ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಕೊಡಗು

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

July 26, 2018

ನವದೆಹಲಿ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸತ್‍ನಲ್ಲಿ ಇಂದು ಕೊಡಗಿನ ಮಳೆ ಹಾನಿಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸಂಕಷ್ಟದಲ್ಲಿರುವ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಚುಚ್ಚಿದರು. ಕೇಂದ್ರ ಸರ್ಕಾರವು ಕೊಡಗಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿದರು.

ಸಂಸತ್‍ನಲ್ಲಿ ಇಂದು ಸಭಾಧ್ಯಕ್ಷರ ಸ್ಥಾನದಲ್ಲಿ ಉಪ ಸಭಾಧ್ಯಕ್ಷ ತಮಿಳುನಾಡಿನ ತಂಬಿದುರೈ ಅವರು ಆಸೀನರಾಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮಾತನಾಡಲು ಅವಕಾಶ ದೊರೆಯಿತು.

ಕರ್ನಾಟಕದ ದಕ್ಷಿಣ ಭಾಗ ತೀವ್ರ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ವೇಳೆ ತಾವು (ತಂಬಿದುರೈ) ಸ್ಪೀಕರ್ ಸ್ಥಾನವನ್ನು ಅಲಂಕರಿಸಿರುವುದು ಅತೀವ ಸಂತಸವನ್ನುಂಟು ಮಾಡಿದೆ ಎಂದು ತಮ್ಮ ಮಾತನ್ನು ಆರಂಭಿಸಿದ ಪ್ರತಾಪ್ ಸಿಂಹ, ಕಾವೇರಿ ವಿಚಾರದಲ್ಲಿ ತಮಿಳುನಾಡು ಜನತೆ ನಾನು ಪ್ರತಿನಿಧಿಸುತ್ತಿರುವ ಕೊಡಗು ಜಿಲ್ಲೆಗೆ ಆಭಾರಿಯಾಗಿರಬೇಕು. ಕಾವೇರಿ ಜನ್ಮ ತಾಳುವುದೇ ಕೊಡಗಿನಲ್ಲಿ. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಹಾರಂಗಿ, ಕಬಿನಿ, ಹೇಮಾವತಿ, ಕೆಆರ್‌ಎಸ್‌ ಜಲಾಶಯಗಳು ಭರ್ತಿಯಾಗಿವೆ. ಪ್ರತಿ ನಿತ್ಯ 50 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದರಿಂದ ಅಲ್ಲಿನ ಮೆಟ್ಟೂರು ಜಲಾಶಯವು ಭರ್ತಿಯಾಗಿದೆ. ಹೀಗಾಗಿ ನೀವು (ತಮಿಳುನಾಡಿನವರು) ನಮ್ಮ (ಕೊಡಗು) ಜನರಿಗೆ ಆಭಾರಿಯಾಗಿರಬೇಕು ಎಂದು ಹೇಳಿದರು.

ನಮಗೆ 1ನೇ ತರಗತಿ ಓದುವ ಪುಟ್ಟ ಮಗಳಿದ್ದಾಳೆ. ಆಕೆ ಶಾಲೆಯಿಂದ ಬಂದಾಗ `ರೈನ್ ರೈನ್ ಗೋ ಅವೇ, ಕಮ್ಸ್ ಎಗೈನ್ ಅನದರ್ ಡೇ…., ಡ್ಯಾಡಿ ವಾಂಟ್ಸ್ ಟು ಪ್ಲೇ ರೈನ್ ರೈನ್ ಗೋ ಅವೇ…’, ಎಂದು ಉತ್ಸಾಹದಿಂದ ಹಾಡುತ್ತಾಳೆ. ಆದರೆ ನಾವು ಮಳೆಯನ್ನು ಆನಂದಿಸುತ್ತೇವೆ, ಆಸ್ವಾದಿಸುತ್ತೇವೆ ಎಂದು ಹೇಳುತ್ತಲೇ ಮಳೆಯಿಂದ ಉಂಟಾಗಿರುವ ಅನಾಹುತದ ಬಗ್ಗೆ ತಮ್ಮ ಮಾತನ್ನು ತಿರುಗಿಸಿದರು.

