ಪಾಕ್ ಪ್ರತಿ ದಾಳಿಗೆ ಭಾರತ ದಿಟ್ಟ ಉತ್ತರ
ಮೈಸೂರು

ಪಾಕ್ ಪ್ರತಿ ದಾಳಿಗೆ ಭಾರತ ದಿಟ್ಟ ಉತ್ತರ

February 28, 2019

ನವದೆಹಲಿ: ಭಾರತದ ವಾಯುಪಡೆ ಮಂಗಳವಾರ ಮುಂಜಾನೆ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಪಾಕ್ ವಾಯುಪಡೆ ಇಂದು ಗಡಿ ನಿಯಂತ್ರಣ ರೇಖೆ ದಾಟಿ ಭಾರತದ ಮೇಲೆ ಪ್ರತಿದಾಳಿಗೆ ಮುಂದಾಯಿತು. ಆದರೆ ಭಾರತದ ವಾಯುಪಡೆ ಅದನ್ನು ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಬುಧವಾರ ಬೆಳಿಗ್ಗೆ 11 ಗಂಟೆ ವೇಳೆಗೆ ಪಾಕಿಸ್ತಾನದ ಎಫ್-16 ಮೂರು ಯುದ್ಧ ವಿಮಾನಗಳು ರಜೌರಿ ಸೆಕ್ಟರ್ ಮೂಲಕ ಭಾರತದ ಗಡಿಯನ್ನು ಪ್ರವೇಶಿಸಿದವು. ಅದಾಗಲೇ ಕಟ್ಟೆಚ್ಚರ ವಹಿಸಿದ್ದ ಭಾರತದ ವಾಯುಪಡೆ ಮಿಗ್-21 ಮೂಲಕ ಪಾಕಿಸ್ತಾನದ ಯುದ್ಧ ವಿಮಾನಗಳ ಮೇಲೆರಗಿತು.

ಭಾರತದ ಯುದ್ಧ ವಿಮಾನಗಳು ಎದುರಾಗುತ್ತಿದ್ದಂತೆ ಕಂಗೆಟ್ಟ ಪಾಕ್‍ನ ಎಫ್-16 ಬಂದ ದಾರಿಗೆ ಸುಂಕವಿಲ್ಲದಂತೆ ಶರವೇಗ ದಲ್ಲಿ ವಾಪಸ್ಸಾಗಲಾರಂಭಿಸಿದವು. ಇವುಗಳನ್ನು ಬೆನ್ನತ್ತಿದ್ದ ಮಿಗ್-21 ವಿಮಾನಗಳು ಕೊನೆಗೂ ಪಾಕಿಸ್ತಾನದ ಒಂದು ಎಫ್-16 ವಿಮಾನವನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾದವು. ಈ ವೇಳೆ ಹಾನಿಗೀಡಾದ ಭಾರತದ ಮಿಗ್-21 ವಿಮಾ ನವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪತನಗೊಂಡಿತು. ಈ ವಿಮಾನದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನ ಸೈನ್ಯದ ವಶವಾಗಿದ್ದಾರೆ. ಆದರೆ ಪಾಕಿಸ್ತಾನ ತಾನು ಭಾರತದ ಎರಡು ಮಿಗ್-21 ಯುದ್ಧ ವಿಮಾನಗಳನ್ನು ಹೊಡೆದು ರುಳಿಸಿದ್ದು, ಇಬ್ಬರು ಪೈಲಟ್‍ಗಳು ತಮ್ಮ ವಶದಲ್ಲಿರುವುದಾಗಿ ಹೇಳಿಕೊಂಡಿತ್ತು. ಆದರೆ ಭಾರತದ ವಾಯುಪಡೆ ವಕ್ತಾರರು ಬೆಳಿಗ್ಗೆ ನಡೆದ ಕಾರ್ಯಾಚರಣೆಯ ವಿವರವನ್ನು ಬಹಿರಂಗಪಡಿ ಸುತ್ತಿದ್ದಂತೆ ಪಾಕಿಸ್ತಾನ ರಾಗ ಬದಲಿಸಿತು. ತನ್ನ ಬಳಿ ಭಾರತದ ಒಬ್ಬ ಪೈಲಟ್ ಮಾತ್ರ ಇರುವುದಾಗಿ ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಸ್ಪಷ್ಟಪಡಿಸಿದರು.

