ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ
ಮಂಡ್ಯ

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳ 11ನೇ ದಿನದ ಪುಣ್ಯಸ್ಮರಣೆ: ಸದಾಶಿವ ಸ್ವಾಮೀಜಿ ಸೇವೆ ಅನನ್ಯ

July 16, 2018

ಪಾಂಡವಪುರ: ಲಿಂಗೈಕ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಶ್ರದ್ಧಾ ಭಕ್ತಿಯಿಂದ ಮಠದಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಶ್ವತ ವಾದ ಕೆಲಸ ಮಾಡಿದ್ದಾರೆ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗಸ್ವಾಮಿಜೀ ತಿಳಿಸಿದರು.

ತಾಲೂಕಿನ ಬೇಬಿಬೆಟ್ಟದ ಶ್ರೀರಾಮ ಯೋಗಿಶ್ವರ ಮಠದ ಆವರಣದಲ್ಲಿ ಭಾನು ವಾರ ನಡೆದ ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿ ಗಳ 11ನೇ ದಿನದ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಮೇಲು-ಕೀಳೆಂಬ ಭಾವನೆ ಬಿಟ್ಟು ಭಕ್ತರ ಮನೆ ಮನೆಗೆ ತೆರಳಿ ಧರ್ಮ ಪ್ರಚಾರ ಮಾಡುವ ಮೂಲಕ ಭಕ್ತರ ಪ್ರೀತಿ ಸಂಪಾದಿ ಸಿದ್ದರು. ಕೊನೆಗೆ ಭಕ್ತರ ಮನೆಯಲ್ಲೇ ಸಾವನ್ನಪ್ಪಿದ್ದರು. ಸದಾಶಿವ ಸ್ವಾಮೀಜಿಗಳು ಭೌತಿಕವಾಗಿ ನಮ್ಮನ್ನಗಲಿರಬಹುದು. ಆದರೆ ಅವರ ಆತ್ಮ ಸದಾ ನಮ್ಮ ಜತೆಯಲ್ಲೇ ಇರುತ್ತದೆ ಎಂದರು.

ಮಠದ ಅಭಿವೃದ್ಧಿಗೆ ಸಚಿವ ಸಿ.ಎಸ್.ಪುಟ್ಟರಾಜು, ಅಣ್ಣನ ಪುತ್ರ ಸಿ.ಅಶೋಕ್ ಕೈ ಜೋಡಿಸಿ ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಸದಾಶಿವಸ್ವಾಮೀಜಗಳ ಅಂತ್ಯಕ್ರಿಯೆ ದಿನವೂ ಸ್ಥಳದಲ್ಲಿದ್ದು, ಕೊನೆಯವರೆಗೂ ದುಡಿದಿದ್ದಾರೆ. ನಿಜಕ್ಕೂ ಅವರ ಸೇವೆಗೆ ಮಠ ಆಭಾರಿಯಾಗಿರುತ್ತದೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಣ್ಣ ನೀರಾವರಿ ಸಚಿವ ಸಚಿವ ಸಿ.ಎಸ್. ಪುಟ್ಟರಾಜು, ಮರಿದೇವರು ಸ್ವಾಮೀಜಿಗಳ ಆರ್ಶೀವಾದದಿಂದ ನಾನು ರಾಜಕೀಯ ಪ್ರವೇಶಿಸಿದೆ. ಎಂದಿಗೂ ಮತಗಟ್ಟೆಗೆ ತೆರಳಿ ಮತ ಚಲಾಯಿಸದ ಮರಿದೇವರು ಸ್ವಾಮೀಜಿಗಳು ನನ್ನ ಮೊದಲ ಚುನಾವಣೆಯಲ್ಲಿ ನನ್ನ ಪರ ಮತ ಹಾಕಿದರು. ಅವರ ಆಶೀರ್ವಾದದಿಂದ 2 ಬಾರಿ ಜಿಪಂ ಸದಸ್ಯನಾಗಿ, 3 ಬಾರಿ ಶಾಸಕನಾಗಿ, ಒಮ್ಮೆ ಸಂಸದನಾಗಿ, ಇದೀಗ ಸಚಿವನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ ಎಂದರು.

