ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ
ಕೊಡಗು

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಪ್ರವಾಸಿಗನ ರಕ್ಷಣೆ

July 14, 2018

ಮಡಿಕೇರಿ: ಹೋಂ ಸ್ಟೇಗೆ ಬಂದಿದ್ದ ಪ್ರವಾಸಿಗರೋರ್ವರು ಮಳೆಯ ತೀವ್ರತೆಯ ನಡುವೇ ಕಿರು ಸೇತುವೆ ದಾಟುವ ಸಂದರ್ಭ ಆಯ ತಪ್ಪಿ ನದಿಗೆ ಬಿದ್ದು, ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಬೀರುಗ ಗ್ರಾಮದಲ್ಲಿ ನಡೆದಿದೆ.

ಬೀರುಗ ಗ್ರಾಮದಲ್ಲಿರುವ ಅಜ್ಜಮಾಡ ಚಿಮ್ಮ ಎಂಬುವವರ ಹೋಂಸ್ಟೇಗೆ ಬೆಂಗಳೂರಿನಿಂದ ಬಂದಿದ್ದ ಪ್ರವಾಸಿಗರ ತಂಡ ಶುಕ್ರವಾರ ಹೋಂಸ್ಟೇ ಬಳಿಯೇ ಇರುವ ನದಿಯನ್ನು ಕಿರಿದಾದ ಸೇತುವೆ ಮೇಲೆ ದಾಟುತ್ತಿತ್ತು. ಈ ಸಂದರ್ಭ ಸಂದೀಪ್ ಎಂಬವರು ಆಯತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಬಿದ್ದಿದ್ದಾರೆ.

ಕೂಡಲೇ ನದಿಗಿಳಿದ ಚಿಮ್ಮ, ಹಗ್ಗವನ್ನು ಎಸೆದು ಹರಿಯುವ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದೀಪ್‍ಗೆ ಹಗ್ಗ ಸಿಕ್ಕುವಂತೆ ಮಾಡಿದ್ದಾರೆ. ಬಳಿಕ ಚಿಮ್ಮ ಹಗ್ಗದ ಸಹಾಯ ದಿಂದ ಸಂದೀಪ್ ಅವರನ್ನು ನದಿಯಿಂದ ಮೇಲೆಕ್ಕೆ ಎತ್ತಿದ್ದಾರೆ.

ಈ ಸಂದರ್ಭ ನದಿಯ ಇಕ್ಕೆಲಗಳಲ್ಲಿ ನಿಂತಿದ್ದ ಇತರ ಪ್ರವಾಸಿಗರು ಗಾಬರಿ ಯಿಂದ ಏನು ಮಾಡುವುದೆಂದು ತೋಚದೇ ಕಂಗಾಲಾಗಿದ್ದರು. ಸಂದೀಪ್ ಜೀವ ರಕ್ಷಿಸಿಕೊಂಡ ಬಳಿಕ ಉಳಿದೆಲ್ಲಾ ಪ್ರವಾಸಿಗರು ನಿರಾಳರಾದರು. ತುಂಬಿ ಹರಿಯುತ್ತಿರುವ ತೊರೆಯಲ್ಲಿ ಪ್ರವಾಸಿಗರನ್ನು ಚಿಮ್ಮ ಹಗ್ಗದ ನೆರವಿನಿಂದ ಒಬ್ಬೊಬ್ಬರಾಗಿ ದಾಟಿಸುವ ಸಂದರ್ಭ ಈ ಘಟನೆ ನಡೆದಿದೆ.

Translate »