ದಾನ-ಧರ್ಮದ ಸಂಕೇತ ರಂಜಾನ್
ಚಾಮರಾಜನಗರ

ದಾನ-ಧರ್ಮದ ಸಂಕೇತ ರಂಜಾನ್

June 17, 2018
  • ಜಿಲ್ಲಾದ್ಯಂತ ಸಡಗರ, ಸಂಭ್ರಮದ ರಂಜಾನ್ ಆಚರಣೆ
  • ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ

ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯ ದವರು ಶ್ರದ್ಧಾ, ಭಕ್ತಿಯಿಂದ ಶನಿವಾರ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದರು.ರಂಜಾನ್ ತಿಂಗಳ ಕೊನೆಯಲ್ಲಿ ಚಂದ್ರ ದರ್ಶನ ಆದ ಮರುದಿನ ಈ ಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಹಬ್ಬದ ಅಂಗವಾಗಿ ಬೆಳಿಗ್ಗೆ ಮುಸ್ಲಿಂ ಬಾಂಧವರು ಹೊಸಬಟ್ಟೆ ತೊಟ್ಟು ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಪ್ರಾರ್ಥನೆ ಬಳಿಕ, ಒಬ್ಬರೊಬ್ಬರು ಅಪ್ಪಿಕೊಂಡು ಶುಭಾ ಶಯ ವಿನಿಮಯ ಮಾಡಿಕೊಂಡರು.ದಾನದ ಹಬ್ಬ ರಂಜಾನ್ ಆಗಿರುವುದ ರಿಂದ ಉಳ್ಳವರು ದಾನ ಮಾಡುವ ಮೂಲಕ ಹಬ್ಬದ ಮಹತ್ವ ಸಾರಿದರು. ಹಬ್ಬದ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯ ದವರು ನಡೆಸುವ ವ್ಯಾಪಾರ, ವಹಿವಾಟು ಜಿಲ್ಲೆಯಲ್ಲಿ ಸ್ಥಗಿತಗೊಂಡಿತ್ತು. ಮೊಬೈಲ್ ಅಂಗಡಿ, ಗ್ಯಾರೇಜ್, ಟೀ ಕ್ಯಾಂಟೀನ್, ತರಕಾರಿ, ಹಣ್ಣಿನ ವ್ಯಾಪಾರಿಗಳು ಸೇರಿ ದಂತೆ ಇತರೆ ವ್ಯಾಪಾರವಹಿವಾಟು ನಡೆ ಯಲಿಲ್ಲ. ಆದರೆ, ಮಾಂಸದ ಅಂಗಡಿ ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.

ಕೊಳ್ಳೇಗಾಲ ವರದಿ: ಪಟ್ಟಣದಲ್ಲಿ ಶನಿ ವಾರ ಮುಸ್ಲಿಂ ಬಂಧುಗಳು ರಂಜಾನ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಪಟ್ಟಣದ ಮಸ್ಜಿದ್-ಎ-ಖುದ್ದೂಸಿಯಾ ಮಸೀದಿಯ ಬಳಿ ಸಮಾವೇಶಗೊಂಡ ಸಹಸ್ರಾರು ಮುಸ್ಲಿಂ ಬಂಧು ಗಳು ಮೆರವಣಿಗೆಯಲ್ಲಿ ದೇವರ ಪ್ರಾರ್ಥನೆ ಮಾಡುತ್ತಾ ಈದ್ಗಾ ಮೈದಾನದ ಕಡೆಗೆ ಮೆರವಣಿಗೆಯಲ್ಲಿ ತೆರಳಿದರು.

ಈದ್ಗಾ ಮೈದಾನದಲ್ಲಿ ಧರ್ಮಗುರು ಗಳಾದ ಅಬ್ದುಲ್ ತವಾಬ್ ವಿಶೇಷ ಪ್ರಾರ್ಥನೆ ನೆರವೇರಿಸಿದರು, ಅಮ್ಜಾದ್ ಖಾನ್ ವಿಶೇಷ ಪ್ರವಚನ ನೀಡಿದರು. ಮುಸ್ಲಿಂ ಬಂಧುಗಳು ವಿಶೇಷ ಪ್ರಾರ್ಥನೆ ನೆರವೇರಿಸಿ ನಂತರ ಪರಸ್ಪರ ಒಬ್ಬರನ್ನೊ ಬ್ಬರು ಆಲಂಗಿಸಿ ಹಸ್ತಲಾಘವ ನೀಡಿ ಪರಸ್ಪರ ರಂಜಾನ್ ಶುಭಾಶಯ ವಿನಿ ಮಯ ಮಾಡಿಕೊಡಿಕೊಂಡರು. ವಿಶೇಷ ಪ್ರಾರ್ಥನೆ ನಂತರ ಮೆರವಣ ಗೆ ದೊಡ್ಡ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬ ಆಚರಿಸಿದರು.

