ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ
ಮೈಸೂರು

ವಿಶೇಷ ಮಕ್ಕಳ ಹಾರೈಕೆ ಹೀಗಿರಲಿ: ಡಾ.ಎಂ.ಪುಷ್ಪವತಿ

March 28, 2020

ಮೈಸೂರು, ಮಾರ್ಚ್.28.(ಕರ್ನಾಟಕ ಸರ್ಕಾರ):  ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟವ ನಿಟ್ಟಿನಲ್ಲಿ ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಲಾಗಿದ್ದು, ಈ 21 ದಿನಗಳಲ್ಲಿ ವಿಶೇಷ ಮಕ್ಕಳನ್ನು ನಿಭಾಯಿಸಲು ಪೋಷಕರು ಸಹಕರಿಸಬೇಕೆಂದು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಅವರು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಿದ್ದ ಫೇಸ್‌ಬುಕ್ ಪೇಜ್ ಲೈವ್‌ನಲ್ಲಿ ಮಾತನಾಡಿದ ಅವರು, ಮನೆಯಲ್ಲಿಯೇ ವಿಶೇಷ ಮಕ್ಕಳ ಹಾರೈಕೆಯನ್ನು ಪೋಷಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ದೇಶಾದ್ಯಾಂತ ನಿಷೇದಾಜ್ಞೆ ಜಾರಿಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಮನೆಯಲ್ಲೇ ಇರುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ವಿಶೇಷ ಮಕ್ಕಳನ್ನು ಮನೆಯಲ್ಲಿ ನಿಭಾಯಿಸುವುದು ಪೋಷಕರಿಗೆ ಕರ್ತವ್ಯ. ಮನೆಯಲ್ಲಿನ ಎಲ್ಲಾ ಸದಸ್ಯರು ವಿಶೇಷ ಮಗುವಿನೊಂದಿಗೆ ಕಾಲ ಕಳೆಯುವುದು ಮುಖ್ಯವಾಗಿರುತ್ತದೆ ಎಂದರು.

ಮಕ್ಕಳಿಕೆ ಭಾಷೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮನೆಯಲ್ಲಿನ ಕೆಲವು ವಸ್ತುಗಳನ್ನು ಉಪಯೋಗಿಸಿಕೊಳ್ಳಬೇಕು. ಟೂತ್‌ಬ್ರಶ್‌ಗೆ ಪೇಸ್ಟ್ ಹಾಕುವುದರಿಂದ ಹಿಡಿದು ರಾತ್ರಿ ಮಲಗುವಾಗ ಮಾಡಬೇಕಾದ ಸಣ್ಣಪುಟ್ಟ ಕೆಲಸಗಳನ್ನು ನಿಧಾನವಾಗಿ ಹೇಳಿಕೊಡುವುದು ಅಗತ್ಯವಾಗಿರುತ್ತದೆ. ಪ್ರತಿಯೊಂದು ವಿಷಯವನ್ನು ಸ್ಪಷ್ಟವಾಗಿ ನಿಧಾನವಾಗಿ ಮಗುವಿಗೆ ಅರ್ಥಮಾಡಿಸಲು ಮನೆಯ ಸದಸ್ಯರು ಸಹಕರಿಸಿಬೇಕು ಎಂದು ಹೇಳಿದರು.

