ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ
ಮೈಸೂರು

ವೈಮಾನಿಕ ದಾಳಿಯಲ್ಲಿ ಜೈಷ್ 4 ಕಟ್ಟಡಗಳು ಧ್ವಂಸ: ರಡಾರ್ ಚಿತ್ರಗಳಿಂದ ಖಚಿತ

March 3, 2019

ವಾಯುಪಡೆ ನಡೆಸಿದ ವೈಮಾನಿಕ ದಾಳಿ ಯಲ್ಲಿ ಬಾಲ್‍ಕೋಟ್‍ನ ಜೈಷ್ ಇ ಮೊಹ ಮ್ಮದ್ ಉಗ್ರ ಸಂಘ ಟನೆಯ ತರಬೇತಿ ಕೇಂದ್ರದ 4 ಕಟ್ಟಡ ಗಳನ್ನು ಧ್ವಂಸಗೊಳಿಸಿರುವುದು ರಡಾರ್ ಚಿತ್ರಗಳಿಂದ ಖಚಿತವಾಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಬಾಲ್‍ಕೋಟ್‍ನಲ್ಲಿ ಭಾರತ ವೈಮಾನಿಕ ದಾಳಿ ನಡೆಸಿ, ಸುರಕ್ಷಿತವಾಗಿ ಮರಳಿದ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿವೆ. ಆದರೆ, ದಾಳಿಯಲ್ಲಿ ಜೈಷ್ ಸಂಘಟನೆಯ ನಾಲ್ಕು ಕಟ್ಟಡಗಳು ಸಂಪೂರ್ಣ ಧ್ವಂಸವಾಗಿರುವುದು ರಡಾರ್ ಚಿತ್ರಗಳಲ್ಲಿ ಸ್ಪಷ್ಟವಾಗಿದೆ ಎಂದಿರುವ ಅಧಿಕಾರಿಗಳು, ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಎಂಬುದನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಾರತದ ಬೇಹುಗಾರಿಕಾ ಪಡೆ ಸಿಂಥೆಟಿಕ್ ಅಪಾರ್ಚರ್ ರಡಾರ್ (ಎಸ್‍ಎಆರ್) ಇಮೇಜರಿ ಮೂಲಕ ಸಂಗ್ರಹಿಸಿರುವ ಹಲವು ಸಾಕ್ಷ್ಯಗಳ ಪ್ರಕಾರ ಮಿರಾಜ್-2000 ಯುದ್ಧ ವಿಮಾನಗಳಿಂದ ಸಿಡಿಸಿದ ಎಸ್-2000 ಪ್ರಿಷಿಷನ್ ಗೈಡೆಡ್ ಮ್ಯುನಿಷನ್ (ಪಿಜಿಎಂ) ಕ್ಷಿಪಣಿಗಳು ಕಟ್ಟಡದ ಛಾವಣಿಯನ್ನು ಭೇದಿಸಿ ಕಟ್ಟಡ ಧ್ವಂಸಗೊಳಿಸಿರುವುದು ಖಚಿತವಾಗಿದೆ. ಇದೊಂದು ಮದರಸಾ ರೀತಿಯ ಸಮುಚ್ಚಯವಾಗಿತ್ತು. ಗೆಸ್ಟ್ ಹೌಸ್‍ನಲ್ಲಿ ಜೈಷ್ ಸಂಘಟನೆಯ ಪ್ರಮುಖ ಉಗ್ರ ಮೌಲಾನಾ ಮಸೂದ್ ಅಜರ್‍ನ ಸಹೋದರ ವಾಸವಾಗಿದ್ದ. ಇನ್ನೊಂದು ಎಲ್ ಆಕಾರದ ಕಟ್ಟಡದಲ್ಲಿ ತರಬೇತಿನಿರತ ಉಗ್ರರು ಇದ್ದರು. ಇನ್ನೊಂದು ಎರಡು ಅಂತಸ್ತಿನ ಕಟ್ಟಡದಲ್ಲಿ ಮದರಸಾದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಇರುತ್ತಿದ್ದರು. ಇನ್ನೊಂದು ಕಟ್ಟಡದಲ್ಲಿ ಅಂತಿಮ ಹಂತದ ತರಬೇತಿಯಲ್ಲಿದ್ದ ಉಗ್ರರು ವಾಸವಾಗಿದ್ದರು. ಈ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ದಾಳಿ ಸಂಘಟಿಸಲಾಗಿತ್ತು. ಅದು ಯಶಸ್ವಿಯಾಗಿದೆ ಎಂದು ಭಾರತದ ಬೇಹುಗಾರಿಕಾ ಪಡೆ ಮೂಲಗಳು ತಿಳಿಸಿವೆ.

ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ 300ರಿಂದ 350 ಉಗ್ರರು ಹತರಾಗಿದ್ದಾರೆ, ಕಟ್ಟಡಗಳು ಧ್ವಂಸಗೊಂಡಿವೆ ಎಂದೆಲ್ಲ ಹೇಳಲಾಗಿತ್ತು. ಆದರೆ, ದಾಳಿ ನಡೆದಿದ್ದನ್ನು ಒಪ್ಪಿಕೊಂಡಿದ್ದ ಪಾಕಿಸ್ತಾನ, ಯಾವುದೇ ಜೀವಹಾನಿಯಾಗಿಲ್ಲ ಎಂದು ಹೇಳಿತ್ತು. ಈ ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ದಾಳಿಯಲ್ಲಿ ಹತರಾಗಿರುವ ಉಗ್ರರ ಸಂಖ್ಯೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

Translate »