ಜಮೀನು ಸರ್ವೇ ನಡೆಸದೇ ಕರ್ತವ್ಯ ಲೋಪವೆಸಗಿದ್ದ ಪ್ರಕರಣ ತಹಶೀಲ್ದಾರ್‍ಗೆ ಜಾಮೀನು ಮಂಜೂರು
ಮಂಡ್ಯ

ಜಮೀನು ಸರ್ವೇ ನಡೆಸದೇ ಕರ್ತವ್ಯ ಲೋಪವೆಸಗಿದ್ದ ಪ್ರಕರಣ ತಹಶೀಲ್ದಾರ್‍ಗೆ ಜಾಮೀನು ಮಂಜೂರು

June 3, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಬೆಳತೂರು ಗ್ರಾಮದ ವಿಚ್ಛೇದಿತ ದಂಪತಿಗಳ ಜಮೀನು ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಸರ್ವೇ ಕಾರ್ಯ ನಡೆಸದೇ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಾಮೀನು ರಹಿತ ಬಂಧನದ ವಾರೆಂಟ್‍ಗೆ ಒಳಗಾಗಿದ್ದ ಮದ್ದೂರು ತಹಶೀಲ್ದಾರ್ ಜಿ.ಹೆಚ್. ನಾಗರಾಜು ಅವರಿಗೆ ಜೆಎಂಎಫ್‍ಸಿ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ತಾಲೂಕು ಕಚೇರಿಯ ಸರ್ವೇ ಇಲಾಖೆ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 11.15ರ ಸುಮಾರಿಗೆ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ ಅವರ ಮುಂದೆ ಹಾಜರಾದ ತಹಶೀಲ್ದಾರ್ ಜಿ.ಹೆಚ್.ನಾಗರಾಜು ಜಾಮೀನು ಕೋರಿ ಅರ್ಜಿ ಸಲ್ಲಿಸಿದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು 500 ರೂ. ಭದ್ರತಾ ಠೇವಣ ಬಾಂಡ್ ಜಾಮೀನು ಪಡೆಯುವಂತೆ ಸೂಚಿಸಿದರು. ನಂತರ ಭದ್ರತಾ ಬಾಂಡ್ ನೀಡಿದ ಬಳಿಕ ತಹಶೀಲ್ದಾರ್ ಜಿ.ಹೆಚ್.ನಾಗರಾಜು ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದರು.

ಜಮೀನು ಸರ್ವೇ ಕಾರ್ಯ ನಡೆಸದೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ಬಂಧನದ ಆದೇಶ ಹೊರಡಿಸಿದ್ದರಿಂದ ಬಂಧನದ ಭೀತಿಗೆ ಒಳಗಾಗಿದ್ದ ತಹಶೀಲ್ದಾರ್ ನಾಗರಾಜು ಶುಕ್ರವಾರ ಮಧ್ಯಾಹ್ನದಿಂದಲೇ ಕಂದಾಯ ಇಲಾಖೆ ಪ್ರಕರಣದ ವಿಚಾರಣೆಗೂ ಹಾಜರಾಗದೇ ಕಚೇರಿಯಿಂದ ನಾಪತ್ತೆಯಾಗಿದ್ದರು.

ನಂತರ ಶನಿವಾರ ನ್ಯಾಯಾಧೀಶರ ಮುಂದೆ ಹಾಜರಾದ ತಹಶೀಲ್ದಾರ್ ನಾಗರಾಜು ಬೆಳತೂರು ಗ್ರಾಮದಲ್ಲಿ ಬಿ.ಎಲ್.ಕೃಷ್ಣ ಹಾಗೂ ಸುಜಾತ ದಂಪತಿಗಳ ಜಮೀನು ವಿವಾದದ ಸರ್ವೇ ಕಾರ್ಯ ನಡೆಸಲು ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ ಪ್ರಕರಣದ ವಿಚಾರಣೆಯನ್ನು ಜು.21ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

Translate »