

ನೋಡ ಬನ್ನಿರೋ… ಜಿಲ್ಲೆಯ ನಯಾಗರ ಸೊಬಗು ಭರಚುಕ್ಕಿಯಲ್ಲಿ ಧುಮ್ಮಿಕ್ಕುತ್ತಿದೆ ಜಲರಾಶಿ…

July 14, 2018

ಕಣ್ಣಿಗೆ ಕಂಪು, ಕಿವಿಗೆ ಇಂಪು ಜಲ ಝೇಂಕಾರ

ಚಾಮರಾಜನಗರ: ಜಿಲ್ಲೆಯ ನಯಾಗರ ಎಂದೇ ಪ್ರಸಿದ್ಧವಾಗಿರುವ ಭರಚುಕ್ಕಿ, ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತ ಭೋರ್ಗರೆಯುತ್ತಿದ್ದು, ಈ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳು ವುದೇ ಒಂದು ಸೊಬಗು. ಸುಮಾರು 100 ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರಿನ ಭೋರ್ಗರೆತ, ಅದರಿಂದ ತೇಲಿ ಬರುತ್ತಿರುವ ತಂಗಾಳಿಯ ಸ್ವಾದವನ್ನು ವರ್ಣಿಸಲು ಪದಗಳೇ ಸಾಲದು.

ಕಬಿನಿಯಿಂದ ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವಳಿ ಜಲಪಾತಗಳೆಂದೇ ವಿಶ್ವ ಪ್ರಸಿದ್ಧವಾಗಿರುವ ಭರಚುಕ್ಕಿ, ಗಗನಚುಕ್ಕಿ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ಬೇಸಿಗೆಯಲ್ಲಿ ನೀರಿಲ್ಲದೆ ಭಣಗುಡುತ್ತಿದ್ದ ಈ ಜಲಪಾತಗಳು ಈಗ ಕಬಿನಿಯಿಂದ ನೀರು ಹೊರಬಿಡುತ್ತಿರುವುದರಿಂದ ಮೈದುಂಬಿ ಕಂಗೊಳಿಸುತ್ತಿದೆ. ಕಾಡಿನ ಮರಗಿಡಗಳ ಮಧ್ಯೆ ಸ್ವಚ್ಛಂದವಾಗಿ ಹರಿದು ಬರುವ ಕಾವೇರಿ, ಸುಮಾರು 100 ಅಡಿಗಳ ಎತ್ತರ ದಿಂದ ಭಾರೀ ಗಾತ್ರದ ಕಲ್ಲಿನ ಬಂಡೆಗಳ ಮೇಲಿಂದ ಕೆಳ ಭಾಗಕ್ಕೆ ಧುಮ್ಮಿಕ್ಕುತ್ತಿದ್ದಾಳೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲದು. ಮೇಲಿಂದ ಕೆಳ ಭಾಗಕ್ಕೆ ನೀರು ಧುಮ್ಮಿಕ್ಕುವಾಗ ಕೇಳಿ ಬರುವ ಆ ಝೇಂಕಾರ ಕೇಳುವುದೇ ಒಂದು ಆನಂದ.

ಈ ವೇಳೆ ಹಾಲಿನಂತೆ ಹೊರ ಬರುತ್ತಿರುವ ಮಂಜಿನ ಹನಿಗಳು ಆಹ್ಲಾದತೆಯೊಂದಿಗೆ ನೋಡುಗರಿಗೆ ಮುದ ನೀಡುತ್ತಿದೆ. ಅವಳಿ ಜಲಪಾತಗಳು ಧುಮ್ಮಿಕ್ಕುತ್ತಿರುವ ವಿಷಯ ತಿಳಿದ ಪ್ರವಾಸಿಗರು ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಆ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಗುಂಪು ಗುಂಪಾಗಿ ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ, ಸಾವಿರಾರು ಸಂಖ್ಯೆಯಲ್ಲಿ ಕಾರು, ಬೈಕ್, ಟೆಂಪೋಗಳಲ್ಲಿ ಆಗಮಿಸುವ ಪ್ರವಾಸಿಗರು ಆ ಸೊಬಗನ್ನು ಕಣ್ಣಾರೆ ನೋಡಿ ಮಾರು ಹೋಗುತ್ತಿದ್ದಾರೆ. ಪ್ರೇಮಿಗಳು ಸಹ ಭೇಟಿ ನೀಡಿ ಮೈತುಂಬಿ ಧುಮ್ಮಿಕ್ಕುತ್ತಿರುವ ಜಲಪಾತಗಳ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೊಬೈಲ್‍ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವ ದೃಶ್ಯ, ಗುಂಪು ಗುಂಪಾಗಿ ನಿಂತು ಫೋಟೊ ತೆಗೆಸಿಕೊಳ್ಳುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ.

ಭದ್ರತೆ ದೃಷ್ಟಿಯಿಂದ ಜಲಪಾತಗಳ ಕೆಳಭಾಗಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಮೇಲಿನ ಭಾಗದಲ್ಲಿಯೇ ಗೇಟನ್ನು ಬಂದ್ ಮಾಡಿ ಮುಳ್ಳಿನ ಗಿಡಗಳಿಂದ ಮುಚ್ಚಲಾಗಿದೆ. ಹೀಗಾಗಿ ಯಾರೊಬ್ಬರೂ ಸಹ ಜಲಪಾತದ ಕೆಳಭಾಗಕ್ಕೆ ತೆರಳಲು ಅವಕಾಶ ಇಲ್ಲದಂತಾಗಿದೆ. ಜಲಪಾತದ ಎದುರು ಭಾಗದಲ್ಲಿ ನಿಂತು ವೀಕ್ಷಿಸಲು ಬೇಕಾದ ಎಲ್ಲಾ ಸಿದ್ಧತೆಯನ್ನು ಮಾಡಲಾಗಿದೆ. ಭರಚುಕ್ಕಿ ಜಲಾಶಯ ವೀಕ್ಷಿಸಲು ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲೂ ಸಹ ಪ್ರವಾಸಿಗರು ನಿಂತು ಮೇಲಿನ ಭಾಗದಿಂದ ಜಲಪಾತ ವೀಕ್ಷಿಸಲು ಅವಕಾಶ ಕಲ್ಪಸಲಾಗಿದೆ. ಮಕ್ಕಳು ಆಟವಾಡಲು ಪಾರ್ಕ್ ನಿರ್ಮಿಸಲಾಗಿದ್ದು, ಆಟಿಕೆ ವಸ್ತುಗಳನ್ನು ಅಳವಡಿಸಲಾಗಿದೆ. ಶೌಚಾಲಯ ನಿರ್ಮಿಸುವ ಮೂಲಕ ಪ್ರವಾಸಿಗರ ಮನಗೆಲ್ಲುವಲ್ಲಿ ಪ್ರವಾಸೋದ್ಯಮ ಇಲಾಖೆ ಯಶಸ್ವಿ ಯಾಗಿದೆ. ಈ ಎರಡೂ ಜಲಪಾತಗಳಲ್ಲಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಪಾತಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಈ ವೇಳೆಯಲ್ಲಂತೂ ಜಲ ಪಾತಗಳ ಸೊಬಗನ್ನು ನೋಡಲು ಚಂದವೋ ಚಂದ.

Translate »