ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ  ನೇರಗೊಳಿಸುವ ಕಾಮಗಾರಿಯಲ್ಲಿ ಭಾರೀ ಅಕ್ರಮ
ಮೈಸೂರು

ಮೈಸೂರು ಜಲದರ್ಶಿನಿ ಬಳಿ ಹುಣಸೂರು ರಸ್ತೆ  ನೇರಗೊಳಿಸುವ ಕಾಮಗಾರಿಯಲ್ಲಿ ಭಾರೀ ಅಕ್ರಮ

June 22, 2018
  • ಸಂಸದ ಪ್ರತಾಪ್‍ಸಿಂಹ ಆರೋಪ, ಸಮರ್ಪಕ ಕಾಮಗಾರಿಗೆ ವಾರದ ಗಡುವು
  • ಸ್ಥಳ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತೀವ್ರ ತರಾಟೆ
  • ಅವ್ಯವಹಾರದ ಬಗ್ಗೆ ತನಿಖೆಗೆ ಒತ್ತಾಯ, ತಪ್ಪಿದರೆ ಉಗ್ರ ಹೋರಾಟದ ಎಚ್ಚರಿಕೆ

ಮೈಸೂರು: ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಮುಂಭಾಗದಿಂದ ಪಡುವಾರಹಳ್ಳಿ ಸಿಗ್ನಲ್ ಜಂಕ್ಷನ್‍ವರೆಗಿನ ಹುಣಸೂರು ರಸ್ತೆ ನೇರ ಗೊಳಿಸುವ ಕಾಮಗಾರಿಯನ್ನು ಯೋಜನೆ ಅನುಸಾರ ಇನ್ನೊಂದು ವಾರದಲ್ಲಿ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಿರುವ ಸಂಸದ ಪ್ರತಾಪ್ ಸಿಂಹ, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಸೆಂಟ್ರಲ್ ರೋಡ್ ಫಂಡ್(ಸಿಆರ್‍ಎಫ್)ನಿಂದ ಬಿಡುಗಡೆ ಯಾದ 12.5 ಕೋಟಿ ರೂ. ವೆಚ್ಚದಲ್ಲಿ ನಡೆಸಿರುವ ರಸ್ತೆ ನೇರಗೊಳಿಸುವ ಕಾಮಗಾರಿ ಸಂಪೂರ್ಣವಾಗಿಲ್ಲ. ಅಲ್ಲದೆ ಈ ಕಾಮಗಾರಿ ಯಲ್ಲಿ ಕೋಟ್ಯಾಂತರ ರೂ. ಅವ್ಯವ ಹಾರ ನಡೆದಿದೆ ಎಂದು ಗಂಭೀರ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆ ಯಲ್ಲಿ ಸಂಸದ ಪ್ರತಾಪ್‍ಸಿಂಹ ಅವರು, ಶಾಸಕ ಎಲ್.ನಾಗೇಂದ್ರ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿ ಗುಣ ಮಟ್ಟ ಪರಿಶೀಲಿಸಿ, ಯೋಜನೆ ಪ್ರಕಾರ ಕಾಮಗಾರಿ ನಡೆಸದಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಜಲದರ್ಶಿನಿ ಎದುರಿನ ತಿರುವಿನಲ್ಲಿ ನಿರಂತರವಾಗಿ ಅಪಘಾತ ಸಂಭವಿಸು ತ್ತಿದ್ದ ಕಾರಣ, ರಸ್ತೆಯನ್ನು ನೇರಗೊಳಿ ಸುವ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಯಾಗಿದೆ. ಆದರೆ ಕಾಮಗಾರಿ ಆರಂಭಿಸುವ ಮುನ್ನ ರೂಪಿಸ ಲಾಗಿದ್ದ ಯೋಜನೆಯಂತೆ ಯಾವುದೇ ಕೆಲಸವಾಗಿಲ್ಲ.

