ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ
ಮೈಸೂರು

ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ

June 17, 2018

ಮಂಡ್ಯ:  ಜೀವನಾಡಿ ಕೃಷ್ಣರಾಜ ಸಾಗರ(ಕೆಆರ್‍ಎಸ್) ಜಲಾಶಯದ ನೀರಿನ ಮಟ್ಟ ನೂರರ ಗಡಿ ತಲುಪಿದೆ. ಹಾಗೆಯೇ ಇನ್ನಿತರೆ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚು ತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ.ಕೊಡಗಿನ ಭಾಗಮಂಡಲ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಉತ್ತಮವಾಗಿರು ವುದರಿಂದ ಕೆಆರ್‍ಎಸ್ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವುದ ರೊಂದಿಗೆ ನೀರಿನ ಮಟ್ಟ ನೂರಡಿ ತಲುಪಿದೆ. ಸದ್ಯ 28,132 ಕ್ಯೂಸೆಕ್ ಒಳ ಹರಿವಿದ್ದು ಜಲಾ ಶಯ ಮೈದುಂಬುತ್ತಿದೆ. ಹಾಗೆಯೇ 451 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ.

ಕಳೆದ ವರ್ಷ ಇದೇ ವೇಳೆಗೆ ಜಲಾಶಯದಲ್ಲಿ ಕೇವಲ 67.78 ಅಡಿ ನೀರಿತ್ತು. ಅಲ್ಲದೆ ಸತತ ಮೂರ್ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಎದುರಾಗಿದ್ದ ಪರಿಣಾಮ, ಅನ್ನದಾತ ಯಾವುದೇ ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದರು. ಕುಟುಂಬ ನಿರ್ವಹಣೆಗಾಗಿ ಅದೆಷ್ಟೋ ಮಂದಿ ನಗರಗಳಿಗೆ ಗುಳೆಹೋಗಿ, ದಿನಗೂಲಿಗೆ ಕೆಲಸ ಮಾಡುತ್ತಿದ್ದರು. ಜಲಾಶಯ ಬರಿದಾಗಿದ್ದರಿಂದ ಕೃಷಿಗಷ್ಟೇ ಅಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿತ್ತು. ಇದೀಗ ಉತ್ತಮ ಮಳೆಯಿಂದ ಜಲಾಶಯ ಭರ್ತಿಯಾ ಗುವ ನಿರೀಕ್ಷೆಯಿದ್ದು, ಕೃಷಿ ಚಟುವಟಿಕೆ ಚುರುಕು ಗೊಂಡಿದೆ. ಅಲ್ಲದೆ ಕುಡಿಯುವ ನೀರಿಗೆ ಕಾವೇರಿ ಆಶ್ರಿತ ನಗರಗಳ ನಿವಾಸಿಗಳಲ್ಲೂ ಸಂತಸ ತಂದಿದೆ.