ಪಾಕಿಸ್ತಾನದ ಪ್ರತಿದಾಳಿಗೆ ಭಾರತದ ದಿಟ್ಟ ಉತ್ತರ ಹಾಗೂ ಉಭಯ ದೇಶಗಳ ಎರಡು ಯುದ್ಧ ವಿಮಾನಗಳು ಪತನಗೊಂಡ ನಂತರ ಸಾಕ್ಷಾತ್ ಯುದ್ಧ ಪರಿಸ್ಥಿತಿ ತಲೆದೋರಿತು. ಇಂದು ಪೂರ್ವಾಹ್ನದ ವೇಳೆಗೆ ಜಮ್ಮು-ಕಾಶ್ಮೀರ ಹಾಗೂ ಗಡಿ ಭಾಗದ ವಿಮಾನ ನಿಲ್ದಾಣಗಳಲ್ಲಿ ನಾಗರಿಕ ಹಾಗೂ ವಾಣಿಜ್ಯ ವಿಮಾನ ಸಂಚಾರವನ್ನು ರದ್ದುಗೊಳಿಸಲಾಯಿತು. ರಕ್ಷಣಾ, ಗೃಹ ಸಚಿವರು ತುರ್ತು ಸಭೆಗಳನ್ನು ನಡೆಸಿದರು. ದೇಶದ ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿ ಸಮಗ್ರ ಮಾಹಿತಿ ಕಲೆ ಹಾಕಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸಹ ದೆಹಲಿಯಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮವೊಂದರಿಂದ ಅರ್ಧದಲ್ಲೇ ನಿರ್ಗಮಿಸಿ ಸೇನೆಯ ಉನ್ನತಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಪಾಕಿಸ್ತಾನದ ಸಂಭಾವ್ಯ ದಾಳಿಯನ್ನು ಎದುರಿಸಲು ಮೂರೂ ರಕ್ಷಣಾ ಪಡೆಗಳನ್ನು ಸಜ್ಜುಗೊಳಿಸಲಾಯಿತು. ರಜೆಯ ಮೇಲೆ ಹೋಗಿದ್ದ ರಕ್ಷಣಾ ಪಡೆಗಳ ಯೋಧರನ್ನು ವಾಪಸ್ ಕರೆಸಿಕೊಳ್ಳಲಾಯಿತು. ಗಡಿ ಭಾಗದ ವಿಮಾನ ನಿಲ್ದಾಣಗಳನ್ನು ರಕ್ಷಣಾ ವಿಮಾನ ಹಾರಾಟಕ್ಕೆ ಅನುಕೂಲವಾಗುವಂತೆ ಸಜ್ಜುಗೊಳಿಸಲಾಯಿತು.

ಈ ಮಧ್ಯೆ ಪತ್ರಿಕಾಗೋಷ್ಠಿ ನಡೆಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಭಾರತದ ಗಡಿ ಉಲ್ಲಂಘಿಸಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳಲ್ಲಿ ಒಂದು ವಿಮಾನವನ್ನು ಭಾರತೀಯ ವಾಯುಪಡೆ ಹೊಡೆದು ರುಳಿಸಿದೆ. ಈ ನಮ್ಮ ಕಾರ್ಯಾಚರಣೆ ವೇಳೆ ನಮ್ಮದೇ ಮಿಗ್-21 ವಿಮಾನ ಪತನವಾಗಿದ್ದು, ಪೈಲಟ್‍ವೊಬ್ಬರು ನಾಪತ್ತೆಯಾಗಿದ್ದಾರೆ. ಈ ಪೈಲಟ್ ತನ್ನ ವಶದಲ್ಲಿರುವುದಾಗಿ ಪಾಕ್ ಹೇಳುತ್ತಿದೆ. ಆದರೆ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಇಂದು ನಮ್ಮನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಆದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಜೈಷ್-ಇ-ಮಹಮದ್ ಉಗ್ರ ಸಂಘಟನೆ ನೆಲೆಗಳ ಮೇಲೆ ನಮ್ಮ ವೈಮಾನಿಕ ದಾಳಿ ಹಿನ್ನೆಲೆಯಲ್ಲಿ ಪ್ರತಿಯಾಗಿ ಇಂದು ಬೆಳಿಗ್ಗೆ ಪಾಕ್ ವಾಯುಪಡೆ ಭಾರತದ ಗಡಿ ಉಲ್ಲಂಘಿಸಿದ್ದು, ಭಾರತೀಯ ವಾಯುಪಡೆ ಗಸ್ತು ವಿಮಾನಗಳು ಅದನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿವೆ ಎಂದು ತಿಳಿಸಿದ್ದಾರೆ. ಅತ್ತ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಷೀದ್ ಅಹಮದ್ ಮುಂದಿನ 72 ಗಂಟೆಗಳು ನಿರ್ಣಾಯಕವಾಗಿವೆ. ಭಾರತ ಮತ್ತು ಪಾಕ್ ನಡುವೆ ಯುದ್ಧ ನಡುವೆ ಅದು ಎರಡನೇ ವಿಶ್ವ ಸಮರಕ್ಕಿಂತಲೂ ದೊಡ್ಡದಾಗಿರುತ್ತದೆ ಎಂದು ಬೊಗಳೆ ಬಿಟ್ಟಿದ್ದಾರೆ. ಪಾಕಿಸ್ತಾನ ಬಹುತೇಕ ಯುದ್ಧದ ಮೂಡ್‍ನಲ್ಲಿದೆ. ಮಾತ್ರವಲ್ಲ, ಯುದ್ಧಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂದು ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸದ್ದು ಮಾಡುವ ಅಹಮದ್ ಹೇಳಿಕೊಂಡಿದ್ದಾರೆ.

