ಶಿವರಾಮೇಗೌಡರು ಮಂಡ್ಯ ಮರ್ಯಾದೆ ಹಾಳು ಮಾಡಿದ್ದಾರೆ
ಮೈಸೂರು

ಶಿವರಾಮೇಗೌಡರು ಮಂಡ್ಯ ಮರ್ಯಾದೆ ಹಾಳು ಮಾಡಿದ್ದಾರೆ

April 5, 2019

ಬೆಂಗಳೂರು: ಸಂಸದ ಎಲ್.ಆರ್. ಶಿವರಾಮೇಗೌಡರು ಸುಮಲತಾ ಅಂಬರೀಶ್ ಅವರ ಜಾತಿ ಬಗ್ಗೆ ಮಾತನಾಡಿ ಮಂಡ್ಯದ ಗೌರವವನ್ನು ಹಾಳು ಮಾಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಹೇಳಿದರು.

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರೇ ಇದ್ದರೂ, ಅವರು ಯಾವಾಗಲೂ ಜಾತಿ ಮಾಡಿಲ್ಲ. ಎಲ್ಲಾ ಜಾತಿಯವರೊಂದಿಗೂ ಸೌಹಾರ್ದ ಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಸುಮಲತಾ ಮಂಡ್ಯದ ಸೊಸೆ. ಅವರ ಜಾತಿ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ ಎಂದರು.

ನಾನು ಪಕ್ಷದ ಅಧ್ಯಕ್ಷನಾದ ನಂತರ ಸಂಭ್ರಮ ಕ್ಕಿಂತ ಸಂಘರ್ಷವೇ ಹೆಚ್ಚಾಗಿದೆ. ಆರೋಗ್ಯದ ಕಾರಣದಿಂದ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಬಿಡುಗಡೆಗೊಳಿಸುವಂತೆ ದೇವೇಗೌಡರನ್ನು ಕೇಳಿ ಕೊಂಡೆ. ಆದರೆ ಅವರು ಒಪ್ಪಲಿಲ್ಲ. ಅದರಿಂದಾಗಿ ರಾಜ್ಯಾಧ್ಯಕ್ಷನಾಗಿ ಮುಂದುವರೆದಿದ್ದೇನೆ ಎಂದರು.

ಕಾಂಗ್ರೆಸ್ ಬಿಟ್ಟಿದ್ದೇಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನು ಸಿದ್ದರಾಮಯ್ಯನವರನ್ನೇ ಕೇಳಬೇಕು ಎಂದರಲ್ಲದೇ, ಆಗ ನಮ್ಮ ಗ್ರಹಚಾರಕ್ಕೆ ಹೈಕಮಾಂಡ್ ವೀಕ್ ಆಗಿತ್ತು. ಈಗ ರಾಹುಲ್ ಗಾಂಧಿಯವರು ಪ್ರಬುದ್ಧ ನಾಯಕರಾಗಿದ್ದಾರೆ. ಅವರನ್ನು ಒಪ್ಪಿಕೊಂಡಿದ್ದೇವೆ ಎಂದರು. ನನ್ನ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಗ ನಾವು ಕಣ್ಣಲ್ಲೇ ಮಾತಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಬ್ಬರೂ ಕುಳಿತು ಮಾತನಾಡುತ್ತೇವೆ. ಅವರನ್ನು ಬೆಳೆಸಿದ್ದು ಒಕ್ಕಲಿಗರು. ಅದರಿಂದಾಗಿ ಅಹಿಂದಾ ವರ್ಗಕ್ಕೆ ಬೆಲೆ ಸಿಕ್ಕಿದೆ ಎಂದರು. ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿದೆ. ಅದರಿಂದಾಗಿ ಅವರು ಬಿಜೆಪಿ ಅಭ್ಯರ್ಥಿ ಎಂದ ವಿಶ್ವನಾಥ್, ಸುಮಲತಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಬಾವುಟ ಪ್ರದರ್ಶಿಸಲಿ ಬಿಡಿ, ಅದರಲ್ಲಿ ತಪ್ಪೇನಿದೆ. ಬಾವುಟ ಹಿಡಿದವರೆಲ್ಲಾ ಓಟ್ ಹಾಕ್ತಾರಾ ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇವೇಗೌಡರು ಪ್ರಧಾನಿಯಾಗಿದ್ದವರು. ಅವರು ಹಾಸನ, ತುಮಕೂರು, ಮಂಡ್ಯಕ್ಕೆ ಮಾತ್ರ ಸೀಮಿತವಲ್ಲ. ಇಡೀ ಭಾರತವೇ ಅವರ ಕ್ಷೇತ್ರ. ಅವರು ಎಲ್ಲೇ ನಿಂತರೂ ಗೆಲ್ಲುತ್ತಾರೆ ಎಂದರು. ಮಂಡ್ಯದ ಬಗ್ಗೆ ಜನರಿಗೆ ಬೇಸರವಾಗಿಲ್ಲ. ಆದರೆ ಮಂಡ್ಯವನ್ನು ಮಾತ್ರವೇ ತೋರಿಸುತ್ತಿರುವ ಮಾಧ್ಯಮಗಳ ಮೇಲೆ ಜನರಿಗೆ ಬೇಸರವಾಗಿದೆ. ರಾಜ್ಯದಲ್ಲಿ ಹಿರಿಯ ಮುಖಂಡರುಗಳಾದ ಮಲ್ಲಿಕಾರ್ಜುನ ಖರ್ಗೆ, ಡಿ.ವಿ.ಸದಾನಂದಗೌಡ ಸೇರಿದಂತೆ ಅನೇಕರು ಸ್ಪರ್ಧಿಸುತ್ತಿದ್ದಾರೆ. ಅವರ ಕ್ಷೇತ್ರಗಳನ್ನೆಲ್ಲಾ ಬಿಟ್ಟು ಕೇವಲ ಮಂಡ್ಯವನ್ನು ಮಾತ್ರ ಮಾಧ್ಯಮದಲ್ಲಿ ತೋರಿಸುತ್ತಿರುವುದು ಜನತೆಗೆ ಬೇಸರ ಉಂಟುಮಾಡಿದೆ ಎಂದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ರೈತರ ಪರ ಕೆಲಸ ಮಾಡುತ್ತಿದೆ. ಬಿಜೆಪಿ ರೈತರನ್ನು ಮರೆತಿದೆ. ಪ್ರಧಾನಿ ಮೋದಿ ರೈತರಿಗೆ 6 ಸಾವಿರ ರೂ. ಕೊಡುವುದಾಗಿ ಹೇಳಿದ್ದಾರೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಎಷ್ಟೇ ಕಷ್ಟವಿದ್ದರೂ ರೈತರ ಸಾಲ ಮನ್ನಾ ಜಾರಿಗೆ ತಂದಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ಆದರೆ ದೇಶಕ್ಕೆ ಪ್ರಧಾನಿಯನ್ನೇ ಕೊಟ್ಟಿದ್ದೇವೆ. ನಾವು ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ ಎಂದು ಹೇಳಿದರಲ್ಲದೇ, ಲೋಕಸಭಾ ಚುನಾವಣೆ ನಂತರವೂ ಮೈತ್ರಿ ಸರ್ಕಾರ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Translate »