ರಸ್ತೆ ನೇರಗೊಳಿಸಲು 6 ಮರಗಳನ್ನು ತೆರವು ಮಾಡಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಿತ್ತು. ಆ ಕೆಲಸವೂ ನಿಮ್ಮಿಂದಾಗಿಲ್ಲ ಎಂದು ಅಧಿಕಾರಿಗಳ ಕಾರ್ಯವೈಫಲ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ಮರಗಳ ತೆರವಿಗೆ ತುರ್ತಾಗಿ ಅನುಮತಿ ನೀಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹುಣಸೂರು ರಸ್ತೆಯಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ. ಅಲ್ಲದೆ ಜಲದರ್ಶಿನಿ ಎದುರಿನ ತಿರುವಿನಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಆದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜಲದರ್ಶಿನಿ ಎದುರಿನಿಂದ ಪಡುವಾರಹಳ್ಳಿ ಜಂಕ್ಷನ್‍ವರೆಗಿನ ರಸ್ತೆಯನ್ನು ನೇರಗೊಳಿಸಿ ಅಭಿವೃದ್ಧಿಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಯೋಜನೆಯಂತೆ ಯಾವುದೇ ಕೆಲಸಗಳನ್ನು ಮಾಡಿಲ್ಲ. 3 ತಿಂಗಳು ರಸ್ತೆ ಸಂಚಾರವನ್ನು ಬಂದ್ ಮಾಡಿ, ಯಾವುದೇ ಬದಲಾವಣೆ ಮಾಡದೆ ಹಳೆಯ ಡಾಂಬರ್ ಕಿತ್ತು, ಹೊಸದಾಗಿ ಡಾಂಬರಿಕರಣ ಮಾಡಿದ್ದಾರೆ. ಇದು ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಆಗಿದ್ದ ಗೋವಿಂದರಾಜು ಅವರ ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರಲ್ಲದೆ, ಇನ್ನೊಂದು ವಾರದಲ್ಲಿ ಸಮರ್ಪಕ ಕಾಮಗಾರಿಯಾಗಬೇಕೆಂದು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಎಇಇ ಹೆಚ್.ಪಿ. ಚಂದ್ರಪ್ಪ ಹಾಗೂ ಇಂಜಿನಿಯರ್ ಯೋಗಾನಂದ್ ಅವರಿಗೆ ಸೂಚನೆ ನೀಡಿದರು.

ರಸ್ತೆ ನೇರಗೊಳಿಸುವ ಮಹತ್ವದ ಕಾಮಗಾರಿ, ಯೋಜನೆಯಂತೆ ಸಾಕಾರಗೊಂಡಿ ದ್ದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತಿತ್ತು. ಆದರೆ ಕಾಮಗಾರಿ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ರಸ್ತೆ ನೇರಗೊಳಿಸಲು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಜಲದರ್ಶಿನಿ ಅತಿಥಿಗೃಹದ ವ್ಯಾಪ್ತಿಯಲ್ಲಿರುವ ಒಂದಷ್ಟು ಜಾಗವನ್ನು ಸ್ವಾಧೀನಪಡಿಸಿ ಕೊಳ್ಳಬೇಕಿತ್ತು. ಅಲ್ಲದೆ ಮರಗಳ ತೆರವಿಗೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿತ್ತು. ಹೀಗೆ ಕಾಮಗಾರಿ ಪೂರ್ವದಲ್ಲಿ ಮಾಡಬೇಕಿದ್ದ ಕೆಲಸಗಳನ್ನು ಬದಿಗೊತ್ತಿ, ಕೇವಲ ರಸ್ತೆಗೆ ಹೊಸದಾಗಿ ಡಾಂಬರ್ ಹಾಕಿ, ಕಾಮಗಾರಿ ಮುಗಿಯಿತು ಎಂಬಂತೆ ನಡೆದು ಕೊಂಡಿದ್ದಾರೆ. ಅಸಮರ್ಪಕ ಕಾಮಗಾರಿಯಿಂದ ಪಾದಚಾರಿ ಮಾರ್ಗವೂ ಇಲ್ಲವಾದಂತಾಗಿದೆ. ಪರಿಣಾಮ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್‍ಸಿಂಹ, ಕಾಮಗಾರಿಗೆ ಈವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ, ಯಾವ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ರಾಜಕಾರಣಿಗಳ ಪರ್ಸೆಂಟೇಜ್ ವ್ಯವಹಾರವೂ ಎಲ್ಲರಿಗೂ ತಿಳಿದಿದೆ. ಆದರೆ ಕೇಂದ್ರದಿಂದ ಬಂದಿರುವ ಸಾರ್ವಜನಿಕರ ಹಣವನ್ನು ಯಾವುದೇ ಕಾರಣಕ್ಕೂ ನುಂಗಲು ಬಿಡುವುದಿಲ್ಲ. ಅಕ್ರಮದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸುತ್ತೇನೆ. ಹಾಗೆಯೇ ಇನ್ನೊಂದು ವಾರದಲ್ಲಿ ಯೋಜನೆಯನುಸಾರ ಕಾಮಗಾರಿ ನಡೆಸದಿದ್ದರೆ ಹೋರಾಟ ನಡೆಸುತ್ತೇನೆಂದು ಎಚ್ಚರಿಕೆ ನೀಡಿದರು.