ಮಸೀದಿಯಲ್ಲಿ ಇಸ್ಲಾಂ ಧರ್ಮದ ಗುರುಗಳಾದ ಅಬ್ದುಲ್‍ತವಾಬ್ ಪ್ರಾರ್ಥನೆ ಹಾಗೂ ಅಮ್‍ಜಾದ್ ಖಾನ್ ಪ್ರವಚನ ಬೋಧಿಸಿದರು. ಮುಖಂಡರಾದ ಮಹ ಮ್ಮದ್ ನಸೀರ್ ಉದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿವೈಎಸ್‍ಪಿ ಪುಟ್ಟಮಾದಯ್ಯ, ಸರ್ಕಲ್ ಇನ್‍ಸ್ಪೆಕ್ಟರ್ ರಾಜಣ್ಣ, ಪಟ್ಟಣ ಠಾಣೆ ಸಬ್‍ಇನ್‍ಸ್ಪೆಕ್ಟರ್ ವೀಣಾ ನಾಯಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿತ್ತು.

ಗುಂಡ್ಲುಪೇಟೆ ವರದಿ: ಪಟ್ಟಣದಲ್ಲಿನ ಮುಸ್ಲಿಂ ಬಾಂಧವರು ಶ್ರದ್ದಾ, ಭಕ್ತಿ ಮತ್ತು ಸಂಭ್ರಮದಿಂದ ರಂಜಾನ್ ಹಬ್ಬವನ್ನು ಆಚರಿಸಿದರು. ಪಟ್ಟಣದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಯುವಕರು, ಮಕ್ಕಳು ಚಾಮರಾಜನಗರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ನೆರೆದಿದ್ದ ಮುಸ್ಲಿಂ ಬಾಂಧ ವರನ್ನು ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಸಿರಾಜ್ ಸಾಹೇಬ್ ಆಶೀರ್ವದಿಸಿ, ರಂಜಾನ್ ಆಚರಣೆಯ ಮಹತ್ವ ಹಾಗೂ ಪ್ರವಾದಿ ಮಹಮದ್ ಪೈಗಂಬರರ ಜೀವನದ ಬಗ್ಗೆ ಪ್ರವಚನ ನೀಡಿ ಜೀವನದಲ್ಲಿ ಮಹಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆ ಎಂದರು.

ಶಾಸಕರ ಭೇಟಿ, ಸನ್ಮಾನ: ಪಟ್ಟಣದ ಈದ್ಗಾ ಮೈದಾನದಲ್ಲಿ ಆಯೋಜಿಸಿದ್ದ ರಂಜಾನ್ ಆಚರಣೆ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಿರಂಜನಕುಮಾರ್ ಭಾಗವಹಿಸಿ ಧರ್ಮಗುರುಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಂತರ ಮುಸ್ಲಿಂ ಬಾಂಧವರನ್ನು ಉದ್ದೇಶಿಸಿ ಮಾತನಾಡಿ, ಒಂದು ತಿಂಗಳಿ ನಿಂದಲೂ ಕಠಿಣ ಉಪವಾಸ ವ್ರತಾ ಚರಣೆ ನಡೆಸಿ ತ್ಯಾಗ ಹಾಗೂ ಬಲಿ ದಾನದ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ನಿಮ್ಮೆಲ್ಲ ರಿಗೂ ಶುಭಾಶಯಗಳನ್ನು ಹೇಳಲು ಬಂದಿದ್ದೇನೆ. ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಬಡವರಿಗೆ ನೀಡಿ ಹಬ್ಬ ಆಚರಿಸುವ ರೀತಿ ಪ್ರಸಂಶನೀಯ. ಸಮಾಜದ ಎಲ್ಲಾ ಸಮುದಾಯದವರು ಪರಸ್ಪರ ಭಿನ್ನಾಭಿಪ್ರಾಯ ಹಾಗೂ ತಪ್ಪು ಕಲ್ಪನೆಗಳನ್ನು ಬಿಟ್ಟು ಉತ್ತಮ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಸದಸ್ಯ ಗೋವಿಂದರಾಜನ್ ಸೇರಿದಂತೆ ಪಟ್ಟಣದ ಮುಸ್ಲಿಂ ಧರ್ಮ ಗುರುಗಳು, ಯುವಕರು, ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Translate »