ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ
ಕೊಡಗು

ಕೊಡಗಲ್ಲಿ ಹತ್ತನೇ ದಿನವೂ ಅಬ್ಬರಿಸಿದ ಮಳೆರಾಯ: ಹಾನಿ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ

July 15, 2018

ಮಡಿಕೇರಿ: ಮಳೆ ಮತ್ತು ಗಾಳಿಯ ತೀವ್ರತೆ ಮಡಿಕೇರಿ ನಗರವನ್ನು 10 ನೇ ದಿನವೂ ಬಾಧಿಸಿದ್ದು, ಮಳೆ ಹಾನಿ ಘಟನೆಗಳು ಮುಂದುವರಿದಿದೆ. ನಗರದ ಉಪ ವಲಯ ಅರಣ್ಯಾಧಿಕಾರಿ ಕಚೇರಿ ಪಕ್ಕದಲ್ಲಿರುವ ಮನೆಯೊಂದರ ಹಿಂಬದಿ ಭಾರಿ ಭೂ ಕುಸಿತಗೊಂಡಿದೆ. ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಈ ಅನಾಹುತ ಘಟಿಸಿದ್ದು, ಮನೆಗೆ ಹಾನಿ ಸಂಭವಿಸಿದೆ. ಕಾವೇರಪ್ಪ ಎಂಬವರ ಮನೆಯ ಹಿಂಬದಿ ಬರೆ ಕುಸಿದ ಪರಿಣಾಮ, ಮನೆಗೂ ಹಾನಿ ಸಂಭವಿಸಿದೆ. ಮನೆಯ ಕೌಂಪೌಂಡ್ ಗೋಡೆ ಮತ್ತು ಇಂಟರ್‍ಲಾಕ್ ಸಂಪೂರ್ಣ ಕುಸಿದಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳು ತತ್ತರಿಸಿವೆ. ಮಳೆ ಗಾಳಿಯಿಂದ ಆಸ್ತಿ-ಪಾಸ್ತಿಗಳಿಗೆ ಹಾನಿ ಸಂಭವಿಸಿದ್ದು, ಗ್ರಾಮೀಣ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಕಡಗದಾಳುವಿನ ಮುಕ್ಕಾಟಿರ ಬಿದ್ದಪ್ಪ ಮತ್ತು ಇಂದ್ರಾ ಸೋಮಯ್ಯ ಎಂಬವರ ಮನೆಗೆ ಭಾರಿ ಗಾತ್ರದ ಮರ ಉರುಳಿ ಬಿದ್ದಿದ್ದು, ಮನೆಯ ಹಿಂಭಾಗ ಸಂಪೂರ್ಣ ಧ್ವಂಸಗೊಂಡಿದೆ.

ಕಾಲೂರು ಭಾಗದ ರಸ್ತೆಗಳ ಮದ್ಯದಲ್ಲೇ ಜಲ ಉಕ್ಕಿ ಹರಿಯುತ್ತಿದ್ದು, ರಸ್ತೆಗಳೆಲ್ಲ ಗುಂಡಿ ಬಿದ್ದಿದೆ. ಹಮ್ಮಿಯಾಲದ ಬಳಿ ಭಾರಿ ಭೂ ಕುಸಿತದಿದ್ದು, ತೆರವು ಕಾರ್ಯ ನಡೆಸಿದ ಬಳಿಕ ಸಂಚಾರ ವ್ಯವಸ್ಥೆ ಸುಗಮಗೊಂಡಿದೆ. ಮತ್ತಷ್ಟು ಭೂ ಕುಸಿಯುವ ಸಾಧ್ಯತೆಯಿರುವುದರಿಂದ ಈ ಮಾರ್ಗದಲ್ಲಿ ಸರಕಾರಿ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಮಾಹಿತಿ ಲಭ್ಯವಾಗಿದೆ.

ಹಮ್ಮಿಯಾಲ ಸೇತುವೆ ಬಳಿ ಮೋರಿ ಬಂದ್ ಆಗಿದ್ದು, ರಸ್ತೆಯ ಮೇಲೆ ನೀರು ಹರಿದು, ಮಾಂದಲ್‍ಪಟ್ಟಿಗೆ ತೆರಳುವ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಜೀಪು ಹೊರತುಪಡಿಸಿದರೆ ಬೇರಾವುದೇ ವಾಹನಗಳು ಅತ್ತ ಸಂಚಾರಿಸದಂತಹ ಪರಿಸ್ಥಿತಿ ತಲೆದೋರಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ.

