ಭಾರತದಲ್ಲಿ ವಂಶಾಡಳಿತಕ್ಕೆ  ಇಂದಿರಾಗಾಂಧಿಯೇ ಜವಾಬ್ದಾರರು
ಮೈಸೂರು

ಭಾರತದಲ್ಲಿ ವಂಶಾಡಳಿತಕ್ಕೆ ಇಂದಿರಾಗಾಂಧಿಯೇ ಜವಾಬ್ದಾರರು

March 15, 2019

ಮೈಸೂರು: ಕಳೆದ 70 ವರ್ಷಗಳ ಸ್ವತಂತ್ರ ಭಾರತದ ಅವಧಿಯನ್ನು ಖ್ಯಾತ ಹಿರಿಯ ಪತ್ರಕರ್ತ, ‘ದಿ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್’ ಸಂಪಾ ದಕೀಯ ಸಲಹೆಗಾರ ಟಿಜೆಎಸ್ ಜಾರ್ಜ್, ನಾಲ್ಕು ಹಂತಗಳಾಗಿ ವಿಂಗಡಿಸಿ, ವಿಶ್ಲೇಷಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಇಂಗ್ಲಿಷ್ ಮತ್ತು ಪತ್ರಿಕೋ ದ್ಯಮ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಜಯಲಕ್ಷ್ಮ ಮ್ಮಣ್ಣಿ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ‘ಆಂಗ್ಲ ಭಾಷೆ, ಸಾಹಿತ್ಯ ಮತ್ತು ಮಾಧ್ಯಮ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

1950ರ ದಶಕದ ನಂತರದ ಮೊದಲ ಹಂತ ಭಾರತದ ಸುವರ್ಣ ಯುಗ. ಆಗ ಅತ್ಯಂತ ಉತ್ಕøಷ್ಟ ಅನುಭವವುಳ್ಳ ಶ್ರೇಷ್ಠ ಸಾಹಿತಿಗಳಾದ ಆರ್.ಕೆ.ನಾರಾಯಣ್, ಶಿವರಾಮ ಕಾರಂತ, ರಾಷ್ಟ್ರಕವಿ ಕುವೆಂಪು, ಖ್ಯಾತ ನಟರಾದ ದಿಲೀಪ್‍ಕುಮಾರ್, ದೇವಾನಂದ್, ನರ್ಗಿಸ್, ಮಧು ಬಾಲಾ, ಗಾಯಕಿ ಲತಾ ಮಂಗೇಶ್ಕರ್, ವಿಜ್ಞಾನಿಗಳಾದ ಹೋಮಿ ಜಹಾಂಗೀರ್ ಬಾಬಾ ಮತ್ತು ಅಬ್ದುಲ್ ಕಲಾಂ ಅವರಿದ್ದ ಯುಗವದು ಎಂದು ನೆನಪಿಸಿಕೊಂಡರು.

