ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ
ಕೊಡಗು, ಮೈಸೂರು

ಉದ್ದೇಶಿತ ಮೈಸೂರು-ತಲಚೇರಿ ರೈಲ್ವೆ ಮಾರ್ಗ  ಸರ್ವೇಗೆ ಬಾಡಗ-ಕಮಟೂರು ಗ್ರಾಮಸ್ಥರ ತಡೆ

June 9, 2018
  • ತೀವ್ರ ವಿರೋಧದ ನಡುವೆಯೂ ಸದ್ದು-ಗದ್ದಲವಿಲ್ಲದೆ ನಡೆಯುತ್ತಿರುವ ಯೋಜನೆ ಜಾರಿ ಯತ್ನ
  • ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಂಸದ ಪ್ರತಾಪ್ ಸಿಂಹ ನೀಡಿದ್ದ ಭರವಸೆ ಸುಳ್ಳೆ!?

ಪೊನ್ನಂಪೇಟೆ: ಕೊಡಗಿನ ಜನತೆಯ ಪ್ರತಿಭಟನೆಯನ್ನೂ ಲೆಕ್ಕಿಸದೆ ದಕ್ಷಿಣ ಕೊಡಗು ಮೂಲಕ ಕೇರಳಗೆ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆಯನ್ನು ಅನುಷ್ಟಾನಗೊಳಿಸಿದ ಬೆನ್ನಲ್ಲೇ ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಮೈಸೂರು-ತಲಚೇರಿ ರೈಲ್ವೆ ಮಾರ್ಗ ಯೋಜನೆ ಅನುಷ್ಟಾನಕ್ಕೆ ಸದ್ದಿಲ್ಲದೆ ಚಾಲನೆ ನೀಡಿರುವ ಅಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‍ನ ಗುತ್ತಿಗೆ ಅಧಿಕಾರಿ ಎಸ್.ಹೆಚ್.ಆದರ್ಶ್ ಅಗರವಾಲ್ ನೇತೃತ್ವದಲ್ಲಿ ರೈಲ್ವೆ ಮಾರ್ಗಕ್ಕೆ ಸರ್ವೇ ಕಾರ್ಯ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ ಕುಟ್ಟ ಸಮೀಪದ ಬಾಡಗ ಮತ್ತು ಕಮಟೂರು ಗ್ರಾಮಸ್ಥರು ಸರ್ವೇ ತಂಡವನ್ನು ತರಾಟೆಗೆ ತೆಗೆದುಕೊಂಡು, ವಾಪಸ್ ಕಳುಹಿಸಿದ ಘಟನೆಯೂ ಇಂದು ನಡೆದಿದೆ.

ವಿವರ: ಮಹಾರಾಷ್ಟ್ರ ನೋಂದಣ ಸಂಖ್ಯೆ ಇರುವ ಕ್ವಾಲಿಸ್ ಕಾರಿನಲ್ಲಿ (ಎಂಹೆಚ್ 04 ಎಂವೈ. 4484) ಎಂಟು ಜನರಿದ್ದ ತಂಡ ಜಿಪಿಆರ್‍ಎಸ್, ಮ್ಯಾಪ್ ಸೇರಿದಂತೆ ಸರ್ವೇ ಸಲಕರಣೆಗಳೊಂದಿಗೆ ಆಗಮಿಸಿ, ಬಾಡಗ-ಕಮಟೂರು ಭಾಗದ ಖಾಸಗಿ ವ್ಯಕ್ತಿಗಳ ಜಾಗದಲ್ಲಿ ಅವರ ಗಮನಕ್ಕೂ ಬಾರದಂತೆ ಸರ್ವೇ ಕಾರ್ಯ ನಡೆಸುತ್ತಿರು ವುದನ್ನು ಗಮನಿಸಿದ ಗ್ರಾಮಸ್ಥರು ವಿಚಾರಿಸಿದಾಗ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕಾಗಿ ಸರ್ವೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಸರ್ವೇ ತಂಡವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಸರ್ವೇ ನಡೆಸಲು ಬಿಡದೆ ವಾಪಸ್ ಕಳುಹಿಸಿದ್ದಾರೆ.

ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ ಮೈಸೂರು-ಕೊಡಗು ರೈಲ್ವೆ ಮಾರ್ಗದ ಸರ್ವೇ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಈ ತಂಡವೂ ಕುಟ್ಟ ಮತ್ತು ಕೆ.ಬಾಡಗ ಗ್ರಾಪಂ ವ್ಯಾಪ್ತಿಗಳ ಹಲವೆಡೆ ಈಗಾಗಲೇ ಸರ್ವೇ ಕಾರ್ಯ ಮುಗಿಸಿದೆ. ಸರ್ವೇ ತಂಡವು ಹೊಂದಿದ್ದ ಮ್ಯಾಪನ್ನು ಉಲ್ಲೇಖಿಸಿ ಗ್ರಾಮಸ್ಥರಿಗೆ ನೀಡಿದ ಮಾಹಿತಿ ಯಂತೆ ಈಗಾಗಲೇ ರೈಲು ಮಾರ್ಗ ಹಾದು ಹೋಗುವ ಸ್ಥಳ ಗುರುತಿಸಲಾಗಿದ್ದು, ಕೊಡಗಿನ ಕುಟ್ಟ ಮೂಲಕ ಈ ಮಾರ್ಗವು ಕೇರಳದ ಕಾಟುಕೊಳಂ ಅನ್ನು ಸಂಪರ್ಕಿಸಲಿದೆ. ಕುಟ್ಟ ಸ್ಟೇಷನ್, ಕಾನೂರು ಸ್ಟೇಷನ್, ಕಾಟಿಕೊಳಂ ಸ್ಟೇಷನ್‍ಗಳನ್ನು ಈಗಾಗಲೇ ಗುರುತಿಸಲಾಗಿದೆ. ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಕೊಡಗಿನಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ‘ಸೇವ್ ಕೊಡಗು’ ಮತ್ತು ‘ಕೊಡಗಿನ ರೈಲ್ವೆ ಮಾರ್ಗ ವಿರೋಧ ವೇದಿಕೆ’ ರಚಿಸಿಕೊಂಡು ದಕ್ಷಿಣ ಕೊಡಗಿನಲ್ಲಿ ಹಲವಾರು ಪ್ರತಿಭಟನೆ ನಡೆಸಿದ್ದಲ್ಲದೇ, ಫೆಬ್ರವರಿ 18ರಂದು ಕೊಡಗಿನ ವಿವಿಧ ಸಂಘಟನೆಗಳ ಸಾವಿರಾರು ಮಂದಿ ಮೈಸೂರು ಕೊಡವ ಸಮಾಜದ ಆಶ್ರಯದಲ್ಲಿ ಮೈಸೂರಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ರೈಲ್ವೆ ಯೋಜನೆಗೆ ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ದಕ್ಷಿಣ ಕೊಡಗನ್ನು ಹಾದು ಹೋಗುವ ಉದ್ದೇಶಿತ ರೈಲ್ವೆ ಮಾರ್ಗಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದರು. ಮಾತ್ರವಲ್ಲದೇ, ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರು ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು.

