ಕೊಡಗಿನಲ್ಲಿ ಮಳೆ ತಂದ ಅವಘಡಗಳು
ಕೊಡಗು

ಕೊಡಗಿನಲ್ಲಿ ಮಳೆ ತಂದ ಅವಘಡಗಳು

July 16, 2018

ಮಡಿಕೇರಿ:  ಬಿರುಗಾಳಿ ಮಳೆಗೆ ಕೊಡಗು ಜಿಲ್ಲೆಯ ಜನತೆ ತತ್ತರಿಸಿದ್ದು, ಭಾರೀ ಗಾಳಿಗೆ ಹಲವೆಡೆ ಮರ, ವಿದ್ಯುತ್ ಕಂಬ ಸೇರಿದಂತೆ ಮನೆಗಳು ಕುಸಿದು ಬಿದ್ದಿದೆ.

ಮಾದಾಪುರ ಸಮೀಪದ ಶಾಸಕ ಅಪ್ಪಚ್ಚು ರಂಜನ್ ಅವರ ನಿವಾಸದ ಬಳಿ ಭಾರಿ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ ಸೋಮವಾರಪೇಟೆ ಮಾರ್ಗವಾಗಿ ಕೆಎಸ್‍ಆರ್‍ಟಿಸಿ ಬಸ್ಸೊಂದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತದಿಂದ ತಪ್ಪಿಸಿಕೊಂಡಿದೆ.

ಮಾದಾಪುರ ಬಳಿ ಬಸ್ಸ್ ಬರುತ್ತಿದ್ದಂತೆಯೇ ಮರ ಧರೆಗುರುಳಲು ಸಿದ್ಧವಾಗುತ್ತಿತ್ತು. ತಕ್ಷಣವೇ ಸಮಯ ಪ್ರಜ್ಞೆ ಮರೆದ ಬಸ್‍ನ ಚಾಲಕ ಬಸ್ಸನ್ನು ರಸ್ತೆಯ ಬಲ ಬದಿಗೆ ಚಾಲಿಸಿದ್ದಾರೆ. ಈ ಸಂದರ್ಭ ಭಾರೀ ಗಾತ್ರದ ಮರ ರಸ್ತೆಗೆ ಬಿದ್ದಿದ್ದು, ಬಸ್ ನಲ್ಲಿದ್ದ 30ಕ್ಕೂ ಹೆಚ್ಚಿನ ಪ್ರಯಾಣಿಕಕರು ಕೂದೆ ಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ಬಸ್ ಪಕ್ಕದಲ್ಲಿದ್ದ ಮೋರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿ ಸಿಲುಕಿಕೊಂಡಿದ್ದು, ಬಸ್ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಘಟನೆ ಅರಿವಿಗೆ ಬರುತ್ತಿದ್ದಂತೆಯೇ ಬಸ್‍ನಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಮಾದಾಪುರ ಸಮೀಪದ ಕಾಜೂರು ಬಳಿ ಮರ ಬಿದ್ದು, ಮರದ ಕೊಂಬೆಗಳು ಈ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಓಮ್ನಿ ವಾಹನದ ಮೇಲೆ ಬಿದ್ದಿದೆ. ಓಮ್ಮಿ ವಾಹನಕ್ಕೆ ಅಲ್ಪ ಪ್ರಮಾಣದ ಹಾನಿಯಾಗಿದ್ದು, ವಾಹನದಲ್ಲಿದ್ದ 3 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾ ಗಿದ್ದಾರೆ. ತೋಟದ ಮರವೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮನೆಯ ಮೇಲ್ಛಾವಣಿಗೆ ಹೊದಿಸಿದ್ದ ಸಿಮೆಂಟ್‍ಶೀಟ್‍ಗಳು ಒಡೆದು ಹೋಗಿದ್ದು, ದಿನ ಬಳಕೆ ವಸ್ತುಗಳಿಗೆ ಹಾನಿ ಸಂಭವಿಸಿರುವ ಘಟನೆ ಐಗೂರು ಬಳಿ ನಡೆದಿದೆ.

