ಸಿಎಂರಿಂದಲೇ ಮೇಲುಕೋಟೆ ಕಾಂಗ್ರೆಸ್ ಮುಕ್ತ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ
ಮಂಡ್ಯ

ಸಿಎಂರಿಂದಲೇ ಮೇಲುಕೋಟೆ ಕಾಂಗ್ರೆಸ್ ಮುಕ್ತ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ

May 3, 2018

ಪಾಂಡವಪುರ: ಸಿಎಂ ಸಿದ್ದರಾಮಯ್ಯ ಮೇಲುಕೋಟೆ ಕ್ಷೇತ್ರವನ್ನು ಕಾಂಗ್ರೆಸ್ ಮುಕ್ತ ಮಾಡಲು ತೀರ್ಮಾನಿಸಿ ದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಲೇವಡಿ ಮಾಡಿದರು.

ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣ ದಲ್ಲಿ ರೈತಸಂಘ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಈ ಚುನಾವಣೆ ಯಲ್ಲಿ ಮೇಲುಕೋಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಾಕದೇ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡ ರನ್ನು ತಬ್ಬಲಿ ಮಾಡಿದ್ದಾರೆ. ಆದರೆ ನಾನು ಅವರನ್ನು ತಬ್ಬಲಿ ಮಾಡಲು ಬಿಡುವು ದಿಲ್ಲ. ಅವರನ್ನು ಪಕ್ಷಕ್ಕೆ ಬರಮಾಡಿ ಕೊಂಡು ಗೌರವಯುತವಾಗಿ ನಡೆಸಿ ಕೊಳ್ಳಲಾಗುವುದು ಎಂದರು.

ಸಿಎಂ ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ವಾಗಿ ನಿರ್ಲಕ್ಷಿಸಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಂದ ಮೇಲೆ ಅನೇಕ ದಿಗ್ಗಜರು ಪಕ್ಷ ಬಿಡಬೇಕಾಯಿತು. ಅದರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೂಡ ಒಬ್ಬರು ಎಂದ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಅವರುಗಳು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ ಮೇ 12ರಂದು ನಡೆಯುವ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಹಲವು ಕಾಂಗ್ರೆಸ್ ನಾಯಕರು, ಮಂಡ್ಯ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡದೇ ಕಾವೇರಿ ನೀರು ಹರಿ ಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ, ಕಾವೇರಿ ನೀರು ಬಿಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಹೀಗಾಗಿ ಜಿಲ್ಲೆಗೆ ಸಿಎಂ ಬಂದರೆ ರೈತರೇ ತಕ್ಕಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭ ವಾಗಿದ್ದು, ಇನ್ನೆರಡು ದಿನಗಳಲ್ಲಿ ಬಿಜೆಪಿಯ ಹಲವು ಮುಖಂಡರು ಹಾಗೂ ಕಾರ್ಯ ಕರ್ತರು ಜೆಡಿಎಸ್‍ಗೆ ಸೇರ್ಪಡೆಗೊಳ್ಳಲಿ ದ್ದಾರೆ. ಅಲ್ಲದೇ ಶೀಘ್ರದಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕೆನ್ನಾಳು ಹಾಗೂ ದುದ್ದ ಹೋಬಳಿಗೆ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಧರ್ಮರಾಜು, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಮಂಜು, ಡಾ.ಸಿದ್ದೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್‍ಎಸ್‍ವಿ ಸ್ವಾಮೀಗೌಡ, ಎಸ್.ಎ. ಮಲ್ಲೇಶ್ ರಾಮಚಂದ್ರು, ದಲಿತ ಮುಖಂಡ ಎಂ.ಬಿ.ಶ್ರೀನಿವಾಸ್, ಪುಟ್ಟಣ್ಣ, ಚಂದ್ರಶೇಖರ್, ಬೆಟ್ಟಸ್ವಾಮೀಗೌಡ, ವೈರಮುಡಿಗೌಡ, ಮಾಜಿ ಪುರಸಭಾಧ್ಯಕ್ಷ ನಾಸೀರ್, ಏಜಾಜ್ ಆಲಿಖಾನ್ ಸೇರಿದಂತೆ ಹಲವರಿದ್ದರು.

Translate »