ಚೀನಾ ಯುದ್ಧದ ನಂತರದ್ದು ಭಾರತದ ಪಾಲಿಗೆ ಅವಮಾನದ ದಿನಗಳು. ಇದರಿಂದ ಭ್ರಮನಿರಸನ ಗೊಂಡ ಜವಾಹರಲಾಲ್ ನೆಹರು ಅವರು ನಂತರದ 2 ವರ್ಷದಲ್ಲಿ ಮರಣ ಹೊಂದಿದರು. ನಂತರ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಲ್ಪಾವಧಿಗೆ ಪ್ರಧಾನಮಂತ್ರಿ ಯಾಗಿ ದೇಶದ ಹೊರಗೆ ಕೊನೆಯುಸಿರೆಳೆದರು. ಇದು ಎರಡನೇ ಹಂತ ಎಂದು ನುಡಿದರು.
ಮೂರನೇ ಹಂತ ‘ಭಾರತದ ವಂಶಾಡಳಿತ’ದ ಕಾಲಮಾನ ಎಂದು ಉಲ್ಲೇಖಿಸಿದ ಜಾರ್ಜ್, ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಬಹಳ ಅತ್ಯಂತ ಸಂಕೀರ್ಣ ವ್ಯಕ್ತಿತ್ವದವರು. ಅವರು ತನ್ನನ್ನು ತಾನು ಶ್ರೇಷ್ಠ ನಾಯಕಿ, ಚಿಂತಕಿ ಅಂದುಕೊಂಡಿದ್ದರು. ನೆಹರು ಅವರ ಪುತ್ರಿ ಎಂಬ ಕಾರಣದಿಂದಲೇ ಅವರು ಆ ರೀತಿಯ ಭಾವನೆ ಹೊಂದಿದ್ದರು ಎಂದರು.
1975ರ ಜನವರಿ 25ರಂದು ‘ತುರ್ತು ಪರಿಸ್ಥಿತಿ’ ಹೇರಿದ ವೇಳೆ ವಂಶಾಡಳಿತದ ವೈಭವೀಕರಣ ಆರಂಭವಾಯಿತಲ್ಲದೆ, ದೇಶಾದ್ಯಂತ ಭಯದ ವಾತಾ ವರಣ ನಿರ್ಮಾಣವಾಯಿತು. ಆಗ ಮುಖಂಡರುಗಳಾದ ಜಯಪ್ರಕಾಶ್ ನಾರಾಯಣ್, ಎ.ಬಿ.ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ರಾಮಕೃಷ್ಣ ಹೆಗಡೆ ಮತ್ತಿತರರು ತುರ್ತು ಪರಿಸ್ಥಿತಿ ಜಾರಿ ಮುನ್ನವೇ ಜೈಲು ಸೇರುವಂತಾ ಯಿತು ಎಂದೂ ಟಿಜೆಎಸ್ ಜಾರ್ಜ್ ತಿಳಿಸಿದರು.

ಅದು ಅಂತಹ ವಿದ್ಯಾವಂತನಲ್ಲದ, ಜನರಿಂದ ಆಯ್ಕೆ ಯಾಗದ ಸ್ವಯಂಪ್ರೇರಿತ ನಾಯಕ ಸಂಜಯ್ ಗಾಂಧಿಯ ಗಲಭೆಗಳ ಕಾಲವಾಗಿತ್ತು. ಪ್ರತಿಯೊಬ್ಬ ಭಾರ ತೀಯನೂ ಭಯದಿಂದಿದ್ದ ಸಮಯವದು. ಸ್ವತಃ ಇಂದಿರಾ ಗಾಂಧಿ ಅವರೇ ಆತನಿಗೆ ಹೆದರುತ್ತಿದ್ದರು ಎಂದರು.

ಏನದು, ವಂಶಾಡಳಿತದ ವೈಭವೀಕರಣವೆಂದರೆ? ಅದು ಒಂದು ಕುಟುಂಬ, ಅಂದರೆ, ಇಂದಿರಾ ಗಾಂಧಿ, ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ. ಈ ವಂಶಾವಳಿ ಗಾಂಧಿ ಪರಾಕ್ರಮ ಭಾರತದಲ್ಲಿ ಬಹಳ ಹಿಂದೆಯೇ ‘ಮೀಟೂ ಚಳವಳಿ’ಗೂ ಕಾರಣವಾಯಿತು. ಅದನ್ನು ಇತರ ನಾಯಕರೂ ಅನುಸರಿಸಿದರು ಎಂದು ಜಾರ್ಜ್ ವಿಶ್ಲೇಷಿಸಿದರು.