ಮಾದಾಪುರ ಬಳಿ ಮರ ಉರುಳಿ ಬಿದ್ದು, ಕರೆಂಟ್ ಕಂಬಗಳು ಮತ್ತು ವಿದ್ಯುತ್ ಟ್ರಾನ್ಸ್ ಫಾರ್ಮರ್‍ಗೂ ಹಾನಿಯಾಗಿದ್ದು, ಮರತೆರವು ಮತ್ತು ವಿದ್ಯುತ್ ಲೈನ್ ದುರಸ್ಥಿ ಕಾರ್ಯ ನಡೆಯು ತ್ತಿದೆ. ಭಾರಿ ಗಾಳಿ ಮತ್ತು ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ಅಡ್ಡಿ ಉಂಟಾದ ಬಗ್ಗೆಯೂ ವರದಿಯಾಗಿದೆ.

ಮಡಿಕೇರಿ-ಮಂಗಳೂರು ರಸ್ತೆಯ ಕಾಟಕೇರಿ ಬಳಿ ಹೆದ್ದಾರಿಗೆ ಮರ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರ ಕೆಲಕಾಲ ಅಸ್ತವ್ಯಸ್ತಗೊಂಡಿತು. ತೆರವುಗೊಳಿಸಿದ ಬಳಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಮರ ತೆರವು ಕಾರ್ಯಾಚರಣೆ ವೇಳೆ ನೂರಾರು ವಾಹನಗಳು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಾಲುಗಟ್ಟಿ ನಿಂತಿದ್ದವು. ಮರ ಬಿದ್ದ ಹಿನ್ನೆಲೆಯಲ್ಲಿ 2 ವಿದ್ಯುತ್ ಕಂಬಗಳು ಮುರಿದು ಹೋಗಿದ್ದು, ತಂತಿಗಳು ತುಂಡರಿಸಲ್ಪಟ್ಟಿದೆ. ಹೀಗಾಗಿ ಕಾಟಗೇರಿ, ಮದೆನಾಡು ವ್ಯಾಪ್ತಿಯ ಗ್ರಾಮಗಳಿಗೆ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ.

ಮಡಿಕೇರಿ ಹೊರವಲಯದ ಕಡಗದಾಳು ಬಳಿ ಭಾರಿ ಮಳೆಗೆ ಮನೆಯೊಂದು ಕುಸಿದ ಬಗ್ಗೆ ವರದಿಯಾಗಿದೆ ಕಡಗದಾಳು-ಚೆಟ್ಟಳ್ಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರ ಬಿದ್ದಿದ್ದು ಈ ಮಾರ್ಗ ವಾಗಿ ಸಂಚರಿಸುತ್ತಿದ್ದ ಬಸ್‍ಗಳನ್ನು ಮರಗೋಡು ಮಾರ್ಗವಾಗಿ ಸಂಚರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಯಿತು.

ಮಡಿಕೇರಿ-ಅಪ್ಪಂಗಳ ರಸ್ತೆಯಲ್ಲೂ ಮರ ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಮಡಿಕೇರಿ-ಕಾಟಗೇರಿ-ಬೆಟ್ಟಗೇರಿ ಮಾರ್ಗವಾಗಿ ಭಾಗಮಂಡಲ ಕಡೆಗೆ ತೆರಳುವ ವಾಹನಗಳಿಗೆ ಅನುವು ಮಾಡಿ ಕೊಡಲಾಯಿತು.

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಹೇಳ ತೀರದಾಗಿದ್ದು, ಜನ ಜೀವನ ದುಸ್ಥರಗೊಂಡಿದೆ. ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಸಸಿ ಮಡಿಗಳಿಗೆ ಹಾನಿ ಯಾಗಿದೆ ಬಗ್ಗೆ ವರದಿಯಾಗಿದೆ.ಜಿಲ್ಲೆಯ ಹಲವು ಗ್ರಾಮೀಣಗಳು ದ್ವೀಪದಂತಾ ಗಿದ್ದು, ವಿದ್ಯುತ್, ದೂರವಾಣಿ ಸೇರಿದಂತೆ ರಸ್ತೆ ಮಾರ್ಗವೂ ಬಂದ್ ಆದ ಪರಿಣಾಮ ಹೊರ ಜಗತ್ತಿನಿಂದ ಸಂಪರ್ಕ ಕಳೆದು ಕೊಂಡಿದೆ.