ಗಾಳಿಬೀಡು ವ್ಯಾಪ್ತಿಯಲ್ಲಿ ಈಗಾಗಲೇ 180 ಇಂಚು ಮಳೆ ಸುರಿದಿದ್ದು, 1 ತಿಂಗಳು ಹಿಂದೆ ಭತ್ತದ ಕೃಷಿ ಕಾರ್ಯ ನಡೆಸಲಾಗಿತ್ತು. ಆದರೆ ಅತಿವೃಷ್ಟಿಯಿಂದಾಗಿ ಭತ್ತದ ಗದ್ದೆಗಳೆಲ್ಲ ಸಮುದ್ರದಂತಾಗಿದ್ದು, ಭತ್ತದ ಸಸಿಗಳು ಕೊಳೆಯಲು ಆರಂಭಿಸಿವೆ. ಇದರಿಂದಾಗಿ ಕೃಷಿಕರು ಕಂಗಾಲಾಗಿದ್ದು, ದಿಕ್ಕು ತೋಚದಂತಾಗಿದ್ದಾರೆ.

ಮಡಿಕೇರಿ ತಾಲೂಕಿನಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಗದಾಳು, ಗಾಳಿಬೀಡು, ಕಾಲೂರು, ಹಮ್ಮಿಯಾಲ ಪ್ರದೇಶಕ್ಕೆ ತೆರಳಿದ ಶಾಸಕರು ಭೂಕುಸಿತ, ಮನೆ ಧ್ವಂಸ, ರಸ್ತೆ ಹಾನಿಯ ಕುರಿತು ಪರಿಶೀಲಿಸಿದರು. ಮರಬಿದ್ದು ಮನೆಗೆ ಹಾನಿಯಾದ ಕುಟುಂಬಕ್ಕೆ ಮಾನವೀಯತೆ ನೆಲೆಯಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ತಹಶೀಲ್ದಾರ್‍ಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಹಮ್ಮಿಯಾಲದ ಬಳಿ ಖಾಸಗಿ ವ್ಯಕ್ತಿಯೋರ್ವರು ಅವೈಜ್ಞಾನಿಕವಾಗಿ ಮಣ್ಣು ತೆಗೆದಿದ್ದರಿಂದ ರಸ್ತೆಗೆ ಭೂಕುಸಿದು ಹಾನಿಯಾಗಿದೆ ಎಂದು ಗಾಳೀಬೀಡು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಭಾಷ್ ಶಾಸಕರ ಗಮನ ಸೆಳೆದರು. ನಿವೇಶನ ಮಾಲೀಕರಿಗೆ ತುರ್ತು ನೋಟೀಸ್ ನೀಡುವಂತೆ ಶಾಸಕ ರಂಜನ್ ತಹಿಶೀಲ್ದಾರ್‍ಗೆ ಸೂಚನೆ ನೀಡಿದರು.

ಹಮ್ಮಿಯಾಲ ಸೇತುವೆ ಬಳಿ ಮೋರಿ ನಿರ್ಮಾಣ ಕಾಮಗಾರಿ ನಡೆಸಲು ನೀಲಿನಕ್ಷೆ ತಯಾರಿಸಿ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಶಾಸಕ ಅಪ್ಪಚ್ಚು ರಂಜನ್, ಇಂಜಿನಿಯರ್‍ಗೆ ಸೂಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಭಾರಿ ಮಳೆಯಿಂದ ಜಿಲ್ಲೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಸಂಭವಿಸಿದೆ. ಜಿಲ್ಲಾಡಳಿದ ಬಳಿ 10 ಕೋಟಿ ಪ್ರಕೃತಿ ವಿಕೋಪ ಅನುದಾನ ಲಭ್ಯವಿದ್ದು, ಮಳೆ ಹಾನಿ ಸಂತ್ರಸ್ಥರಿಗೆ ವಿಳಂಬ ರಹಿತವಾಗಿ ಪರಿಹಾರ ವಿತರಿಸಬೇಕೆಂದು ಹೇಳಿದರು. ಕಂದಾಯ, ಲೋಕೋಪಯೋಗಿ ಸಚಿವರುಗಳು ಕೂಡ ಜಿಲ್ಲೆಯಲ್ಲಿ ಸಂಭವಿಸಿರುವ ಮಳೆ ಹಾನಿ ಪರಿಹಾರಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ವಿಶೇಷ ನೆರವು ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಹಾಜರಿದ್ದರು.

Translate »