ಮಳೆ ಹಾನಿ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಲು ಸೂಚನೆ
ಕೊಡಗು

ಮಳೆ ಹಾನಿ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ನೀಡಲು ಸೂಚನೆ

June 19, 2018

ಮಡಿಕೇರಿ: ಕಾನೂನು ನಿಯಮ ಮಿತಿಯೊಳಗೆ ಮಾನವೀಯತೆ ಕಾಯ್ದುಕೊಂಡು ಮಳೆ ಹಾನಿಯಿಂದ ಸಂತ್ರಸ್ಥರಾದವರಿಗೆ ಸಮರ್ಪಕ ಪರಿಹಾರ ವಿತರಿಸಬೇಕು. ಕಚೇರಿಯೊಳಗೆ ಗಡಿಯಾರ ನೋಡುತ್ತ ಕೆಲಸ ಮಾಡುವ ಬದಲು, ಮಳೆಹಾನಿ ಪ್ರದೇಶಗಳಿಗೆ ತೆರಳಿ, ವಾಸ್ತವಾಂಶ ಅರಿತು ಸರಕಾರಕ್ಕೆ ವರದಿ ನೀಡುವಂತೆ ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಮಡಿಕೇರಿಯ ಜಿಲ್ಲಾಡಳಿತ ಭವನದಲ್ಲಿ ಮಳೆಹಾನಿ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆ ಗಳ ಪ್ರಗತಿ ಪರಿಶೀಲನೆ ನಡೆಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಆಸ್ತಿ-ಪಾಸ್ತಿ ರಸ್ತೆ, ಸೇತುವೆಗಳಿಗೆ ಹಾನಿ ಸಂಭವಿಸಿದೆ. ಈ ಸಂದರ್ಭವನ್ನು ತುರ್ತು ಪರಿಸ್ಥಿತಿಯೆಂದು ನೆನೆದು ಸಮರೋಪಾದಿಯಲ್ಲಿ ಪರಿಹಾರ ಕಾರ್ಯಕೈ ಗೊಳ್ಳಬೇಕೆಂದು ಜಿಲ್ಲಾಡಳಿತ ಮತ್ತು ಅಧಿಕಾರಿ ಗಳಿಗೆ ಸಚಿವ ದೇಶಪಾಂಡೆ ಸೂಚಿಸಿದರು.

ಮಳೆಯಿಂದ ಸಂತ್ರಸ್ಥರಾದ ಕುಟುಂಬಗಳು, ಬೆಳೆಗಾರರು, ಕೃಷಿಕರು, ಮತ್ತು ಕಡು ಬಡವರಿಗೆ ಇಂದಿಗೂ ಪರಿಹಾರ ವಿತರಿಸಲು ಮುಂದಾಗದ ಅಧಿಕಾರಿಗಳನ್ನು ಶಾಸಕರು ಸಚಿವರ ಮುಂದೆಯೇ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು. ಕೆಲವು ಅಧಿಕಾರಿಗಳು ಶಾಸಕರು ಮತ್ತು ಸಚಿವರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರಲ್ಲದೆ ತಮ್ಮ ಇಲಾಖೆಗಳ ಲೋಪಗಳಿಗೆ ತೇಪೆ ಹಚ್ಚಲು ಮುಂದಾಗಿ ತರಾಟೆಗೆ ಒಳಗಾದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಜಿಲ್ಲೆಯಾದ್ಯಂತ ನಡೆದ ಮಳೆಹಾನಿಯ ಕುರಿತು ತಾಲೂಕುವಾರು ಅಧಿಕಾರಿಗಳು ಸಲ್ಲಿಸಿದ ವರದಿಯನ್ನು ಸ್ಪೈಡ್ ಶೋ ಮೂಲಕ ಸಭೆಯ ಮುಂದಿಟ್ಟರು. ಈ ಸಂದರ್ಭ ಆಕ್ರೋಶಿತರಾದ ವಿರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ, ಅಧಿಕಾರಿಗಳು ಸರಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಭಾರೀ ಮಳೆಗೆ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ ಹಲವು ಮನೆಗಳು ಧ್ವಂಸಗೊಂಡಿದೆ. ಆದರೆ ಅಧಿಕಾರಿಗಳು ಮಾತ್ರ ಬೆರಳೆಣಿಕೆ ಮನೆಗಳ ಲೆಕ್ಕ ನೀಡುತ್ತಿದ್ದಾರೆ ಎಂದು ಮಡಿಕೇರಿ ತಹಶೀಲ್ದಾರ್ ಶಾರದಾಂಬ ಮತ್ತು ವಿರಾಜಪೇಟೆ ತಹಶೀಲ್ದಾರ್ ಗೋವಿಂದಪ್ಪ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಭಾಗಶಃ ಮುರಿದು ಬಿದ್ದ ಮನೆಗಳಿಗೆ 3 ಸಾವಿರ ಪರಿಹಾರ ನೀಡಲು ತಹಶೀಲ್ದಾರರು ಮುಂದಾಗಿದ್ದು, ತಕ್ಷಣವೇ ಪೂರ್ಣ ಮೊತ್ತದ ಪರಿಹಾರ ವಿತರಿಸುವಂತೆ ಬೋಪಯ್ಯ ಆಗ್ರಹಿದರು. ಧ್ವಂಸಗೊಂಡ ಮತ್ತು ಭಾಗಶಃ ಮುರಿದ ಮನೆಗಳಿಗೆ 3 ಸಾವಿರ, 5 ಸಾವಿರ ಪರಿಹಾರ ನೀಡುವು ದಾದರೆ, ಸರಕಾರದ ವತಿಯಿಂದ ನೀಡುವುದು ಬೇಡ. ನಾವೇ ನಮ್ಮ ಕೈಯಿಂದ ಪರಿಹಾರ ವಿತರಿಸುತ್ತೇವೆ ಎಂದು ಶಾಸಕ ಅಪ್ಪಚ್ಚು ರಂಜನ್ ಅಧಿಕಾರಿಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, 72 ಗಂಟೆಗಳ ಒಳಗೆ ಜಿಲ್ಲೆಯಲ್ಲಿ ಮಳೆಹಾನಿಯಿಂದ ಸಂತ್ರಸ್ಥರಾದ ಕುಟುಂಬಗಳಿಗೆ ಸಮರ್ಪಕ ಪರಿಹಾರ ವಿತರಿಸಲು ಕ್ರಮಕೈಗೊಳ್ಳು ವಂತೆ ಉಪವಿಭಾಗಾ ಧಿಕಾರಿ ರಮೇಶ್ ಕೋನರೆಡ್ಡಿ ಅವರಿಗೆ ಸೂಚಿಸಿದರು. ಅಧಿಕಾರಿಗಳು ಯಾವುದೇ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂದು ಶಾಸಕರು ಆರೋಪಿಸಿದರ ಲ್ಲದೆ, ಇಂತಹ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಸಚಿವರನ್ನು ಒತ್ತಾಯಿಸಿದರು.