ಭಾಗಮಂಡಲ: ಅಯ್ಯಂಗೇರಿ ರಸ್ತೆಯ ಸಂಚಾರ ಕಳೆದ 5 ದಿನಗಳಿಂದ ಬಂದ್ ಆದ ಸ್ಥಿತಿಯ ಲ್ಲಿದ್ದು, ಗ್ರಾಮಸ್ಥರು ದೋಣಿಯನ್ನೆ ಆಶ್ರಯಿಸು ವಂತಾಗಿದೆ. ಈ ರಸ್ತೆಯ ಮೇಲೆ 5 ಅಡಿ ನೀರು ಹರಿಯುತ್ತಿದ್ದು, ನದಿ ನೀರು ಇಳಿಕೆಯಾಗುವ ಲಕ್ಷಣ ಸದ್ಯಕ್ಕೂಂತೂ ಕಂಡು ಬರುತ್ತಿಲ್ಲ. ನಾಪೋಕ್ಲು ವ್ಯಾಪ್ತಿಯಿಂದ ಬೊಳಿಬಾಣೆ , ಚೆರಿಯಪರಂಬು-ಕಲ್ಲುಮೊಟ್ಟೆ ಸಂಪರ್ಕ ಕಡಿತಗೊಂಡು 5 ದಿನ ಕಳೆ ದಿದ್ದು, ನದಿ ನೀರು ಸೇತುವೆ ಮೇಲೆ ಹರಿಯುತ್ತಿದೆ.

ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ನದಿ ದಡದ ಭತ್ತದ ಗದ್ದೆಗಳು ಜಲಾವೃತವಾಗಿದೆ.

ಬೇತ್ರಿ ಸೇತುವೆ ಭರ್ತಿಗೆ ಕೇವಲ 2 ಅಡಿ ಮಾತ್ರವಿದ್ದು, ಕಾವೇರಿ ನದಿ ಪ್ರವಾಹ ಸ್ವರೂಪ ಪಡೆದಿದೆ. ಒಟ್ಟಿ ನಲ್ಲಿ ಕಳೆದ 11 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಕೊಡಗು ಜಿಲ್ಲೆ ಸಂಪೂರ್ಣ ತೋಯ್ದು ಹೋಗಿದ್ದು, ಅಂದಾಜು 20 ಕೋಟಿ ರೂಪಾಯಿಗಳಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಸಂಭವಿಸಿದೆ. ಧಾರಾಕಾರ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿದ್ದು, ಬೆಟ್ಟ-ಗುಡ್ಡದ ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ಇಲ್ಲಿನ ನಿವಾಸಿಗಳು ಕೈಯಲ್ಲಿ ಜೀವ ಹಿಡಿದು ಕೊಂಡು ದಿನ ದೂಡುವಂತಾಗಿದೆ.

ಸೋಮವಾರಪೇಟೆ ವರದಿ: ಮುಂಗಾರಿನ ಪುನರ್ವಸು ಮಳೆಯಿಂದ ಜನತೆ ತತ್ತರಿಸಿದ್ದು,ಹಲವು ಮನೆ ಮತ್ತು ರಸ್ತೆ ಮೇಲೆ ಮರಗಳು ಉರುಳಿ ಸಾಕಷ್ಟು ಹಾನಿಯಾದ ವರದಿಯಾಗಿದೆ.

ಶನಿವಾರದ ಗಾಳಿ ಮಳೆಗೆ ಪಟ್ಟಣ ಸೇರಿದಂತೆ ಮತ್ತು ಗ್ರಾಮೀಣ ಭಾಗಗಳಲ್ಲಿ ಮುಂಗಾರು ಮಳೆ ಮತ್ತು ಗಾಳಿಗೆ ಮುಂದುವರೆದಿದ್ದು, ಹೆಚ್ಚಿನ ಹಾನಿ ಯಾಗಿದೆ. ಹಲವು ಮನೆಗಳು ಜಖಂಗೊಂಡಿದ್ದು, ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಬಿದ್ದಿ ರುವುದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಲ್ಲಿನ ಶಾಸಕರ ಕಚೇರಿಯ ಮೇಲೆ ಹಾಕಲಾಗಿದ್ದ ಶೀಟ್‍ಗಳು ಗಾಳಿಗೆ ಹಾರಿ ಹೋಗಿವೆ.

