ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ

October 1, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋ ತ್ಸವದ ಅಂಗವಾಗಿ ಆಯೋಜಿಸಿರುವ ಮೊದಲ ಕಾರ್ಯಕ್ರಮ `ಯುವ ಸಂಭ್ರಮ’ದ ಮೊದಲ ದಿನವೇ ವರುಣನ ಸಿಂಚನವಾಯಿತು.

ಸುಂದರ ಇಳಿ ಸಂಜೆಯಲಿ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಒಂದೆಡೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಡೋಲು ಬಾರಿಸುವ ಮೂಲಕ `ಯುವ ಸಂಭ್ರಮ’ಕ್ಕೆ ಅದ್ಧೂರಿ ಚಾಲನೆ ನೀಡಿದರೆ, ಮತ್ತೊಂದೆಡೆ ಉಕ್ರೆನ್‍ನ ನೃತ್ಯಗಾರ್ತಿ ಯುಲಿಯಾ ಅವರು ವಿನೂತನ ಶೈಲಿಯಲ್ಲಿ ಕ್ಲಸ್ಟರ್ ಹೀಲಿಯಂ ಬಲೂನ್ ಗುಚ್ಛದ ಮೂಲಕ 100 ಅಡಿ ಎತ್ತರಕ್ಕೆ ಹಾರಿ `ಯುವ ಸಂಭ್ರಮ’ ಬ್ಯಾನರ್ ಅನಾ ವರಣಗೊಳಿಸಿದರು.

ಮಾನಸಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಯುವ ದಸರಾ ಉಪ ಸಮಿತಿ ವತಿಯಿಂದ ಇಂದಿನಿಂದ 8 ದಿನಗಳ ಕಾಲ ಆಯೋಜಿಸಿರುವ `ಯುವ ಸಂಭ್ರಮ’ದ ಮೊದಲ ದಿನವಾದ ಭಾನು ವಾರ ಉಕ್ರೆನ್‍ನ ನೃತ್ಯಗಾರ್ತಿ ಯುಲಿಯಾ ಅವರು ಎಲ್‍ಇಡಿ ಸೌಲಭ್ಯವುಳ್ಳ ಬಟ್ಟೆಯನ್ನು ತೊಟ್ಟು ಕ್ಲಸ್ಟರ್ ಹೀಲಿಯಂ ಬಲೂನ್ ಗುಚ್ಛದ ಮೂಲಕ ಎತ್ತರಕ್ಕೆ ಹಾರಿ ನೃತ್ಯ ಪ್ರದರ್ಶಿಸುವ ಜೊತೆಗೆ ಯುವ ಸಂಭ್ರಮ 2018 ಬ್ಯಾನರ್ ಅನಾವರಣಗೊಳಿಸಿ, ನೆರೆದಿದ್ದ ಸಭಿಕರ ಮೇಲೆಲ್ಲಾ ಪುಷ್ಪವನ್ನು ಚೆಲ್ಲುವ ಮೂಲಕ ಯುವ ಸಮೂಹ ಹುಚ್ಚೆದ್ದು ಕುಣಿಯುವಂತೆ ಮಾಡಿದರು.

ಮೊದಲಿಗೆ ಬಣ್ಣ-ಬಣ್ಣದ ಉಡುಗೆಗಳನ್ನು ತೊಟ್ಟು ವೇದಿಕೆಗೆ ಆಗಮಿಸಿದ ಮೈಸೂರು ವಿವಿ ಲಲಿತಾ ಕಲಾ ಕಾಲೇಜಿನ ವಿದ್ಯಾರ್ಥಿ ಗಳು ಉದ್ಘಾಟನಾ ನೃತ್ಯ ಪ್ರದರ್ಶಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ನಂತರ ದೇವತೆಗಳ ವೇಷಭೂಷಣ ದೊಂದಿಗೆ ವೇದಿಕೆ ಹಂಚಿಕೊಂಡ ಗುಂಡ್ಲುಪೇಟೆ ತಾಲೂಕಿನ ಕಬ್ಬಹಳ್ಳಿ ಶ್ರೀ ಮದ್ದಾನೇಶ್ವರ ಪ್ರಥಮ ದರ್ಜೆ ಕಾಲೇಜಿನ 9 ಮಂದಿ ವಿದ್ಯಾರ್ಥಿಗಳು `ಆಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ ನಂದ ನುತೆ’ ಹಾಡಿಗೆ ಮನೋಜ್ಞವಾಗಿ ಹೆಜ್ಜೆ ಹಾಕಿದರು.