ಇಮ್ರಾನ್ ಖಾನ್ ಬಾಯಲ್ಲಿ ಶಾಂತಿಮಂತ್ರ…

ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಅಥವಾ ಮೋದಿ ಕೈಯಲ್ಲಿ ಇಲ್ಲ ಒಂದು ವೇಳೆ ಯುದ್ಧ ಆರಂಭವಾದರೆ ಅದು ಹೇಗೆ ಅಂತ್ಯವಾಗುತ್ತದೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಅದರ ನಿಯಂತ್ರಣ ನನ್ನ ಕೈಯಲ್ಲೂ ಇರುವುದಿಲ್ಲ ಮತ್ತು ಮೋದಿ ಕೈಯಲ್ಲೂ ಇರುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿ ದ್ದಾರೆ. ಭಾರತ- ಪಾಕಿಸ್ತಾನ ಗಡಿಯಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಶಾಂತಿ ಮಾತುಕತೆಯ ಮಾತನಾಡಿರುವ ಇಮ್ರಾನ್, ಭಯೋ ತ್ಪಾದನೆ ಬಗ್ಗೆ ನಿಮಗೆ ಏನಾದರೂ ಮಾತನಾಡಬೇಕಿದ್ದರೆ ನಾವು ಸಿದ್ಧರಿದ್ದೇವೆ. ನಮ್ಮ ನಡುವಿನ ಸದುದ್ದೇಶಕ್ಕೆ ಜಯ ವಾಗಬೇಕು. ನಾವಿಬ್ಬರೂ ಕುಳಿತು ಚರ್ಚೆ ಮಾಡಬೇಕಿದೆ ಎಂದಿದ್ದಾರೆ. ಈ ಜಗತ್ತಿನ ಎಲ್ಲ ಯುದ್ಧಗಳು ನಡೆದಿರುವುದೂ ತಪ್ಪು ಲೆಕ್ಕಾಚಾರಗಳಿಂದಲೇ. ಇದುವರೆಗೆ ಯುದ್ಧ ಆರಂಭಿಸಿದವರಿಗೆಲ್ಲ ತಾವು ಆರಂಭಿಸಿದ ಯುದ್ಧ ಎಲ್ಲಿ ಅಂತ್ಯವಾಗುತ್ತದೆ ಎಂಬುದೇ ತಿಳಿದಿರಲಿಲ್ಲ. ಹೀಗಾಗಿ ನಾನು ಭಾರತಕ್ಕೆ ಹೇಳುವುದೇನೆಂದರೆ, ನೀವು ಶಸ್ತ್ರಾಸ್ತ್ರಗಳೊಂದಿಗೆ ಬಂದರೆ ನಮ್ಮ ಬಳಿಯೂ ಆಯುಧಗಳಿವೆ. ನಾವು ತಪ್ಪು ಲೆಕ್ಕಾಚಾರಗಳಿಗೆ ಜಾಗ ಮಾಡಿಕೊಡಬೇಕೆ? ಎಂದು ಪಾಕ್ ಪ್ರಧಾನಿ ಪ್ರಶ್ನಿಸಿದ್ದಾರೆ.

ಭಾರತದಿಂದ ಪ್ರಚೋದನೆ ಬಂದಾಗ ಪಾಕಿಸ್ತಾನವು ಎರಡು ಭಾರತೀಯ ಯುದ್ಧವಿಮಾನಗಳನ್ನು ಒಡೆದುರುಳಿಸಿತು. ಆದರೆ, ನಾವು ಯಾವುದೇ ವ್ಯಕ್ತಿ ಹಾಗೂ ಸೇನಾ ಪಡೆಗಳಿಗೆ ಹಾನಿಯಾಗದಂತೆ ಕಾರ್ಯಾಚರಣೆ ನಡೆಸಿದೆವು. ನಮ್ಮನ್ನು ಪ್ರಚೋದಿಸಿದಾಗ ಸರಿಯಾಗಿ ತಿರುಗೇಟು ಕೊಡುವಷ್ಟು ಸಾಮರ್ಥ್ಯ ನಮ್ಮಲ್ಲಿದೆ ಎಂದು ನಾವು ತೋರಿಸಬೇಕಿತ್ತು ಅಷ್ಟೇ ನೀವು ನಮ್ಮ ದೇಶದೊಳಗೆ ಪ್ರವೇಶ ಮಾಡಿದಾಗ ನಾವೂ ಕೂಡ ನಿಮ್ಮ ಗಡಿಯೊಳಗೆ ಬರಬಲ್ಲೆವು. ಪಾಕಿಸ್ತಾನದ ವಾಯು ಪ್ರದೇಶದೊಳಗೆ ಬಂದ 2 ಮಿಗ್ ಯುದ್ಧವಿಮಾನಗಳನ್ನು ನಾವು ಕೆಳಗುರುಳಿಸಿದೆವು. ಆದರೆ, ಇಷ್ಟಾದ ನಂತರ ನಮ್ಮ ಮುಂದಿನ ದಾರಿಗಳೇನು? ನಾವು ಕುಳಿತು ಮಾತುಕತೆ ಮೂಲಕ ನಮ್ಮ ಭಿನ್ನಾಭಿಪ್ರಾಯಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Translate »