ಜಾರಕಿಹೊಳಿ, ಬಳ್ಳಾರಿ ಸಹೋದರರೊಂದಿಗೆ ಕರ್ನಾ ಟಕದಲ್ಲೂ ‘ಮೀಟೂ ಚಳವಳಿ’ ಆರಂಭವಾಯಿತು. ‘ಗೌಡ ಕುಟುಂಬ’ವಂತೂ ವಂಶಾಡಳಿತಕ್ಕೆ ಉತ್ತಮ ಉದಾಹರಣೆ. ಕುಟುಂಬದ ಯಜಮಾನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಭವಿಷ್ಯದ ಪ್ರಧಾನಿಯನ್ನಾಗಿಯೂ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿಯನ್ನು ಭವಿಷ್ಯದ ಸಹಜ ಮುಖ್ಯಮಂತ್ರಿ ಯನ್ನಾಗಿಯೂ ಬಿಂಬಿಸುತ್ತಿದ್ದಾರೆ ಎಂದರು.

ನಾಲ್ಕನೇ ಹಂತ, ‘ಧರ್ಮ ಮತ್ತು ರಾಜಕಾರಣ’ ಬಲು ಸೂಕ್ಷ್ಮ ವಿಷಯದ ಕಾಲ. ಅವನ ಅಥವಾ ಅವಳ ಧರ್ಮವನ್ನು ಯಾರೂ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಹುಟ್ಟಿನಿಂದ ಅನಿರೀಕ್ಷಿತವಾಗಿ ಬರುವಂತಹುದು. ನಂತರ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇನ್ನಿತರ ಧರ್ಮಕ್ಕೆ ಸೇರುವ ಅವಕಾಶವೂ ಇರುತ್ತದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಇದಕ್ಕೆ ವಿಭಿನ್ನ. ಏಕೆಂದರೆ ಅವರು ಕೊನೆಗೆ ಬೌದ್ಧ ಧರ್ಮ ಆಯ್ದು ಕೊಂಡರು. ಆದರೆ ಸಾಮಾನ್ಯ ಮನುಷ್ಯರಾದ ನಾವು ಹುಟ್ಟಿದ ಧರ್ಮಕ್ಕೇ ಅಂಟಿಕೊಂಡಿರುತ್ತೇವೆ. ಅದು ಹಲವು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ ಎಂದ ಅವರು, ಬಹುಶಃ ಪತ್ರಿಕೋದ್ಯಮವೂ ಅಲ್ಲಿಂದಲೇ ಬಂದಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಒಂದು ವೇಳೆ ನೀವೂ ಲೇಬಲ್ ಆದರೆ ಪೂರ್ವಗ್ರಹ ಪೀಡಿತರಾದಂತೆ. ದುರ್ದೈವವಶಾತ್ ನಾನು ಕ್ರಿಶ್ಚಿಯನ್ ಆಗಿ ಹುಟ್ಟಿದ್ದೇನೆ. ಹಾಗಾಗಿಯೇ ನನ್ನ ಬರಹಗಳಲ್ಲಿ ಕೆಲವರು ನನ್ನ ದೇಶಪ್ರೇಮ ಮತ್ತು ರಾಷ್ಟ್ರೀಯತೆಯನ್ನು ಪ್ರಶ್ನಿಸುತ್ತಾರೆ ಎಂದರು. ಧರ್ಮ ದೇವರನ್ನು ಬಳಸಿ ಕೊಳ್ಳುತ್ತದೆ, ಆದರೆ ದೇವರಿಗೆ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದರು.