ಹೃದಯ ಸ್ಪರ್ಶಿ ನೃತ್ಯ: ಯೋಧರ ಉಡುಪುಗಳನ್ನು ತೊಟ್ಟು ಮೈಸೂರಿನ ಕರುಣಾಮಯಿ ವಿಶೇಷ ಮಕ್ಕಳ ತರಬೇತಿ ಶಾಲೆ ಮಕ್ಕಳು `ಹೇ ಭಾರತ್ ಮಹಾನ್, ಹೇ ಭಾರತ್ ಮಹಾನ್’ ಗೀತೆಗೆ ಹೆಜ್ಜೆ ಹಾಕಿ ನೆರೆದಿದ್ದವರ ಹೃದಯ ತಟ್ಟಿದರು. ನಂತರ ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 30ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿನಿಯರು `ಅಂದದಗಿರಿ ಚಂದ ನೋಡಿರೋ ನಮ್ಮ ಮಾದಯ್ಯನ ಗಿರಿಗೆ ಬನ್ನಿರೋ ಸ್ವಾಮಿಯ ಗುಡಿಯ ಗೋಪುರವ ನೋಡಿರೋ’ ಹಾಡಿಗೆ ಮನೋಜ್ಞವಾಗಿ ನೃತ್ಯ ಪ್ರದರ್ಶಿ ಸಿದ ವಿದ್ಯಾರ್ಥಿನಿಯರು, ನಂತರ ತಲೆಯ ಮೇಲೆ ಕಳಸ ಹೊತ್ತು `ಸೋ ಎನ್ನಿರೆ ಸೋಬಾನೆ ಬನ್ನಿರೆ’ ಜಾನಪದ ಹಾಡಿಗೆ ಹೆಜ್ಜೆ ಹಾಕಿ ಚಾಮರಾಜನಗರದ ಕಲೆ ಮತ್ತು ಸಂಸ್ಕøತಿಯನ್ನು ಅನಾ ವರಣಗೊಳಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ನಂತರದಲ್ಲಿ ಯಳಂದೂರು ಜೆಎಸ್‍ಎಸ್ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು, ಯಳಂದೂರು ಜೆಎಸ್‍ಎಸ್ ಮಹಿಳಾ ಪಿಯು ಕಾಲೇಜು, ಸರಸ್ವತಿ ಪುರಂನ ವಿಶ್ವಶಾಂತಿ ಶಿಕ್ಷಣ ಸಂಸ್ಥೆ ಸ್ವತಂತ್ರಕಲಾ ಮತ್ತು ವಿಜ್ಞಾನ ಪಿಯು ಕಾಲೇಜು, ಶ್ರೀ ಛಾಯಾದೇವಿ ಬಿ.ಎಡ್ ಕಾಲೇಜು, ಬಿಜಿಎಸ್ ಬಿ.ಎಡ್ ಕಾಲೇಜು ಹಾಗೂ ಸರ್ಕಾರಿ ಪಿಯು ಕಾಲೇಜು (ಕನ್ನಡ ಮತ್ತು ಸಂಸ್ಕøತಿ), ಭಾರತೀ ಕಾಲೇಜು, ಬನ್ನೂರು ಮತ್ತು ಕುವೆಂಪು ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೆ.ಆರ್.ನಗರ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು, ಜಯಲಕ್ಷ್ಮಿ ಪುರಂನ ಶ್ರೀ ವಿವೇಕಾನಂದ ಸಂಯುಕ್ತ ಪಿಯು ಕಾಲೇಜು, ಶಾರದಾ ವಿಲಾಸ ಶಿಕ್ಷಣ ಮಹಾವಿದ್ಯಾಲಯ (ರಾಷ್ಟ್ರೀಯ ಭಾವೈಕ್ಯತೆ), ಕರುಣಾಮಯಿ ವಿಶೇಷ ಮಕ್ಕಳ ತರಬೇತಿ ಶಾಲೆ(ನೃತ್ಯ ರೂಪಕ), ಶ್ರೀ ಮದ್ದಾನೇಶ್ವರ ಪ್ರಥಮ ದರ್ಜೆ ಕಾಲೇಜು, ಮಹಾರಾಜ ಮೈಸೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಮಹಿಳಾ ಸಬಲೀಕರಣ), ಬೆಟ್ಟದಪುರ ಸರ್ಕಾರಿ ಪಿಯು ಕಾಲೇಜು (ದೇಶಭಕ್ತಿ) ಕುರಿತ ಹಾಡಿಗೆ ನೃತ್ಯ ಪ್ರದರ್ಶಿಸಿ ಯುವ ಸಮೂಹವನ್ನು ರಂಜಿಸಿದರು.
ಕಿಕ್ಕಿರಿದು ತುಂಬಿದ್ದ ರಂಗಮಂದಿರ: ಯುವ ಸಂಭ್ರಮದ ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಬಯಲು ರಂಗಮಂದಿರ ಕಿಕ್ಕಿರಿದು ತುಂಬಿತ್ತು.