ಪಟ್ಟಣದಿಂದ ಮಡಿಕೇರಿಗೆ ತೆರಳುವ ರಾಜ್ಯ ಹೆದ್ದಾರಿಯ ಮೇಲೆ ಹಲವು ಮರಗಳು ಉರು ಳಿವೆ. ಕಾಜೂರು ಜಂಕ್ಷನ್ ಬಳಿ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟದ ಮರವೊಂದು ರಸ್ತೆಯಲ್ಲಿ ಸಾಗುತ್ತಿದ್ದ ಮಾರುತಿ ವ್ಯಾನ್ ಮೇಲೆ ಉರುಳಿದ್ದು, ಭಾರಿ ಅನಾಹುತ ತಪ್ಪಿದೆ. ವ್ಯಾನ್‍ನಲ್ಲಿದ್ದ ಬಿ.ಎ. ಮಧೂಸೂದನ್, ಇಂದುಮತಿ ಹಾಗೂ ಜಯಣ್ಣ ಚಿಕ್ಕ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಕುಂಬೂರು ಗ್ರಾಮದ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಉರುಳಿ ಮೂರ್ನಾಲ್ಕು ಗಂಟೆಗಳ ಕಾಲ ರಸ್ತೆ ಬಂದ್ ಆಗಿತ್ತು. ಮರ ಬಿದ್ದ ಸಂದರ್ಭ ವಿದ್ಯುತ್ ಟ್ರಾನ್ಸ್‍ಫಾರ್ಮಾರ್ ಸೇರಿ ದಂತೆ ಹಲವು ವಿದ್ಯುತ್ ಕಂಬಗಳು ನೆಲಕ್ಕುರು ಳಿದ್ದು, ಈ ಸಂದರ್ಭ ಸ್ಥಳೀಯ ಗ್ರಾಮಸ್ಥರು ಮರವನ್ನು ತೆಗೆಯಲು ಸಹಕರಿಸಿದರು. ಶಾಸಕ ಅಪ್ಪಚ್ಚು ರಂಜನ್ ಸ್ಥಳದಲ್ಲಿದ್ದು, ಮರ ತೆಗೆಯುವ ಕಾರ್ಯ ಮಾಡಿಸಿದರು.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಗ್ರಾಮದ ಗಣಪತಿ ದೇವಾಲಯದ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ವಿದ್ಯುತ್ ಸರಬರಾಜು ಕಲ್ಪಿಸುವ 11ಕೆವಿ ವಿದ್ಯುತ್ ಕಂಬಗಳು ನೆಲಕ್ಕುರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಇದರೊಂದಿಗೆ ಕಾರೆ ಕೊಪ್ಪ ಗ್ರಾಮದಲ್ಲಿ ಇನ್ನೋವಾ ಕಾರಿನ ಮೇಲೆ ಮರವೊಂದು ಉರುಳಿದ್ದು, ವಾಹನದೊಳಗೆ ಇದ್ದವರು ಅಪಾಯದಿಂದ ಪಾರಾಗಿದ್ದಾರೆ. ಕರ್ಕಳ್ಳಿ ಗ್ರಾಮದ ಜರ್ಮಿ ಎಂಬುವವರ ಮನೆಯ ಮೇಲೆ ಶನಿವಾರ ಮಧ್ಯರಾತ್ರಿ ಮರವೊಂದು ಉರುಳಿ ಬಿದ್ದಿದ್ದು, ಮನೆಯವರು ಅಪಾಯದಿಂದ ಪಾರಾ ಗಿದ್ದಾರೆ. ಶಾಂತಳ್ಳಿ ಗ್ರಾಮದ ಜೀಪ್ ಶೆಡ್ ಮೇಲೆ ಮರ ಉರುಳಿ ಹಾನಿಯಾಗಿದೆ.