ಇಂದು ಬಹುತೇಕ ಧಾರ್ಮಿಕ ಮುಖಂಡರು ವ್ಯಾಪಾರಿ ಗಳಾಗಿದ್ದಾರೆ. ‘ನಾನು ನಾಸ್ತಿಕ ಅಲ್ಲ. ಆದರೆ ಪಾದ್ರಿ ಯೋಗ್ಯನಲ್ಲ ಎಂಬುದು ತಿಳಿದಾಗಿನಿಂದ ಚರ್ಚ್‍ಗೆ ಹೋಗು ವುದನ್ನು ನಿಲ್ಲಿಸಿದೆ. ನನ್ನ ತಾಯಿ ಚರ್ಚ್‍ಗೆ ತಪ್ಪದೇ ಹೋಗ ಬೇಕೆಂದು ಹೇಳಿದ್ದರು. ಚರ್ಚ್ ಮೇಲಿನ ನಂಬಿಕೆಯೇ ಆಕೆಯನ್ನು ಅತ್ತ ಸೆಳೆಯುತ್ತಿದ್ದರೆ, ನಾನು ಚರ್ಚ್‍ನಿಂದ ದೂರವಾಗಲು ಅದೇ ಕಾರಣ ವಾಗಿತ್ತು’ ಎಂದರು.

ಸನಾತನ ಧರ್ಮದಂತಹ ಕಲ್ಪನೆಯ ಹಿಂದೂ ಧರ್ಮವೇ ಸತ್ಯ ಎಂದು ಪ್ರಶಂಸಿಸಿದ ಅವರು, ಅದು ಜ್ಞಾನೋದಯಗೊಳಿಸುವ ಉತ್ಕøಷ್ಟ ಧರ್ಮ. ಆದರೆ, ಪ್ರಸ್ತುತ ಅದು ಹಿಂದುತ್ವವಾಗಿದೆ, ಹಿಂದೂ ಧರ್ಮ ವಾಗಿಲ್ಲ. ಇದುವೇ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ನಂತರ ಜಾರ್ಜ್, ವಿದ್ಯಾರ್ಥಿಗಳೊಂದಿಗೆ ಪತ್ರಿಕೋ ದ್ಯಮ ಕುರಿತಂತೆ ಸಂವಾದದಲ್ಲಿ ಪಾಲ್ಗೊಂಡು ಹಲವು ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರ ನೀಡಿ ಸಂಶಯಗಳನ್ನು ದೂರ ಮಾಡಿದರು. ಮಹಾರಾಣಿ ಮಹಿಳಾ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಹೆಚ್.ಪ್ರಕಾಶ್, ಇಂಗ್ಲಿಷ್ ವಿಭಾ ಗದ ಮುಖ್ಯಸ್ಥರಾದ ಪ್ರೊ.ಗೀತಾ ಗಂಗಾಧರನ್, ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಘ ವೇಂದ್ರ, ಐಕ್ಯೂಎಸಿ ಕೋ-ಆರ್ಡಿನೇಟರ್ ಡಾ.ಎನ್. ರತ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಟಿಜೆಎಸ್ ಜಾರ್ಜ್ ಅವರ ಪತ್ನಿ ಶ್ರೀಮತಿ ಅಮು ಜಾರ್ಜ್, ‘ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ‘ಸ್ಟಾರ್ ಆಫ್ ಮೈಸೂರ್’ ಫೀಚರ್ ಎಡಿಟರ್ ನಿರಂಜನ್ ನಿಕ್ಕಂ, ಕಾಲೇಜಿನ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿ ನಿಯರು ಭಾಗವಹಿಸಿದ್ದರು.

