ಮಳೆ ಅವಾಂತರ; ಕೊಡಗಿಗೆ ‘ಕತ್ತಲ’ ಭಾಗ್ಯ
ಕೊಡಗು

ಮಳೆ ಅವಾಂತರ; ಕೊಡಗಿಗೆ ‘ಕತ್ತಲ’ ಭಾಗ್ಯ

July 17, 2018

ಮಡಿಕೇರಿ:  ವರುಣನ ವಕ್ರದೃಷ್ಠಿಗೆ ತುತ್ತಾಗಿರುವ ಕೊಡಗು ಜಿಲ್ಲೆ ಯಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರಿದಿದ್ದು, ಹಲವು ಅವಾಂತರಗಳನ್ನು ಸೃಷ್ಠಿಸಿದೆ. ಭಾರೀ ಗಾಳಿಯಿಂದ ಮರಗಳು ಉರುಳಿ ಬಿದ್ದು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಗೆ “ಕತ್ತಲ ಭಾಗ್ಯ” ಒದಗಿ ಬಂದಿದೆ.

ನಗರ, ಪಟ್ಟಣ ಪ್ರದೇಶಗಳು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ಹಲವು ದಿನಗಳಿಂದ ವಿದ್ಯುತ್ ಪೂರೈಕೆ ಕಡಿತವಾಗಿದೆ. ಕಡಗದಾಳು ವ್ಯಾಪ್ತಿಯಲ್ಲಿ ಸೋಮ ವಾರ 7 ಮತ್ತು ಮರಗೋಡು ವ್ಯಾಪ್ತಿಯಲ್ಲಿ 10 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಬಿರು ಗಾಳಿ ಸಹಿತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ವಿದ್ಯುತ್ ಲೈನ್‍ಗಳ ದುರಸ್ಥಿ ಕಾರ್ಯಕ್ಕೆ ತೀವ್ರ ಅಡ್ಡಿಯಾಗಿದೆ.

ಕೊಡಗು ಜಿಲ್ಲೆಯ ನದಿ ಪಾತ್ರಗಳ ವ್ಯಾಪ್ತಿಯಲ್ಲಿ ಜಲ ಪ್ರವಾಹ ಕಂಡು ಬಂದಿದ್ದು, ಹಲವು ಗ್ರಾಮಗಳು, ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ. 7ನೇ ಹೊಸಕೋಟೆ ಬಳಿ ಕೆಎಸ್‍ಆರ್‍ಟಿಸಿ ಬಸ್ಸೊಂದು ಚಾಲಕನ ಸಮಯ ಪ್ರಜ್ಞೆಯಿಂದ ಮುರಿದು ಬೀಳುತ್ತಿದ್ದ ಮರದಿಂದ ಕೂದಲೆಳೆಯ ಅಂತರದಿಂದ ಪಾರಾಗಿದೆ.

ಮಡಿಕೇರಿ – ಮಾದಾಪುರ ರಸ್ತೆಯುದ್ದ ಕ್ಕೂ 6ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಮರ ತುಂಡರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಸ್ತೆಯ ಮೂಲಕ ವಾಹನಗಳಲ್ಲಿ ತೆರಳುವುದೇ ದುಸ್ಥರವಾ ಗಿದ್ದು, ಯಾವ ಕ್ಷಣದಲ್ಲಿ ಮರಗಳು ವಾಹನ ಗಳ ಮೇಲೆ ಉರುಳುತ್ತವೆ ಎಂಬ ಭೀತಿ ವಾಹನ ಸವಾರರನ್ನು ಕಾಡತೊಡಗಿದೆ.

ಮಡಿಕೇರಿ ನಗರದ ನೂತನ ಖಾಸಗೀ ಬಸ್ ನಿಲ್ದಾಣ ಸಮೀಪವಿರುವ ಅಂಗಡಿ ಮಳಿಗೆಗಳ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು, ಮೊಬೈಲ್ ಶಾಪ್ ಒಂದಕ್ಕೆ ಭಾರಿ ನಷ್ಟ ಸಂಭವಿಸಿದೆ. ಮಳೆ ನೀರು ಅಂಗಡಿಗೆ ನುಗ್ಗಿ ಸಾವಿರಾರು ರೂಪಾಯಿ ನಷ್ಟವಾಗಿದೆ. ಈ ಮಳಿಗೆಯ ಪಕ್ಕದಲ್ಲಿರುವ ವಸತಿ ಕಟ್ಟಡವೊಂದರ ರೂಫಿಂಗ್ ಶೀಟ್‍ಗಳು ಗಾಳಿಗೆ ಹಾರಿ ಹೋಗಿದ್ದು, ಕೊಹಿನೂರು ರಸ್ತೆಯಲ್ಲಿ ವಾಹನ ಮತ್ತು ಜನ ಸಂಚಾರವನ್ನು ಕೆಲಕಾಲ ಬಂದ್ ಮಾಡಿ, ಬೀಳುವ ಸ್ಥಿತಿಯಲ್ಲಿದ್ದ ಉಳಿದ ಶೀಟ್‍ಗಳನ್ನು ಕ್ರೇನ್ ಸಹಾಯದಿಂದ ತೆರವು ಮಾಡಲಾಯಿತು.

ಇಂದಿರಾನಗರ, ಚಾಮುಂಡೇಶ್ವರಿ ನಗರ, ತ್ಯಾಗರಾಜ ಕಾಲೋನಿಯಲ್ಲಿ ಹಲವು ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ಕೆಲವೆಡೆ ಭೂ ಕುಸಿದು, ರಸ್ತೆಗೆ ಹಾನಿ ಸಂಭವಿಸಿದ ಘಟನೆಗಳು ವರದಿಯಾಗಿವೆ. ನಗರದ ರಾಣಿಪೇಟೆಯ ತಗ್ಗು ಪ್ರದೇಶದ ಮನೆಯೊಂದಕ್ಕೆ ನೀರು ನುಗ್ಗಿದ್ದು, ದಿನ ಬಳಕೆ ವಸ್ತುಗಳಿಗೆ ಹಾನಿ ಸಂಭವಿಸಿದೆ. ಮಡಿಕೇರಿ ಕೋಟೆ ಆವರಣ ಸಮುದ್ರದಂತಾಗಿದ್ದು, ಪ್ರವಾಸಿ ವಾಹನವೊಂದು ನೀರಿನಲ್ಲಿ ಸಿಲುಕಿ ಕೊಂಡಿತ್ತು.

ನಾಪೋಕ್ಲು ಭಾಗದ ಕಲ್ಲುಮೊಟ್ಟೆ, ಚೆರಿಯಪರಂಬು ಗ್ರಾಮಗಳು ಕಾವೇರಿ ನದಿ ನೀರಿನ ಪ್ರವಾಹದಿಂದ ಕಳೆದ 7 ದಿನಗಳಿಂದ ದ್ವೀಪದಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Translate »