ಆದರೆ ಈ ಬಾರಿಯ ಮಳೆಯಿಂದ ಕೊಡಗಿನ ರಸ್ತೆಗಳು ಕೊಚ್ಚಿ ಹೋಗಿವೆ. ಕಾಫಿ, ಕರಿಮೆಣಸು ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ಶೇ.30ರಷ್ಟು ಕಾಫಿ ಹಾಗೂ ಶೇ.15ರಷ್ಟು ಕರಿಮೆಣಸು ಕೊಡಗಿನಲ್ಲಿ ಉತ್ಪಾದನೆಯಾಗುತ್ತದೆ. ಈ ಬಾರಿ ಮಳೆಯಿಂದಾಗಿ ಈ ಬೆಳೆಗಳೆಲ್ಲವೂ ನಾಶವಾಗಿವೆ. ಇಡೀ ರಸ್ತೆಯ ಜಾಲ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿ ಸಹ ಸಂಚರಿಸಲು ಆಗದ ರೀತಿಯಲ್ಲಿ ಹಾಳಾಗಿವೆ. ಪ್ರಮುಖ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಕೊಡಗಿನ ದುಸ್ಥಿತಿಯ ಬಗ್ಗೆ ವಿವರಿಸಿದರು.

ನಾವು ರಾಜ್ಯ ಸರ್ಕಾರದಿಂದ ಕೊಡಗಿಗೆ ವಿಶೇಷ ಪ್ಯಾಕೇಜ್ ನಿರೀಕ್ಷಿಸಿದ್ದೆವು. ಆದರೆ ಅದು ದೊರೆತಿಲ್ಲ. ಮೋದಿ ಅವರ ಸರ್ಕಾರ ನಮ್ಮ ಬೇಡಿಕೆಯನ್ನು ಆಲಿಸಿ ಅದನ್ನು ಈಡೇರಿಸುತ್ತದೆ ಎಂಬ ಭರವಸೆ ನಮಗಿದೆ. ಎಲ್ಲಾ ರಾಜ್ಯ ಸರ್ಕಾರಗಳಿಗೂ ನೆರವು ನೀಡುವಲ್ಲಿ ಕೇಂದ್ರ ಸರ್ಕಾರ ದಾಖಲೆ ನಿರ್ಮಿಸಿದೆ ಎಂದು ಹೇಳುತ್ತಾ, ವಿವಿಧ ಪತ್ರಿಕೆಗಳಲ್ಲಿ ಕೊಡಗಿನ ಹಾನಿಯ ಬಗ್ಗೆ ಪ್ರಕಟವಾಗಿರುವ ಸುದ್ದಿಗಳ ಶೀರ್ಷಿಕೆಗಳನ್ನು ಸದನದ ಮುಂದಿಟ್ಟು, ಮತ್ತೆ ಹಾನಿಯ ಬಗ್ಗೆ ವಿವರಿಸಲು ಆರಂಭಿಸಿದ ಪ್ರತಾಪ್ ಸಿಂಹ, ಮಳೆಯಿಂದಾಗಿ ಕೊಡಗಿನಲ್ಲಿ ವಿದ್ಯುತ್ ಸಂಪೂರ್ಣವಾಗಿ ಕಡಿತವಾಗಿದೆ. ಕೆ.ಸಿ.ವೇಣುಗೋಪಾಲ್, ಕರುಣಾಕರನ್ ಮತ್ತಿತರರು ಕೇರಳಾಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕೈಜೋಡಿಸಿ ಮನವಿ ಮಾಡುತ್ತಿದ್ದಾರೆ. ಇದೇ ವೇಣುಗೋಪಾಲ್ ಅವರು ಕಳೆದ ಎರಡು ವರ್ಷಗಳಿಂದ ಕರ್ನಾಟಕ ಕಾಂಗ್ರೆಸ್‍ನ ಉಸ್ತುವಾರಿಯಾಗಿದ್ದರು. ಕಳೆದ ಐದು ವರ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‍ನವರು ಜನರಿಂದ ತಿರಸ್ಕೃತರಾದರೂ, ಹಿಂಬಾಗಿಲಿನಿಂದ ಮತ್ತೆ ಅಧಿಕಾರ ಹಿಡಿದಿದ್ದಾರೆ. ಐದು ವರ್ಷ ಅವರು ಆಡಳಿತ ನಡೆಸಿದಾಗ ಕೊಡಗಿಗೆ ಒಂದು ಸಣ್ಣ ಪ್ಯಾಕೇಜ್ ಸಹ ನೀಡಿಲ್ಲ ಎಂದು ದೂರಿದರು.

