ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು
ಕೊಡಗು

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು

July 26, 2018

ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲಿ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪಿಸಿದೆ. ಕಳೆದೊಂದು ದಿನದ ಅವಧಿ ಯಲ್ಲಿ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆಗಳನ್ನು ಆವರಿಸಿದೆ.

ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿ ನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ ವಾಗಿ 3 ಇಂಚಿನಷ್ಟು ಮಳೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿ ನದಿ ನೀರಿನ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯಲಾರಂಭಿಸಿದ್ದು, ವಾಹನ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ.

ಪುನರ್ವಸು ಮಳೆಯ ಅಬ್ಬರದಿಂದ ವಾರಗಟ್ಟಲೆ ಕ್ಷೇತ್ರ ಪ್ರವಾಹದಿಂದ ಆವೃತ್ತವಾಗಿ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಿದ್ದು, ‘ತ್ರಿವೇಣಿ’ ಸಂಗಮದಲ್ಲಿ ಕಾವೇರಿ ನದಿ ಉಕ್ಕಿ ಹರಿಯಲಾರಂಭಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 3 ಇಂಚಿಗೂ ಹೆಚ್ಚಿನ ಮಳೆಯಾಗಿದೆ. ಶೀತ ಗಾಳಿ ಮತ್ತು ದಟ್ಟ ಮಂಜು ನಗರವನ್ನು ಆವರಿಸಿಕೊಂಡಿದ್ದು, ವಾಹನ ಚಾಲಕರು ಹೆಡ್ ಲೈಟ್‍ಗಳನ್ನು ಉರಿಸಿಕೊಂಡು ವಾಹನ ಚಲಾಯಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಸೋಮವಾಪೇಟೆ ತಾಲೂಕಿನ ಪುಷ್ಟ ಗಿರಿ ತಪ್ಪಲಿನ ಪ್ರದೇಶಗಳಲ್ಲಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.ಕಳೆದ ಒಂದು ತಿಂಗಳಿನಿಂದ ಸುರಿಯು ತ್ತಿರುವ ಧಾರಾಕಾರ ಮಳೆಗೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಬಿರುಕು ಕಾಣಿಸಿಕೊಂಡಿದ್ದು, ಕಾಟಕೇರಿ ಬಳಿ ರಸ್ತೆ ಸಂಪೂರ್ಣ ಕುಸಿತ ಕಂಡಿದೆ.

ಪುನರ್ವಸು ಮಳೆಯ ನಂತರ ಪುಷ್ಯ ಕೂಡ ತನ್ನ ವೇಗವನ್ನು ಹೆಚ್ಚಿಸಿ ಕೊಂಡಿದ್ದು, ಕಳೆದ 24 ಗಂಟೆಗಳಲ್ಲಿ ಸುರಿದ ನಿರಂತರ ಮಳೆಯಿಂದ ಮತ್ತೆ ಸಾರ್ವಜನಿಕ ಆಸ್ತಿಗೆ ಹಾನಿಯಾಗುವ ಆತಂಕ ಎದುರಾಗಿದೆ. ನದಿ, ತೊರೆಗಳು ತುಂಬಿ ಹರಿಯುತ್ತಿದ್ದು, ರಸ್ತೆಗಳು ಕೂಡ ಜಲಾವೃತಗೊಂಡಿವೆ. ಮಳೆ ಹೆಚ್ಚಾದ ಕಾರಣ ಕಾಟಕೇರಿ ಬಳಿ ಮಡಿಕೇರಿ-ಮಂಗಳೂರು ಹೆದ್ದಾರಿ ಮಂಗಳವಾರ ರಾತ್ರಿ ಕುಸಿದಿದೆ.

ರಸ್ತೆಯ ಶೇ.50 ರಷ್ಟು ಭಾಗ ಅಪಾಯ ದಂಚಿನಲ್ಲಿದ್ದು, ಮುಂಜಾಗೃತಾ ಕ್ರಮವಾಗಿ ಪೊಲೀಸರು ಬ್ಯಾರೀಕೇಡ್‍ಗಳನ್ನು ಅಳವಡಿಸಿ ದ್ದಾರೆ. ಈ ಮಾರ್ಗದಲ್ಲಿ ವಾಹನ ಸಂಚಾರ ದುಸ್ತರವಾಗಿದ್ದು, ಭಾರೀ ವಾಹನಗಳ ಸಂಚಾ ರದಿಂದಾಗಿ ಮತ್ತೆ ರಸ್ತೆ ಸಂಪೂರ್ಣವಾಗಿ ಕುಸಿಯುವ ಸಾಧ್ಯತೆಯಿದೆ.

ಮಕ್ಕಂದೂರು ಆತಂಕ: ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿಯಲ್ಲಿ ಬಿರುಕು ಮೂಡಿ ಆತಂಕ ಹುಟ್ಟಿಸಿದ್ದ ಮಕ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಯಾಗಿದೆ. ಮನೆ ಬಿರುಕು ಬಿಟ್ಟು ಅತಂತ್ರ ಸ್ಥಿತಿಯನ್ನು ಎದುರಿಸುತ್ತಿರುವ ಮಂಜು ನಾಥ್ ಎಂಬವರ ಮನೆ ಸದಸ್ಯರಿಗೆ ಭೂಮಿ ಯೊಳಗೆ ಅಂತರ್ಜಲ ಹರಿಯುತ್ತಿರುವ ಶಬ್ಧ ಕೇಳಿ ಬರತೊಡಗಿದೆ. ಮಂಜುನಾಥ್ ಅವರ ಪ್ರಕಾರ ಕಳೆದ 24 ಗಂಟೆಗಳಿಂದ ಮಕ್ಕಂದೂರಿನಲ್ಲಿ ಉತ್ತಮ ಮಳೆಯಾಗುತ್ತಿ ರುವುದರಿಂದ ಭೂಮಿ ಬಿರುಕು ಬಿಟ್ಟ ಪ್ರದೇಶ ದಲ್ಲಿ ಜಲ ಹರಿವಿನ ಶಬ್ಧ ಹೆಚ್ಚಾಗಿದೆ.

ತಮ್ಮ ಮನೆಯ ಮೇಲ್ಭಾಗದಲ್ಲಿರುವ ನೆರೆ ಮನೆಯೊಂದರಲ್ಲೂ ಕೂಡ ಬಿರುಕು ಮೂಡಲು ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ. ಮಕ್ಕಂದೂರು ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಭೂಮಿ ಮತ್ತಷ್ಟು ಬಿರುಕು ಬಿಡುವ ಸಾಧ್ಯತೆಗಳಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

Translate »