ಸಾಮಾಜಿಕ ಜಾಲತಾಣ ನಿಯಂತ್ರಣ ತಪ್ಪುತ್ತಿದೆ
ಮೈಸೂರು: ಸಾಮಾಜಿಕ ಜಾಲತಾಣಗಳು ಇಂದು ನಿಯಂತ್ರಣ ತಪ್ಪುತ್ತಿದೆ ಎಂದು ಖ್ಯಾತ ಹಿರಿಯ ಪತ್ರಕರ್ತ, ಪ್ರಸಿದ್ಧ ಅಂಕಣಕಾರರೂ ಆದ ಟಿಜೆಎಸ್ ಜಾರ್ಜ್ ಇಂದಿಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ `ಇಂಗ್ಲಿಷ್ ಭಾಷೆ, ಸಾಹಿತ್ಯ ಮತ್ತು ಮಾಧ್ಯಮ’ ವಿಷಯ ಕುರಿತ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ಜಾಲತಾಣಗಳ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿ ನಿಯೊಬ್ಬರು ಕೇಳಿದ ಪ್ರಶ್ನೆಗೆ ಅವರು, ಸೋಷಿಯಲ್ ಮೀಡಿಯಾ ಇಂದು ನಿಯಂತ್ರಣ ಕಳೆದುಕೊಂಡಿದೆ. ಹಲವು ನಂಬಲು ಅಸಾಧ್ಯವಾದ ವಿಷಯಗಳನ್ನು ಜೋಡಿಸುತ್ತಿರುವುದರಿಂದ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಅದು ನಿಯಂತ್ರಣಕ್ಕೇ ಸಿಗದಷ್ಟು ವೇಗವಾಗಿದೆ. ಅದನ್ನು ಯಾರು ಹೇಗೆ ನಿಯಂತ್ರಿಸಬೇಕೆಂಬುದೇ ತಿಳಿಯುತ್ತಿಲ್ಲ ಎಂದರು.
ಆದರೆ ಮುದ್ರಣ ಮಾಧ್ಯಮದಲ್ಲಿ ಮೌಲ್ಯಯುತ ಜಡ್ಜ್ ಮೆಂಟ್ ಇರುತ್ತದೆ. ಅಲ್ಲಿ ಮೌಲ್ಯದ ಆಧಾರದ ಮೇಲೆ ಆ ಸುದ್ದಿ ಯನ್ನು ಪ್ರಕಟಿಸಬೇಕೆ? ಬೇಡವೆ ಎಂಬುದನ್ನು ಸಂಪಾದಕರು ನಿರ್ಧರಿಸುತ್ತಾರೆ. ಸಾರ್ವಜನಿಕರಿಗೆ ಅದರಿಂದ ಅನುಕೂಲವಾಗು ತ್ತದೆಯೇ ಅಥವಾ ತೊಂದರೆ ಆಗುತ್ತದೆಯೇ ಎಂಬುದನ್ನು ತುಲನೆ ಮಾಡಲಾಗುತ್ತದೆ ಎಂದು ಜಾರ್ಜ್ ನುಡಿದರು.

ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಉಲ್ಲೇಖಿಸಿ, ಪತ್ರಕರ್ತರಿಗೆ ಬೆದರಿಕೆ ಕುರಿತಾದ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗೌರಿ ಲಂಕೇಶ್ ಹತ್ಯೆಯಾದದ್ದು ಅವರ ಬರಹ ಅಥವಾ ಪತ್ರಿಕಾ ವೃತ್ತಿಗಾಗಿ ಅಲ್ಲ. ಆದರೆ ಪ್ರಗತಿಪರರೊಂದಿಗೆ ಇರಿಸಿಕೊಂಡಿದ್ದ ಒಡನಾಟದಿಂದಾಗಿ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವರು ಮೂಢನಂಬಿಕೆ ಮತ್ತು ದುರು ದ್ದೇಶ ಪೂರಿತರಾಗಿದ್ದಾರೆ. ಅಂತಹವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರು ಜನರನ್ನು ಸಾಯಿಸುತ್ತಾರೆ ಹಾಗೂ ಅವರ ನಂಬಿಕೆಗಳ ಮೇಲೆ ಅವರಿಗೇ ವಿಶ್ವಾಸವಿರುವುದಿಲ್ಲ. ಈ ಹಿಂದೆಲ್ಲಾ ದೇಶದಲ್ಲಿ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆ ಯರ ಪ್ರವೇಶ ಸಂಬಂಧ ಉಂಟಾಗಿರುವ ವಿವಾದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪ್ರದಾಯ ಮತ್ತು ನಂಬಿಕೆಗಳನ್ನು ಗೌರವಿಸಬೇಕು ಹಾಗೂ ಒಪ್ಪಿಕೊಳ್ಳಬೇಕು. ಕೇವಲ ಮಹಿಳೆಯರಿಗೆ ಪ್ರವೇಶ ಅವಕಾಶವಿರುವ ದೇವಸ್ಥಾನಗಳೂ ಇವೆ. ಶಬರಿಮಲೆ ವಿವಾದ ಕೇವಲ ನಂಬಿಕೆಗೆ ಸಂಬಂಧಪಟ್ಟಿದ್ದೇ ಹೊರತು, ಅದರಿಂದಾಚೆಗೆ ಬೇರೇನೂ ಇಲ್ಲ ಎಂದು ಉತ್ತರಿಸಿದರು.
ಪತ್ರಿಕೋದ್ಯಮದಲ್ಲಿನ ಭಯದ ವಾತಾವರಣದ ಬಗ್ಗೆ ಪ್ರಸ್ತಾ ಪಿಸಿದ ಜಾರ್ಜ್, ಈಗ ಮುದ್ರಣ ಮಾಧ್ಯಮದಲ್ಲಿ ನಿರ್ಭೀತಿ ಯಿಂದ ಕೆಲಸ ಮಾಡಲು ಆಗುತ್ತಿಲ್ಲ. ಹಿಂದೆ ಹೀಗಿರಲಿಲ್ಲ. ಉದಾಹರ ಣೆಗೆ ಬೋಫೋರ್ಸ್ ಹಗರಣ ಮಾಧ್ಯಮ ವರದಿಗಳಿಂದ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿತ್ತು. ಆದರೆ ಮಾಧ್ಯಮ ಗಳನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ತನಿಖಾ ವರದಿಗಳನ್ನು ನಿರ್ಭೀತಿ ಯಿಂದ ಪ್ರಕಟಿಸುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ ಎಂದರು.

ಸರ್ಕಾರ ಮುಚ್ಚಿಡುವ ವಿಷಯಗಳನ್ನು ಹೆಕ್ಕಿ ತೆಗೆಯುವುದೇ ಮಾಧ್ಯಮದ ಕೆಲಸ. ಅದನ್ನೇ ತನಿಖಾ ವರದಿ(ಇನ್ ವೆಸ್ಟಿಗೇಟಿವ್ ಜರ್ನಲಿಸಂ) ಅನ್ನೋದು. ಆದರೆ ಈಗ ಅಂತಹ ಸಾಹಸ ಮಾಡಲು ಹೊರಟರೆ ವಿರೋಧ, ಭಯ ಹುಟ್ಟಿಸು ತ್ತಾರೆ. ಮಾಧ್ಯಮದವರನ್ನೇ ಅನುಮಾನದಿಂದ ನೋಡುವ ವಾತಾವರಣವೂ ಇದೆ ಎಂದು ನುಡಿದರು.
ಪುಲ್ವಾಮಾ ದಾಳಿ, ಭಯೋತ್ಪಾದನಾ ನಿಗ್ರಹ, ದೇಶದ ಪ್ರಗತಿ ಯಲ್ಲಿ ಯುವ ಪತ್ರಕರ್ತರ ಪಾತ್ರ, ಪ್ರಸಕ್ತ ರಾಜಕೀಯ ಪರಿಸ್ಥಿತಿ ಹಾಗೂ ಲೋಕಸಭಾ ಚುನಾವಣೆ ಫಲಿತಾಂಶ, ಹಿಂದುತ್ವ ಸೇರಿದಂತೆ ವಿದ್ಯಾರ್ಥಿನಿಯರು ಕೇಳಿದ ಹಲವು ಪ್ರಶ್ನೆಗಳಿಗೆ ಟಿಜೆಎಸ್ ಜಾರ್ಜ್ ಸಂವಾದದಲ್ಲಿ ಉತ್ತರಿಸಿದರು.

.

Translate »