ಅದರ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಗಿಗೆ 1800 ಕೋಟಿ ರೂ. ಪ್ಯಾಕೇಜ್ ಕಲ್ಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಐದು ವರ್ಷಗಳಲ್ಲಿ 300 ಕೋಟಿ ರೂ. ಅನುದಾನ ಘೋಷಿಸಿ, ಅದರಲ್ಲಿ ಕೇವಲ ಶೇ.50ರಷ್ಟನ್ನು ಮಾತ್ರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷತೆಯಿಂದಾಗಿ ಕೊಡಗಿನ ರಸ್ತೆಗಳು ಹಾಳಾಗಿವೆ. ಕೊಡಗಿನಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದೆ.

ಧ್ರುವನಾರಾಯಣ ಅವರು ಪ್ರತಿನಿಧಿಸುತ್ತಿರುವ ಚಾಮರಾಜನಗರದಲ್ಲಿ 157 ಮನೆಗಳಿಗೆ ಹಾನಿಯಾಗಿದೆ. ಮಡಿಕೇರಿಯಲ್ಲಿ 200 ಮನೆಗಳಿಗೆ ಹಾನಿಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಮೈಸೂರಿನಲ್ಲಿ 313 ಮನೆ ಕುಸಿದಿವೆ. ಜಿಲ್ಲಾಧಿಕಾರಿಗಳ ಬಳಿ 187 ಕೋಟಿ ರೂ. ಕೊಳೆಯುತ್ತಾ ಬಿದ್ದಿದ್ದರೂ, ಸಂತ್ರಸ್ಥರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದು ರಾಜ್ಯ ಸರ್ಕಾರ ನಿಷ್ಕ್ರೀಯವಾಗಿರುವುದಕ್ಕೆ ಸಾಕ್ಷಿಯಾಗಿದ್ದು, ಇಂತಹ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಭಾಗಿಯಾಗಿದೆ ಎಂದರು.

ಪ್ರತಿ ನಿತ್ಯ ವಿಷ ಕುಡಿಯುತ್ತಿದ್ದೇನೆ ಎಂದು ಕರ್ನಾಟಕದ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅದು ಅವರು ಅಧಿಕಾರದಲ್ಲುಳಿಯಲು ವಿಷ ಸೇವಿಸುತ್ತಿದ್ದಾರೆ. ಕಾಂಗ್ರೆಸ್ ಅವರಿಗೆ ವಿಷ ಹಾಕಿ ಹೆಚ್ಚಿನ ಸಚಿವ ಸ್ಥಾನ ಪಡೆಯುವ ಮೂಲಕ ಹೆಚ್ಚು ಅಧಿಕಾರ ಪಡೆದಿದೆಯೇ ಹೊರತು, ಬೇರೆ ಯಾವುದೇ ಪ್ರಯೋಜನವಿಲ್ಲ ಎಂದ ಪ್ರತಾಪ್ ಸಿಂಹ, ಕಾಂಗ್ರೆಸ್‍ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕರ್ನಾಟಕದಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಆ ಸಂದರ್ಭದಲ್ಲಿ ವೇಣುಗೋಪಾಲ್ ಎಲ್ಲಿ ಅಡಗಿ ಕುಳಿತ್ತಿದ್ದರು. ಆಗ ಅವರು ಮುಖ್ಯಮಂತ್ರಿಗಳಿಗೆ ಈ ವಿಚಾರದ ಬಗ್ಗೆ ಏನೂ ಹೇಳಲಿಲ್ಲ. ಆದರೆ ಈಗ ಇಲ್ಲಿ ಬಂದು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದು ವಿಷಾದಕರ ಎಂದು ಪ್ರತಾಪ್ ಸಿಂಹ ಹೇಳಿದರು.

