ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ
ಮೈಸೂರು

ವಾಲ್ಮೀಕಿ ರಸ್ತೆಯಿಂದ ಹೂಗುಚ್ಛ ಮಾರುವವರ ಎತ್ತಂಗಡಿ

August 1, 2018

ಮೈಸೂರು: ಕಳೆದ 15 ವರ್ಷಗಳಿಂದ ಮೈಸೂರಿನ ವಾಲ್ಮೀಕಿ ರಸ್ತೆಯ ಫುಟ್‍ಪಾತ್ ಮೇಲೆ ಹೂ ಗುಚ್ಛ ತಯಾರಿಸಿ ಮಾರುತ್ತಿದ್ದವರನ್ನು ಮೈಸೂರು ನಗರಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಪಡುವಾರಹಳ್ಳಿ ಬಳಿ ವಾಲ್ಮೀಕಿ ರಸ್ತೆಯಲ್ಲಿ ನಿರ್ಮಿಸಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಮತ್ತು ಹಾಸ್ಟೆಲ್ ಕಟ್ಟಡಗಳು ಕಾರ್ಯಾರಂಭಗೊಂಡಿರುವುದ ರಿಂದ ವಿದ್ಯಾರ್ಥಿನಿಯರು ಓಡಾಡಲು ಅಡ್ಡಿ ಯಾಗುತ್ತದೆ ಎಂಬ ಕಾರಣಕ್ಕಾಗಿ ವಾಲ್ಮೀಕಿ ರಸ್ತೆಯ ಫುಟ್‍ಪಾತ್‍ನಲ್ಲಿದ್ದ ಹೂಗುಚ್ಛ ಮಾರುವವರನ್ನು ನಗರ ಪಾಲಿಕೆ ಆರೋಗ್ಯ ಘಟಕದ ಅಧಿಕಾರಿಗಳು ಸೋಮವಾರ ತೆರವುಗೊಳಿಸಿದ್ದು, ಮುಂದೆ ಆ ಭಾಗದಲ್ಲಿ ವ್ಯಾಪಾರ ಮಾಡದಂತೆ ತಾಕೀತು ಮಾಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪಾಲಿಕೆ ಆರೋಗ್ಯಾಧಿಕಾರಿ ಡಾ|| ಡಿ.ಜಿ. ನಾಗರಾಜು, ಈ ಹಿಂದೆ ಮೆಟ್ರೋಪೋಲ್ ಸರ್ಕಲ್ ಬಳಿ ನಂಜರಾಜ ಬಹದ್ದೂರ್ ಛತ್ರದೆದುರು ಹೂ ಗುಚ್ಛ ಮಾರುತ್ತಿದ್ದವರನ್ನು ಅಲ್ಲಿ ಸಿಗ್ನಲ್ ಲೈಟ್ ಜಂಕ್ಷನ್ ಆದ ಕಾರಣ ಸಂಚಾರಕ್ಕೆ ಅಡ್ಡಿಯಾಗುತ್ತದೆ ಹಾಗೂ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರು, ಕಾಲೇಜು ಮತ್ತು ಹಾಸ್ಟೆಲ್‍ಗೆ ಹೋಗಲು ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ತೆರವುಗೊಳಿಸಲಾಗಿತ್ತು.

ನಂತರ ಅವರು ವಾಲ್ಮೀಕಿ ರಸ್ತೆಗೆ ಸ್ಥಳಾಂತರ ಗೊಂಡಿದ್ದರು. ಜೀವನೋಪಾಯಕ್ಕೆ ತೊಂದರೆ ಯಾಗುತ್ತದೆ ಎಂದು ಮಾನವೀಯತೆ ದೃಷ್ಟಿ ಯಿಂದ ಹಾಗೂ ಜನರಿಗೂ ಹೂವಿನ ಬೊಕ್ಕೆ ಗಳು ಸಿಗುತ್ತವೆ ಎಂಬ ಭಾವನೆಯಿಂದಾಗಿ ನಾವೂ ಸುಮ್ಮನಾಗಿದ್ದೆವು. ಆದರೆ, ಈಗ ಅಲ್ಲಿ ಮಹಾರಾಣಿ ಕಾಲೇಜು ಆರಂಭವಾಗಿರು ವುದರಿಂದ ವಿದ್ಯಾರ್ಥಿನಿಯರಿಗೆ ತೊಂದರೆ ಯಾಗುತ್ತದೆ ಎಂದು ಕಾಲೇಜು ಮುಖ್ಯಸ್ಥರು ಕೇಳಿಕೊಂಡಿರುವ ಹಿನ್ನೆಲೆಯಲ್ಲಿ ಫ್ಲವರ್ ಬೊಕ್ಕೆ ಮಾರುವವರನ್ನು ತೆರವುಗೊಳಿಸಿದ್ದೇವೆ ಎಂದು ಡಾ. ನಾಗರಾಜು ತಿಳಿಸಿದರು.