ಕಾಮಗಾರಿ ಕತೆ: ಜಲದರ್ಶಿನಿ ಎದುರಿನ ರಸ್ತೆ ತಿರುವಿನಲ್ಲಿ ಅಪಘಾತಗಳು ನಿರಂತರವಾಗಿ ಸಂಭವಿಸುತ್ತಿದ್ದ ಕಾರಣ ರಸ್ತೆಯನ್ನು ನೇರಗೊಳಿಸಿ ಅಭಿವೃದ್ಧಿಪಡಿಸಲು ಸುಮಾರು 9 ತಿಂಗಳ ಹಿಂದೆಯೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕೆ ಸೆಂಟ್ರಲ್ ರೋಡ್ ಫಂಡ್‍ನಿಂದ 12.5 ಕೋಟಿ ರೂ. ಅನುದಾನವೂ ದೊರೆತ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್‍ಸಿಂಹ, ಅಂದಿನ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಅಂದಿನ ಶಾಸಕ ವಾಸು ಅವರು ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಆದರೆ ಈ ಯೋಜನೆಯಿಂದ ಸಾಕಷ್ಟು ಮರಗಳ ಹನನವಾಗುತ್ತದೆ ಎಂದು ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದ ಪರಿಸರ ಪ್ರೇಮಿಗಳು, ಅಂದೂ ಸಹ ಮೌನಪ್ರತಿಭಟನೆ ನಡೆಸಿ, ಖಂಡಿಸಿದ್ದರು.
ಮೈಸೂರು ಗ್ರಾಹಕರ ಪರಿಷತ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಕಾಮಗಾರಿ ಗಾಗಿ ಅತ್ಯಮೂಲ್ಯ ಮರಗಳನ್ನು ಕಡಿಯುವ ಬದಲು, ಪರ್ಯಾಯ ಮಾರ್ಗ ಬಳಸಿಕೊಳ್ಳುವಂತೆ ಒತ್ತಾಯಿಸಿದ್ದರು. ನಂತರದ ಬೆಳವಣ ಗೆಯಲ್ಲಿ ಕೇವಲ 6 ಮರಗಳ ತೆರವುಗೊಳಿಸಲು ಅವಕಾಶ ನೀಡುವಂತೆ ಪರಿಸರವಾದಿಗಳ ಮನವೋಲೈಸಲಾಗಿತ್ತು. ಅಂತೂ ಇಂತೂ ಮರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ರಸ್ತೆಯನ್ನು ನೇರಗೊಳಿಸುವ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದಕ್ಕಾಗಿ ಕಲಾಮಂದಿರದ ಬಳಿಯಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗಿನ ಸಂಚಾರ ಬಂದ್ ಮಾಡಲಾಗಿತ್ತು. ಒಂದೂವರೆ ತಿಂಗಳ ಹಿಂದಷ್ಟೇ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಪಾದಚಾರಿ ಮಾರ್ಗವನ್ನು ಸೇರಿಸಿಕೊಂಡು ಒಂದಷ್ಟು ಅಗಲೀಕರಣ ಮಾಡಿ, ಡಾಂಬರು ಹಾಕಿ ಕೈತೊಳೆದುಕೊಂಡಿದ್ದರು.