2004ರಿಂದ 2014ರವರೆಗೆ 10 ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ 3579.86 ಕೋಟಿ ಎನ್‌ಡಿಆರ್‌ಎಫ್‌ ಅನುದಾನ ಮತ್ತು 1634 ಕೋಟಿ ಎಸ್‌ಡಿಆರ್‌ಎಫ್ ಅನುದಾನ ಸೇರಿದಂತೆ ಒಟ್ಟು 4822 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆದರೆ ಮೋದಿಯವರ ಸರ್ಕಾರ ಕೇವಲ 4 ವರ್ಷದಲ್ಲಿ 5122 ಕೋಟಿ ಎನ್‌ಡಿಆರ್‌ಎಫ್‌ ಅನುದಾನ ಮತ್ತು 799.99 ಕೋಟಿ ಎಸ್‌ಡಿಆರ್‌ಎಫ್ ಅನುದಾನ ಸೇರಿದಂತೆ ಒಟ್ಟು 5922 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ವಿವರಿಸಿದರು.

ಪ್ರತೀ ಬಾರಿ ಸರ್ವ ಪಕ್ಷ ಸಭೆಯಲ್ಲಿ ಕಾವೇರಿ ನೀರಿನ ಬಗ್ಗೆ ಚರ್ಚಿಸುವ ಕಾಂಗ್ರೆಸ್ ನಾಯಕರು, ಸಂಕಷ್ಟ ಪರಿಸ್ಥಿತಿಯಲ್ಲಿರುವ ಕೊಡಗಿನ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸಿಲ್ಲ. ಕಳೆದ 4 ವರ್ಷಗಳಿಂದ ನಾನು ಕೊಡಗಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡುತ್ತಿದ್ದೇನೆ. ಆದರೆ ಇದೂವರೆಗೂ ರಾಜ್ಯ ಸರ್ಕಾರ ಯಾವುದೇ ಪ್ಯಾಕೇಜ್ ಅನ್ನು ಕೊಡಗಿಗೆ ನೀಡಿಲ್ಲ. ಪ್ರತೀ ಬಾರಿ ಮಳೆಯಾದಾಗಲೂ ಕೊಡಗಿನಲ್ಲಿ ಮನೆ-ಮಠ, ಫಸಲು ಎಲ್ಲವೂ ಹಾಳಾಗುತ್ತಿವೆ. ಕಾಫಿ, ಅಡಿಕೆ, ಕರಿಮೆಣಸು ಬೆಳೆಗಳು ನಾಶವಾಗುತ್ತಿವೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಇತ್ತ ಗಮನ ಹರಿಸಿಲ್ಲ ಎಂದು ಅವರು ಹೇಳಿದರು.

ಪ್ರತೀ ಬಾರಿ ಕಾವೇರಿ ತುಲಾ ಸಂಕ್ರಮಣದಲ್ಲಿ ಕೊಡಗಿಗೆ ಬಂದು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಗೌರವಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಈ ಬಾರಿಯೂ ಸಹ ಕರ್ನಾಟಕ ಮುಖ್ಯಮಂತ್ರಿ ಜೊತೆಗೆ ತಮಿಳ್ನಾಡಿನ ಮುಖ್ಯಮಂತ್ರಿಗಳಿಗೂ ಈ ಸದನದ ಮೂಲಕ ಮನವಿ ಮಾಡುತ್ತಿದ್ದೇನೆ. “ಕೊಡಗಿಗೆ ಬನ್ನಿ. ಕಾವೇರಿ ಮಾತೆಗೆ ಪೂಜೆ ಮಾಡುವ ಮೂಲಕ ಗೌರವ ಸಲ್ಲಿಸಿ, ಇಗ್ಗುತಪ್ಪ ದೇವರ ದರ್ಶನ ಮಾಡಿ’’ ಎಂದರು. ಕರ್ನಾಟಕದ ಅರ್ಧದಷ್ಟು ಜನ ಕಾವೇರಿ ಕೊಳ್ಳದಲ್ಲೇ ವಾಸಿಸುತ್ತಿದ್ದಾರೆ. ಕಾಂಗ್ರೆಸ್ ಸದಸ್ಯರಿಗೂ ಮನವಿ ಮಾಡುತ್ತೇನೆ. ಕೊಡಗಿಗೆ ಭೇಟಿ ನೀಡಿ, ಕಾವೇರಿ ಮಾತೆಗೆ ಗೌರವ ಸಲ್ಲಿಸಿ. ಕರ್ನಾಟಕಕ್ಕೆ ಕಾವೇರಿ ಎಲ್ಲವನ್ನೂ ಕೊಟ್ಟಿದೆ. ಕಾವೇರಿಗೆ ನಾವು ಸದಾ ಆಭಾರಿಯಾಗಿರಬೇಕಾಗಿದೆ ಎಂದರು.