ಕಾಲೇಜು ಎದುರು ಫುಟ್‍ಪಾತ್ ಮೇಲೆ ತಲೆ ಎತ್ತಿದ್ದ ಕಾಫಿ, ಟೀ, ಪಂಕ್ಚರ್ ಅಂಗಡಿ ಗಳನ್ನು ತೆರವುಗೊಳಿಸಿದ್ದೇವೆ. ಅಲ್ಲಿ ಹೆಣ್ಣು ಮಕ್ಕಳು ಓಡಾಡುವುದರಿಂದ ಕಿರಿಕಿರಿ ಉಂಟಾಗದಿರಲೆಂದು ತಾವು ಈ ಕ್ರಮ ಕೈಗೊಂಡಿದ್ದು, ಆ ಜಾಗದಲ್ಲಿ ಯಾವುದೇ ಅಂಗಡಿ ಮುಂಗಟ್ಟು ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಚೆಲುವಾಂಬ ಪಾರ್ಕ್ ಬಳಿ ಫುಟ್‍ಪಾತ್‍ನಲ್ಲಿ ಸ್ಥಳ ಗುರುತು

ಎತ್ತಂಗಡಿ ಮಾಡಲಾಗಿರುವ ಹೂವಿನ ಬೊಕ್ಕೆ ಮಾರಾಟ ಮಾಡುವವರನ್ನು ಕಲಾಮಂದಿರ ರಸ್ತೆಯ ರಂಗಾಯಣ ಗೇಟ್ ಎದುರು ರೈಲ್ವೆ ಹಳಿ ಹಾದು ಹೋಗುವ ಕಡೆ ಫುಟ್‍ಪಾತ್‍ಗೆ ಸ್ಥಳಾಂತರಿಸಬೇಕೆಂದು ಯೋಚಿಸಿದ್ದೆವು. ಆದರೆ ಅಲ್ಲಿ ವ್ಯಾಪಾರ ಮಾಡಲು ರೈಲ್ವೆ ಅಧಿಕಾರಿಗಳು ವಿರೋಧಿಸು ತ್ತಿದ್ದಾರೆ ಎಂದು ನುಡಿದರು.

ಆದ ಕಾರಣ ಪಾಲಿಕೆ ವ್ಯಾಪ್ತಿಯಲ್ಲಿರುವ ವಿ.ವಿ.ಮೊಹಲ್ಲಾ ಚೆಲುವಾಂಬ ಪಾರ್ಕ್ ಬಳಿ ಫುಟ್‍ಪಾತ್‍ನಲ್ಲಿ (ಸಿಎಫ್‌ಟಿಆರ್‌ಐ ಶಾಲೆ ಎದುರು) ಸ್ಥಳ ಗುರ್ತಿಸಿದ್ದು, ವ್ಯಾಪಾರಸ್ಥರೂ ಅಲ್ಲಿಗೆ ಹೋಗಲು ಸಿದ್ಧರಿದ್ದಾರೆ. ಅಲ್ಲಿ ರಸ್ತೆ ಮತ್ತು ಫುಟ್‍ಪಾತ್ ವಿಸ್ತಾರವಾಗಿದೆಯಲ್ಲದೆ ಸಂಚಾರ ವಿರಳವಾಗಿರುತ್ತದೆ ಎಂದೂ ಡಾ. ನಾಗರಾಜ್ ತಿಳಿಸಿದರು.

ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ಸಂಬಂಧ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಂಡು ವ್ಯಾಪಾರಸ್ಥರಿಗೆ ತಿಳಿಸುತ್ತೇವೆ ಎಂದ ಅವರು, ಅವರಿಗೆ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿಲ್ಲವಾದ್ದರಿಂದ ನಾವು ಕೇವಲ ಸ್ಥಳ ಗುರ್ತಿಸಿಕೊಡುತ್ತೇವೆಯೇ ಹೊರತು ಬೇರೆ ಯಾವುದೇ ಸೌಲಭ್ಯ ಒದಗಿಸುವುದಿಲ್ಲ ಎಂದರು.

ನಾವು ಕಳೆದ 15 ವರ್ಷಗಳಿಂದ ಈ ವ್ಯಾಪಾರವನ್ನೇ ನಂಬಿ ಜೀವನ ಸಾಗಿಸು ತ್ತಿದ್ದೇವೆ. ಈಗ ಎತ್ತಂಗಡಿ ಮಾಡಿದ್ದಾರೆ. ಬೇರೆ ಜಾಗ ತೋರಿಸಿದ್ದು, ಅಲ್ಲಿ ಅಂಗಡಿ ಇಟ್ಟುಕೊಳ್ಳುತ್ತೇವೆ ಎಂದು ವ್ಯಾಪಾರಿಗಳಾದ ನಾಗೇಂದ್ರ ಮತ್ತು ರಂಗಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ನಮಗೆ ಇಂತದ್ದೆ ಜಾಗ ಬೇಕೆಂದಿಲ್ಲ, ಎಲ್ಲಿಯಾದರೂ ಸರಿ ಜಾಗ ತೋರಿಸಿದರೆ, ಅಲ್ಲಿ ಯಾರಿಗೂ ತೊಂದರೆ ಕೊಡದೇ ನಮ್ಮ ಪಾಡಿಗೆ ನಾವು ವ್ಯಾಪಾರ ಮಾಡುತ್ತೇವೆ ಎಂದು ತಿಳಿಸಿದರು.

Translate »