ಯುವ ಸಂಭ್ರಮಕ್ಕೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ದೇಶದಲ್ಲೇ ಮೈಸೂರು ಸಾಂಸ್ಕøತಿಕ ಸುಂದರ ನಗರ. ಕುವೆಂಪುರವರ ಊರಾದ ಮೈಸೂರಲ್ಲಿ ಆಯೋಜಿಸಿರುವ ಯುವ ಸಂಭ್ರಮ ಯುವಕರೆಲ್ಲರಿಗೂ ಹಬ್ಬವಿ ದ್ದಂತೆ. ಹಾಗಾಗಿ ಎಲ್ಲರೂ ಸಂತೋಷ ದಿಂದ ಭಾಗವಹಿಸಬೇಕು ಎಂದರು.

ವಿದ್ಯಾರ್ಥಿಗಳಲ್ಲಿರುವ ಕಲೆ, ಚತುರತೆ ಮತ್ತು ಪ್ರತಿಭೆ ಅನಾವರಣಗೊಳಿಸಬೇಕೆಂಬ ಉದ್ದೇಶದಿಂದ ಯುವ ಸಂಭ್ರಮವನ್ನು ಆಯೋಜಿಸಿದ್ದು, ಜಾನಪದ, ದೇಶಭಕ್ತಿ, ರಾಷ್ಟ್ರೀಯ ಭಾವೈಕ್ಯತೆ, ಮಹಿಳಾ ಸಬ ಲೀಕರಣ ಕುರಿತ ನೃತ್ಯಗಳು ಪ್ರದರ್ಶನ ಗೊಳ್ಳಲಿವೆ ಎಂದರು.

ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಇಂದು ಹಬ್ಬದ ದಿನ. ಮೊದಲಿಗೆ ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ತಿಳಿಸಿದ ಅವರು, ನೆರೆಯಿಂದ ತತ್ತರಿಸಿದ ಕೊಡಗಿಗೆ ಬಟ್ಟೆ, ಕಂಬಳಿ, ಆಹಾರ ಪದಾರ್ಥಗಳು ಸೇರಿದಂತೆ ಮತ್ತಿತರೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಹಾಯ ಮಾಡಿದ ಮೈಸೂರಿಗರಿಗೆ ಧನ್ಯವಾದ ತಿಳಿಸಿದರು.

ನಂತರ ಯುವ ದಸರಾಗೆ ಆಗಮಿಸಿ ನೃತ್ಯ ಪ್ರದರ್ಶಿಸುತ್ತೇನೆ ಎಂದು `ನೀನಾ ದೆನಾ ನೀ ಒಲಿದ ಈ ಕ್ಷಣ’ ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು.

ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್, ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಅಪರ ಜಿಲ್ಲಾಧಿಕಾರಿ ಯೋಗೇಶ್, ತಾಪಂ ಸದಸ್ಯೆ ಪುಟ್ಟ ಲಕ್ಷ್ಮಮ್ಮ, ಯುವ ದಸರಾ ಉಪ ಸಮಿತಿ ಕಾರ್ಯಾ ಧ್ಯಕ್ಷ ಎಂ.ಎನ್.ನಟರಾಜ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಬಿ. ಲಿಂಗಣ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.

Translate »