ಫುಟ್‍ಪಾತ್ ಗುಳುಂ: ರಸ್ತೆ ಅಗಲೀಕರಣ ಮಾಡಿದ್ದೇವೆಂದು ಕಾಣ ಸುವ ದೃಷ್ಟಿ ಯಿಂದ ಕಲಾಮಂದಿರದ ಭಾಗದಲ್ಲಿದ್ದ ಪಾದಚಾರಿ ಮಾರ್ಗವನ್ನೂ ಆಕ್ರಮಿಸಿಕೊಳ್ಳ ಲಾಗಿದೆ. ಇನ್ನು ಜಲದರ್ಶಿನಿ ಭಾಗದಲ್ಲಿರುವುದು ಗುಡ್ಡದ ಹಾದಿ. ಆದ್ದರಿಂದ ಮಹಾರಾಣ ಕಾಲೇಜಿಗೆ ಹಾಸ್ಟೆಲ್ ಹಾಗೂ ಮೆಟ್ರೋಪೋಲ್‍ನಿಂದ ಬರುವ ವಿದ್ಯಾರ್ಥಿನಿಯರು ರಸ್ತೆಯಲ್ಲೇ ನಡೆದು ಬರಬೇಕಿದೆ. ಎಡೆಬಿಡದ ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಜೀವಭಯದಿಂದ ಓಡಾಡಬೇಕಿದೆ. ದಿನದಲ್ಲಿ ಸಾವಿರಕ್ಕೂ ಹೆಚ್ಚು ಪಾದಚಾರಿಗಳು ಸಂಚರಿಸುವ ರಸ್ತೆಗಳಲ್ಲಿ 2 ಮೀಟರ್‍ಗಿಂತ ಹೆಚ್ಚು ವಿಸ್ತಾರವಾದ ಫುಟ್‍ಪಾತ್ ಅಗತ್ಯವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಆದರೆ ಇಲ್ಲಿ ಪಾದಚಾರಿ ಮಾರ್ಗವೇ ಇಲ್ಲ. ಕೇವಲ 200 ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸುಮಾರು 12 ಕೋಟಿ ರೂ. ಅನುದಾನ ವೆಚ್ಚ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಅತ್ಯಂತ ಅವೈಜ್ಞಾನಿಕ ವಾಗಿ ಕಾಮಗಾರಿ ನಡೆಸಿರುವುದು ಸಾಂಸ್ಕøತಿಕ ನಗರಿ ಮೈಸೂರಿಗೆ ಕಪ್ಪುಚುಕ್ಕೆಯಾಗಿದೆ.

ಅಕ್ರಮದ ಆರೋಪದಿಂದ ಮರುಜೀವ: ಚುನಾವಣೆ ಗುಂಗಿನಲ್ಲಿದ್ದ ಜನಪ್ರತಿನಿಧಿಗಳು ಈ ಕಾಮಗಾರಿಯ ಆಗುಹೋಗುಗಳ ಬಗ್ಗೆ ದೃಷ್ಟಿ ಹಾಯಿಸಿರಲಿಲ್ಲ. ಯೋಜನೆಯಂತೆ ಕಾಮಗಾರಿ ನಡೆಸಿಲ್ಲ. 12.5 ಕೋಟಿ ರೂ. ಅನುದಾನದಲ್ಲಿ ಲೂಟಿ ಹೊಡೆದಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಮೂಲಕ ಜನರ ದುಡ್ಡನ್ನು ನುಂಗಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಯಿತು. ಅಲ್ಲದೆ ಆರ್‍ಟಿಐ ಕಾರ್ಯಕರ್ತರಾದ ಎಂ.ರಾಮಕೃಷ್ಣ ಅವರು ಜಲದರ್ಶಿನಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತನಿಖೆಗೆ ಆಗ್ರಹಿಸಿದ್ದರು. ಇದರಿಂದ ಎಚ್ಚೆತ್ತ ಜನಪ್ರತಿನಿಧಿಗಳು, ರಸ್ತೆಗಿಳಿದು ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕ್ರಮ ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಕಾದು ನೋಡಬೇಕೆಂದು ನಾಗರಿಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

Translate »