ಸುಂಟಿಕೊಪ್ಪ ವರದಿ: ಸುಂಟಿಕೊಪ್ಪ ಸುತ್ತ ಮುತ್ತಲ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ, ಭಾನುವಾರ ಮುಂಜಾನೆ ಭಾರಿ ಗಾಳಿ ಮಳೆ ಸುರಿದಿದ್ದು, ಮರ, ವಿದ್ಯುತ್ ಕಂಬ ಹಲವು ಮನೆಗಳ ಮೇಲೆ ಬಿದ್ದ ಪರಿಣಾಮ ಮನೆಗಳು ಜಖಂಗೊಂಡು, ಹಲವು ಗ್ರಾಮಗಳಿಗೆ, ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಸ್ಥಗಿತಗೊಂಡು ಅಪಾರ ಪ್ರಮಾಣ ನಷ್ಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಭಾರೀ ಮಳೆ ಗಾಳಿಯಿಂದ ಹಲವು ಗ್ರಾಮಗಳು ಕಳೆದ 15 ದಿನಗಳಿಂದ ಕಾರ್ಗತ್ತಲೆಯಲ್ಲಿ ಮುಳು ಗಿದೆ. ಮತ್ತೆ ಕೆಲವು ಗ್ರಾಮಗಳಿಗೆ ಸಂಪರ್ಕವೇ ಕಡಿದುಕೊಂಡರೆ ಬಡಕೂಲಿ ಕಾರ್ಮಿಕರಿಗೆ ತೋಟ ಗಳಲ್ಲಿ ಕೂಲಿ ಕೆಲಸ ನಿರ್ವಹಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದಾರೆ. ಇವೆಲ್ಲಾ ಸಮಸ್ಯೆಗಳ ನಡುವೆ ಸಂಪೂರ್ಣ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಕೊಡಗರಹಳ್ಳಿ ಗ್ರಾಪಂ ವ್ಯಾಪ್ತಿಯ ಸ್ಕೂಲ್‍ಬಾಣೆಯ ರಮೇಶ್ ಪೂಜಾರಿ ಮತ್ತು ಶಿವರಾಮ ಎಂಬುವರ ಮನೆಯ ಹಿಂಭಾಗದಲ್ಲಿ ಬೆಳಿಗ್ಗೆ 8.45ರ ಸಂದರ್ಭ ಪಕ್ಕದ ತೋಟದ ಭಾರಿ ಗಾತ್ರದ ಮರ ಬಿದ್ದಿದ್ದು, ಇದರಿಂದ ಮನೆಯ ಗೋಡೆ ಹಾಗೂ ಮೇಲ್ಚಾವಣಿಗಳು ಹಾನಿಗೊಂಡಿದೆ.

ಘಟನೆಯ ಸಂದರ್ಭ ಶಿವರಾಮ ಅವರ ಮೊಮ್ಮಗ ಬಾತುರೂಮಿನಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಗಾಳಿಯ ರಭಸಕ್ಕೆ ಮರವು ಮುರಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗೊಳ್ಳದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
ಕೊಡಗರಹಳ್ಳಿ ವಾಟರ್ ಮ್ಯಾನ್ ಮಂಜು ಅವರ ಮನೆಗೆ ಮರ ಬಿದ್ದ ಪರಿಣಾಮ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮೇಲ್ಚಾವಣ ಸಂಪೂರ್ಣ ಹಾನಿಗೀಡಾಗಿದೆ. ಇದರಿಂದ 50,000ಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ನಾಕೂರು ಶಿರಂಗಾಲ ಗ್ರಾಪಂ ವ್ಯಾಪ್ತಿಯ ಮಳ್ಳೂರು ಗ್ರಾಮದ ನಿವಾಸಿ ನಿವೃತ್ತ ಶಿಕ್ಷಕ ಎಂ.ಜಿ.ಗಣಪತಿ ಅವರ ಮನೆಗೆ ಭಾನುವಾರ ಬೆಳಿಗ್ಗೆ 9.30 ಗಂಟೆಯ ಸಂದರ್ಭ ತೋಟದ ಭಾರಿ ಗಾತ್ರದ ಬಳಜಿ ಮರವು ಗಾಳಿಯ ರಭಸಕ್ಕೆ ಬಿದ್ದ ಪರಿಣಾಮ ಮನೆಯ ಮೇಲ್ಛಾವಣ ಹಾನಿ ಯಾಗಿದೆ. ಮೇಲೆ ಬಿದ್ದಿದೆ. ಈ ಸಂದರ್ಭ ಮನೆ ಯಲ್ಲಿದ್ದ ಅವರ ಪತ್ನಿ ರುಕ್ಮಿಣ ಅವರ ತಲೆಗೆ ಗಂಭೀರ ಗಾಯವುಂಟಾಗಿ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾ ನಿಸಲಾಗಿದೆ. ಮನೆಯ ಪಕ್ಕದ ಶೆಡ್ ಮೇಲೂ ಮರ ಬಿದ್ದ ಪರಿಣಾಮ ಶೆಡ್‍ನಲ್ಲಿದ್ದ ಮಾರುತಿ ಓಮ್ನಿ ಮತ್ತು ಬೈಕಿಗೆ ಹಾನಿಯಾಗಿದೆ. ಇದರಿಂದ ಅಂದಾಜು ರೂ. 2ಲಕ್ಷಕ್ಕೂ ಮಿಕ್ಕಿ ನಷ್ಟ ಉಂಟಾ ಗಿದೆ ಎಂದು ಮಾಹಿತಿ ನೀಡಿದರು.

Translate »