ಮಕ್ಕಳಿಗೆ ಕೇವಲ ಮೊಬೈಲ್ ಅಥವಾ ಟಿ.ವಿ ಮುಂದೆ ಕೂರಿಸುವುದು ಸೂಕ್ತವಲ್ಲ. ಬದಲಿಗೆ ಅವರಿಗೆ ಭೌದ್ಧಿಕ ಬೆಳವಣಿಗೆ ಆಗುವಂತಹ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಎಲ್ಲವನ್ನು ತಾಳ್ಮೆಯಿಂದ ಅರ್ಥಮಾಡಿಸುವ ಪ್ರಯತ್ನ ಮಾಡಬೇಕು. ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಆಟಿಕೆಯಾಗಿ ನೀಡಿ ಅದಕ್ಕೆ ವಿನೂತನ ರೂಪ ನೀಡುವಂತೆ ಹೇಳಬೇಕು. ಇದರಿಂದ ಅವರ ಮೆದುಳು ಚುರುಕುಗೊಳ್ಳುತ್ತದೆ ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರು ಯೋಗ ಮಾಡುವುದನ್ನು ರೂಢಿ ಮಾಡಿಕೊಳ್ಳುಬೇಕು. ಇದರಿಂದ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ಸಹಕಾರಿಯಾಗುತ್ತದೆ. ಅಂತೆಯೇ ವಿಶೇಷ ಮಕ್ಕಳಿಗೂ ಯೋಗ ಅತ್ಯವಶ್ಯಕವಾಗಿದೆ. ಸುಲಭವಾದ ಆಸನಗಳನ್ನು ಮಾಡಿಸಿ. ಇತರೆ ಮಕ್ಕಳೊಂದಿಗೆ ಯೋಗವನ್ನು ಮಾಡಿಸುದನ್ನು ಮರೆಯಬೇಡಿ ಎಂದರು.

ಎಲ್ಲರಿಗೂ ರಜೆ ಇರುವ ಹಿನ್ನೆಲೆ ಸದಸ್ಯರೆಲ್ಲಾ ಮನೆಯಲ್ಲಿಯೇ ಇರುವುದರಿಂದ ತಾಯಿಗೆ ಅಡಿಗೆ, ಮನೆ ಕೆಲಸ ಹೀಗೆ ಹಲವು ಕೆಲಸಗಳು ಇರುತ್ತದೆ. ಇದರ ಮಧ್ಯೆ ತನ್ನ ಮಗುವನ್ನು ನಿಗಾ ವಹಿಸಿ ನೋಡಿಕೊಳ್ಳುವುದು ಕಷ್ಟವಾಗಿರುತ್ತದೆ. ಹೀಗಾಗಿ ವಿಶೇಷ ಮಗುವನ್ನು ನಿಭಾಯಿಸುವುದರಲ್ಲಿ ತಂದೆ ಪಾತ್ರ ಅತೀ ಮುಖ್ಯವಾಗಿರುತ್ತದೆ. ಸಾಕಷ್ಟು ಸಮಯ ಇರುವುದರಿಂದ ತಂದೆಯೇ ಮಗುವಿನೊಂದಿಗೆ ಸದಾಕಾಲ ಇದ್ದು, ಪ್ರತಿಯೊಂದು ವಸ್ತು ಅಥವಾ ದಿನನಿತ್ಯದ ಸಣ್ಣಸಣ್ಣ ಕೆಲಸವನ್ನು ಆಗಾಗ್ಗೆ ಹೇಳುತ್ತಾ ಪ್ರಾಯೋಗಿಕವಾಗಿ ಕಲಿಸುವಂತೆ ಹೇಳಿದರು.

ಒಂದುವೇಳೆ ವಿಶೇಷ ಮಕ್ಕಳನ್ನು ನಿಭಾಯಿಸುವಲ್ಲಿ ಕಷ್ಟವಾಗುತ್ತಿದ್ದಲ್ಲಿ ವ್ಯಾಟ್ಸ್ಆಪ್ ಮೂಲಕ ಸಂಪರ್ಕಿಸಿ ಸಲಹೆ ಪಡೆಯಿರಿ. ಯಾವ ರೀತಿಯಲ್ಲಿ ಮಕ್ಕಳನ್ನು ಸಮಾಧಾನ ಪಡಿಸಬಹುದೆಂದು ಕೆಲವು ಮಾಹಿತಿಯನ್ನು ವಿವರವಾಗಿ ನೀಡುವುದಾಗಿ ತಿಳಿಸಿದರು.

Translate »