ಬಾಡಗ-ಕಮಟೂರು ಭಾಗದಲ್ಲಿ ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಸರ್ವೇ ನಡೆಸುತ್ತಿದ್ದಾರೆ ಎಂದು ನನಗೆ ಮೊಬೈಲ್ ಮೂಲಕ ಗ್ರಾಮಸ್ಥರು ಮಾಹಿತಿ ನೀಡಿದರು. ಸರ್ವೇ ನಡೆಸಲು ಬಿಡದೆ ಆ ತಂಡವನ್ನು ವಾಪಸ್ ಕಳುಹಿಸಿ ಎಂದು ನಾನು ಗ್ರಾಮಸ್ಥ ರಿಗೆ ತಿಳಿಸಿದ್ದೆ. ಅದರಂತೆ ಗ್ರಾಮಸ್ಥರು ಸರ್ವೇ ತಂಡವನ್ನು ವಾಪಸ್ ಕಳುಹಿಸಿದ್ದಾರೆ. ದಕ್ಷಿಣ ಕೊಡಗನ್ನು ಹಾದು ಹೋಗುವ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡುವುದಿಲ್ಲ ಎಂದು ರೈಲ್ವೆ ಸಚಿವರು ಮತ್ತು ಸಂಸದರು ಈಗಾಗಲೇ ತಿಳಿಸಿದ್ದಾರೆ. ಹಾಗಿದ್ದು ಸರ್ಕಾರದ ಗಮನಕ್ಕೂ ಬಾರದೆ ಸರ್ವೇ ನಡೆಯುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ದಕ್ಷಿಣ ಕೊಡಗಿನ ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆ ಅನುಷ್ಟಾನಕ್ಕೆ ಅವಕಾಶ ಕೊಡುವುದಿಲ್ಲ. -ಕೆ.ಜಿ.ಬೋಪಯ್ಯ, ವಿರಾಜಪೇಟೆ ಶಾಸಕರು.

ಮೈಸೂರು-ತಲಚೇರಿ ರೈಲ್ವೆ ಮಾರ್ಗಕ್ಕೆ ಸರ್ವೇ ನಡೆಯುತ್ತಿರುವ ವಿಷಯ ಗ್ರಾಮಸ್ಥರಿಂದ ನನಗೆ ತಿಳಿದಿದೆ. ಗ್ರಾಮಸ್ಥರು ತಡೆದು, ಸರ್ವೇ ತಂಡವನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲದೆ, ಸರ್ವೇ ನಡೆಯುತ್ತಿದ್ದ ಛಾಯಾಚಿತ್ರ ಸೇರಿದಂತೆ ಹಲವಾರು ಮಾಹಿತಿಗಳನ್ನು ಗ್ರಾಮಸ್ಥರು ನನಗೆ ರವಾನಿಸಿದ್ದಾರೆ. ತಕ್ಷಣವೇ ನಾನು ಈ ಎಲ್ಲಾ ಮಾಹಿತಿಗಳನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ವಾಟ್ಸಾಪ್ ಮೂಲಕ ಕಳುಹಿಸಿ ದ್ದೇನೆ. ತಕ್ಷಣವೇ ರೈಲ್ವೆ ಸಚಿವರನ್ನು ಸಂಪರ್ಕಿಸಿ ಈ ಸರ್ವೇ ಕಾರ್ಯವನ್ನು ತಡೆಯಬೇಕು ಎಂದು ಮನವಿ ಮಾಡಿದ್ದೇನೆ. ಅಲ್ಲದೆ, ರೈಲ್ವೆ ಸಚಿವರನ್ನು ಸಂಪರ್ಕಿಸಿದ ನಂತರ ದೊರೆಯುವ ಪ್ರತಿಕ್ರಿಯೆ ಬಗ್ಗೆ ನಮಗೆ ತಿಳಿಸಬೇಕೆಂದು ಸಹ ಸಂಸದರನ್ನು ಕೇಳಿದ್ದೇನೆ. ಈಗ ನಾನು ಕೊಡಗಿನಿಂದ ಹೊರಗಿದ್ದೇನೆ. ಇನ್ನೆರಡು ದಿನಗಳಲ್ಲಿ ಕೊಡಗಿಗೆ ವಾಪಸ್ ಆಗುತ್ತಿದ್ದು, ಮುಂದಿನ ಹೋರಾಟ ಏನು? ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ.
-ಕರ್ನಲ್ ಸಿ.ಪಿ.ಮುತ್ತಣ್ಣ, ಸಂಚಾಲಕರು, ಸೇವ್ ಕೊಡಗು

Translate »