3 ದಿನದಲ್ಲಿ ಕರೆಂಟ್: ಚೆಸ್ಕಾಂ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಮಳೆಹಾನಿಯಿಂದ ಒಟ್ಟು 1374 ವಿದ್ಯುತ್ ಕಂಬಗಳು ಮತ್ತು 83 ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೀಡಾಗಿದೆ. ಈ ಪೈಕಿ 1110 ವಿದ್ಯುತ್ ಕಂಬಗಳನ್ನು ಮರು ಜೋಡಿಸ ಲಾಗಿದ್ದು, ಟ್ರಾನ್ಸ್‍ಫಾರ್ಮರ್‍ಗಳನ್ನು ಬದಲಿಸ ಲಾಗಿದೆ. ಮೈಸೂರಿನಿಂದ ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. 3 ದಿನಗಳಲ್ಲಿ ಕೊಡಗಿನ ಎಲ್ಲಾ ಗ್ರಾಮೀಣ ಭಾಗ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎಂದು ಹೇಳಿ ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಾದ ಕೆ.ಜಿ. ಬೋಪಯ್ಯ ಮತ್ತು ಅಪ್ಪಚ್ಚು ರಂಜನ್, ಬೇಕಾದರೆ 5 ದಿನ ಸಮಯ ತೆಗೆದುಕೊಳ್ಳಿ, ಆದರೆ ಗ್ರಾಮೀಣ ಭಾಗ ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಮೊದಲು ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

10 ಕೋಟಿ ಪರಿಹಾರ: ಜಿಲ್ಲೆಯ ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಬಳಿ 5 ಕೋಟಿ ರೂಪಾಯಿ ಅನುದಾನವಿದ್ದು, ಹೆಚ್ಚುವರಿ 5 ಕೋಟಿ ಹಣವನ್ನು ಪರಿಹಾರ ಕಾರ್ಯಕ್ಕೆ ನೀಡಲಾಗಿದೆ. ಕೇಂದ್ರ ಸರಕಾರಕ್ಕೆ ಪತ್ರ ಬರೆದು ಮಳೆ ಹಾನಿ ಪರಿಹಾರಕ್ಕೆ ಹೆಚ್ಚುವರಿ ಅನುದಾನ ಕೋರಲಾಗು ವುದು ಎಂದು ಸಚಿವ ದೇಶಪಾಂಡೆ ಸಭೆಯಲ್ಲಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಭತ್ತದ ಕೃಷಿಯ ಗದ್ದೆಗಳು ಪಾಳು ಬಿದ್ದಿದೆ, ಕೃಷಿಕರಿಗೆ ಭತ್ತ ಹೊರತು ಪಡಿಸಿ ಪರ್ಯಾಯ ಬೆಳೆ ಬೆಳೆಯಲು ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು. ಬಿತ್ತನೆ ಬೀಜ, ಗೊಬ್ಬರ ದಾಸ್ತಾನುಗಳ ಕುರಿತು ಕೃಷಿ ಅಧಿಕಾರಿ ಸಚಿವರಿಗೆ ಮಾಹಿತಿ ನೀಡಿದರು.

ತುರ್ತಾಗಿ ಸ್ಪಂದಿಸಿ: ಧಾರಾಕಾರ ಮಳೆಯಿಂದ ರಸ್ತೆ, ಸೇತುವೆ, ತಡೆಗೋಡೆಗಳಿಗೆ ಹಾನಿ ಸಂಭವಿ ಸಿದೆ. ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ ಜನಪ್ರತಿನಿಧಿಗಳ ಸಲಹೆ ಸೂಚನೆ ಪಡೆದು, ಪ್ರತ್ಯೇಕವಾಗಿ ಮಳೆಹಾನಿಯ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಕಂದಾಯ ಇಲಾಖೆಯಿಂದ ಎಲ್ಲಾ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲದ್ದರಿಂದ, ಆಯಾ ಇಲಾಖೆಗಳ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು. ಭೂ ಕುಸಿತದ ಸಂದರ್ಭ ರಸ್ತೆಯ ಮಣ್ಣು ತೆರವು, ಮುರಿದು ಬೀಳುವ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅರಣ್ಯ, ಲೋಕೋಪಯೋಗಿ ಮತ್ತು ಕಂದಾಯ ಇಲಾಖೆ ತುರ್ತು ಸ್ಪಂದನೆ ನೀಡಬೇಕೆಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸೂಚಿಸಿದರು.

Translate »