ಕರ್ನಾಟಕದ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಕೇಂದ್ರಕ್ಕೆ ನಿಯೋಗ ಬನ್ನಿ. ಅನಂತಕುಮಾರ್ ಅವರು ಇಲ್ಲೇ ಇದ್ದಾರೆ. ಅವರಿಗೆ ಕರ್ನಾಟಕದ ಬಗ್ಗೆ ಅಪಾರ ಕಾಳಜಿ, ಕಳಕಳಿ ಇದೆ. ಕಲ್ಲಿದ್ದಲು ಪೂರೈಕೆ ನಿಂತು ಹೋಗಿದ್ದಾಗ ಕೇಂದ್ರದ ಗಮನ ಸೆಳೆದು ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಟ್ಟವರು ಅವರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಇದ್ದ 4 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು 13500 ಕಿ.ಮೀ.ಗೆ ವಿಸ್ತರಣೆ ಮಾಡಲಾಗಿದೆ. ಇದು ಪ್ರಧಾನಿ ಮೋದಿ ಅವರು ಕರ್ನಾಟಕದ ಮೇಲಿಟ್ಟಿರುವ ಪ್ರೀತಿ ಹಾಗೂ ಕಳಕಳಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಸದಸ್ಯರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ. ಕೇಂದ್ರಕ್ಕೆ ನಿಯೋಗವನ್ನು ಕರೆತನ್ನಿ. ನಾವು ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತೇವೆ ಎಂದು ಪ್ರತಾಪ್ ಸಿಂಹ ಹೇಳಿದರು.

ಇದೇ ವೇಳೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಲ್ಲಿ ಬದಲಾವಣೆಯನ್ನು ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರತಾಪ್ ಸಿಂಹ ಮನವಿ ಮಾಡಿದರು. ಪ್ರಕೃತಿ ವಿಕೋಪದಲ್ಲಿ ಮನೆ ಹಾನಿಯಾದರೆ ಕೇವಲ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಈ ಹಣದಿಂದ ಮನೆ ಪುನರ್ ನಿರ್ಮಾಣ ಮಾಡುವುದಿರಲಿ, ರಿಪೇರಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಎನ್‌ಡಿಆರ್‌ಎಫ್‌ ನಿಯಮಾವಳಿಯಲ್ಲಿ ಬದಲಾವಣೆ ತಂದು ಪ್ರಕೃತಿ ವಿಕೋಪ ನಿಧಿ ಪರಿಹಾರವನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ ಅವರು, ಕೊನೆಯದಾಗಿ ಈ ನಾಲ್ಕು ವರ್ಷದಲ್ಲಿ ಎರಡನೇ ಬಾರಿಗೆ ಸದನದಲ್ಲಿ ಮಾತನಾಡಲು ತಮಗೆ ಅವಕಾಶ ಕಲ್ಪಿಸಿದ ಸ್ಪೀಕರ್‍ಗೆ ವಂದನೆ ಸಲ್ಲಿಸಿದರು.

Translate »