ನಾಲ್ಕೈದು ದಿನದಲ್ಲೇ 15 ಅಡಿ ಭರ್ತಿ: ಕೊಡಗು ಭಾಗದಲ್ಲಿ ಎಡೆ ಬಿಡದೆ ಮಳೆಸುರಿಯುತ್ತಿರುವ ಕಾರಣ ಕೆಆರ್‍ಎಸ್ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು, ಕಳೆದ ನಾಲ್ಕೈದು ದಿನಗಳಲ್ಲೇ 15 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಸೋಮವಾರ 11 ಸಾವಿರ ಕ್ಯೂಸೆಕ್ ನೀರು ಹರಿದು 81ರ ಗಡಿ ದಾಟಿತ್ತು. ಮಂಗಳವಾರ 17 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಜಲಾಶಯ ಸೇರಿ 85 ಅಡಿ ಮುಟ್ಟಿತ್ತು. ಬುಧವಾರ ಸಂಜೆ ವೇಳೆಗೆ ಸುಮಾರು 26 ಸಾವಿರ ಕ್ಯೂಸೆಕ್ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ 88.60 ಅಡಿಗೇರಿತ್ತು. ಗುರುವಾರ ಬೆಳಗ್ಗೆ 90.80 ಅಡಿ, ಸಂಜೆ 92.30 ಅಡಿ, ಶುಕ್ರವಾರ ಸಂಜೆ 96.40 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಈ ವೇಳೆಗೆ 32,555 ಕ್ಯೂಸೆಕ್ ಒಳಹರಿವಿದ್ದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 98.20 ಅಡಿಯಷ್ಟಿದ್ದ ನೀರಿನ ಮಟ್ಟ ರಾತ್ರಿ ವೇಳೆಗೆ ನೂರರ ಗಡಿ ತಲುಪಿದೆ. ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಜಲಾಶಯದಿಂದ ಕೇವಲ 451 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಈವರೆಗೆ ಜಲಾಶಯದಲ್ಲಿ ಒಟ್ಟು 21.432 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನದಲ್ಲಿ 67.78 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಅಲ್ಲದೆ 1515 ಕ್ಯೂಸೆಕ್ ಒಳ ಹರಿವು ಹಾಗೂ 861 ಕ್ಯೂಸೆಕ್ ಹೊರ ಹರಿವಿನೊಂದಿಗೆ ಜಲಾಶಯದಲ್ಲಿ 6.256 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.

ಮೈದುಂಬಿರುವ ಕಬಿನಿ: ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗುವ ಹಂತದಲ್ಲಿದೆ. 2284 ಅಡಿ ಗರಿಷ್ಠ ಮಟ್ಟವಾಗಿದ್ದು, ಇಂದಿಗೆ ಸುಮಾರು 2280 ಅಡಿ ನೀರು ಸಂಗ್ರಹವಾಗಿದೆ. ಸದ್ಯ 33,153 ಕ್ಯೂಸೆಕ್ ಒಳ ಹಾಗೂ 35 ಸಾವಿರ ಕ್ಯೂಸೆಕ್ ಹೊರ ಹರಿವು ದಾಖಲಾಗಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ 2282 ಅಡಿಗಳಷ್ಟು ನೀರು ಸಂಗ್ರಹವನ್ನಷ್ಟೇ ಕಾಯ್ದು ಕೊಳ್ಳಲಾಗುತ್ತದೆ. ಅಂದರೆ ಇನ್ನೆರಡು ಅಡಿಗಳಷ್ಟು ನೀರು ಸಂಗ್ರಹವಾದರೆ ಜಲಾಶಯದ ಗರಿಷ್ಠ ಮಟ್ಟ ತಲುಪಿದಂತಾಗುತ್ತದೆ. ಈ ಬಾರಿ ಜೂನ್ ತಿಂಗಳಲ್ಲೇ ಜಲಾಶಯ ಭರ್ತಿಯಾಗಿರುವುದು ರೈತರಲ್ಲಿ ಸಂತಸ ತಂದಿದೆ. ಹಾರಂಗಿ ಜಲಾಶಯದ ಗರಿಷ್ಠ 2859 ಅಡಿಗಳಾಗಿದ್ದು, ಈಗಾಗಲೇ 2829 ಅಡಿ ನೀರಿದೆÉ. 914 ಕ್ಯೂಸೆಕ್ ಒಳ ಹಾಗೂ 30 ಕ್ಯೂಸೆಕ್ ಹೊರ ಹರಿವಿದೆ. ನುಗು ಜಲಾಶಯದ ಗರಿಷ್ಠ 110 ಅಡಿಗಳಲ್ಲಿ 80.44 ಅಡಿ ನೀರು ತುಂಬಿದೆ. ಹಾಗೆಯೇ ತಾರಕ ಜಲಾಶಯದ ಗರಿಷ್ಠ 2425 ಅಡಿಗಳಲ್ಲಿ 2240 ಅಡಿಗಳಷ್ಟು ನೀರು ಸಂಗ್ರಹವಾಗಿದೆ.

Translate »