ಲಿಂಗೈಕ್ಯ ಶ್ರೀಸದಾಶಿವ ಸ್ವಾಮೀಜಿಗಳು ಮರಿದೇವರು ಸ್ವಾಮೀಜಿಗಳ ಶಿಷ್ಯರಾಗಿ ಮಠದ ಜವಾಬ್ದಾರಿ ವಹಿಸಿಕೊಂಡ ಬಳಿಕ ಮಠವನ್ನು ಅಭಿವೃದ್ಧಿಪಡಿಸಿ, ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿದ್ದದ್ದರು. ಶ್ರೀಗಳು ಧರ್ಮ ಪ್ರಚಾರ ಮಾಡುವ ಮೂಲಕ ಸಾಮಾಜಿಕ ಪರಿವರ್ತನೆಗೆ ಮುಂದಾಗಿದ್ದ ಅವರು, ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರು. ಇದರಿಂದಾಗಿ ಶ್ರೀಗಳು ಬೇಗ ಲಿಂಗೈಕ್ಯರಾದರು ಎಂದು ಬೇಸರ ವ್ಯಕ್ತ ಪಡಿಸಿದರು.

ತ್ರಿನೇತ್ರಶ್ರೀ ಮಾತನಾಡಿ, ದೇಶದ ಪರಂ ಪರೆಯಲ್ಲಿ ಸಮಾಜ, ರಾಷ್ಟ್ರಕ್ಕಾಗಿ ಸುಖ ಜೀವನನ್ನು ತ್ಯಜಿಸಿ ಬದುಕುವವರು ಕೇವಲ ಮಠಾಧೀಶರು ಮಾತ್ರ. ಅದೇ ರೀತಿ ಬೇಬಿ ಬೆಟ್ಟದ ಸದಾಶಿವ ಸ್ವಾಮೀಜಿ ಗಳು 3ದಶಕ ಗಳ ಕಾಲ ಮಠದಲ್ಲಿ ಸೇವೆ ಸಲ್ಲಿಸಿ ಮಠವನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚ ನಗಿರಿ ಕೊಮ್ಮೇರಹಳ್ಳಿ ಶಾಖಾಮಠದ ಶ್ರೀಪುರುಷೋತ್ತಮನಂದ ಸ್ವಾಮೀಜಿ, ಬೇಬಿಬೆಟ್ಟದ ಕಿರಿಯ ಸ್ವಾಮೀಜಿ ಶ್ರೀಗುರು ಸಿದ್ದೇಶ್ವರ ಸ್ವಾಮೀಜಿ, ವೀರಾಜಪೇಟೆ ಅರಮೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ತೆಂಡೆಕೆರೆ ಬಾಳೆಹೊನ್ನೂರು ಶಾಖಾಮಠದ ಶ್ರೀಗಂಗಾಧರಶಿವಾಚಾರ್ಯ ಸ್ವಾಮೀಜಿ, ಕೆ.ಆರ್.ನಗರದ ಲಾಳನಹಳ್ಳಿ ಮಠದ ಜಯದೇವಿತಾಯಿ, ಜಿಪಂ ಸದಸ್ಯ ಸಿ.ಅಶೋಕ್, ಅನುಸೂಯ, ತಾಪಂ ಅಧ್ಯಕ್ಷೆ ಪೂರ್ಣಿಮಾ, ಸದಸ್ಯರಾದ ಸಿ.ಎಸ್.ಗೋಪಾಲ ಗೌಡ, ಗೋವಿಂದಯ್ಯ, ಬಿಜೆಪಿ ಮುಖಂಡ ಅರವಿಂದ್, ತಾ. ವೀರಶೈವ ಮಹಾಸಭಾ ಅಧ್ಯಕ್ಷ ಎಸ್. ಮಂಜುನಾಥ್, ದ್ಯಾವಪ್ಪ, ಟಿ.ಪಿ.ಶಿವಕುಮಾರ್, ಮಹದೇವಪ್ಪ, ಮಂಡಿ ಬೆಟ್ಟಹಳ್ಳಿ ಮಂಜುನಾಥ್, ನಂಜುಂಡಸ್ವಾಮಿ, ರಾಜಶೇಖರ್ ಸೇರಿದಂತೆ ಹಲವರಿದ್ದರು.

Translate »