ಮದ್ದೂರಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ
ಮೈಸೂರು

ಮದ್ದೂರಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ

December 25, 2018

ಮದ್ದೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ದುಷ್ಕರ್ಮಿಗಳು ಜೆಡಿಎಸ್ ಮುಖಂಡ ನೋರ್ವನನ್ನು ಕೂತಿದ್ದ ಕಾರಿನಲ್ಲಿಯೇ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಮದ್ದೂರಿನ ಟಿ.ಬಿ.ವೃತ್ತದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ತೊಪ್ಪನಹಳ್ಳಿ ಪ್ರಕಾಶ್ (48) ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೊಳಗಾದವರು.

ಘಟನೆ ಹಿನ್ನೆಲೆ: ತೊಪ್ಪನಹಳ್ಳಿ ಪ್ರಕಾಶ್ ಇಂದು ಮಧ್ಯಾಹ್ನ ಪಟ್ಟಣದ ಟಿ.ಬಿ.ವೃತ್ತದಿಂದ ಎಳನೀರು ಮಾರುಕಟ್ಟೆಗೆ ಹೋಗುವ ಮಾರ್ಗಮಧ್ಯೆ ಕಾರಿನ ಸೀಟ್ ಕವರ್ ಹಾಕಿಸಲು ಕಾರು ನಿಲ್ಲಿಸಿದ್ದರು. ಈ ವೇಳೆ ಅವರ ಜೊತೆ ಬಂದಿದ್ದ ಸ್ನೇಹಿತರಾದ ವಿನಯ್ ಮತ್ತು ಮೊಗಣ್ಣ ಅವರು ಕಾರಿನ ಸೀಟ್ ಕವರ್ ತರಲು ಅಂಗಡಿಗೆ ಹೋದ ವೇಳೆ 2 ಬೈಕ್‍ಗಳಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ನಾಲ್ವರು ಹಂತಕÀರು ಕಾರಿನೊಳಗೆ ಕುಳಿತ್ತಿದ್ದ ಪ್ರಕಾಶ್ ಅವರ ಮೇಲೆ ಏಕಾಏಕಿ ದಾಳಿ ಮಾಡಿ ಮಾರ ಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಕತ್ತು ಸೀಳಿ ಪರಾರಿಯಾಗಿದ್ದಾರೆ. ಕಾರಿನೊಳಗೆ ಚೀರಾಟದ ಸದ್ದು ಕೇಳಿದ ಪ್ರಕಾಶ್ ಸ್ನೇಹಿತರಾದ ಮೂಗಣ್ಣ ಹಾಗೂ ವಿನಯ್ ತಕ್ಷಣವೇ ಓಡಿ ಬಂದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಪ್ರಕಾಶ್ ಅವರನ್ನು ಮದ್ದೂರು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದರು. ಅಷ್ಟರಲ್ಲಿ ಪ್ರಕಾಶ್ ಕೊನೆಯುಸಿರೆಳೆದಿದ್ದರು.

ಹಳೇ ದ್ವೇಷ ಶಂಕೆ: ಜಿಪಂ ಮಾಜಿ ಅಧ್ಯಕ್ಷೆ ಲಲಿತ ಅವರ ಪತಿ ಪ್ರಕಾಶ್ ಜೆಡಿಎಸ್‍ನಲ್ಲಿ ಗುರ್ತಿಸಿ ಕೊಂಡು ರಾಜಕಾರಣದಲ್ಲಿ ಸಕ್ರಿಯವಾಗಿದ್ದರು. 2016ರ ಡಿ.25ರಂದು ತೊಪ್ಪನಹಳ್ಳಿ ಗ್ರಾಮದಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಆ ಘರ್ಷಣೆಯಲ್ಲಿ ಇಬ್ಬರು ಜೆಡಿಎಸ್ ಕಾರ್ಯಕರ್ತರನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣ ಇಲ್ಲಿಯವರೆಗೂ ಬೂದಿ ಮುಚ್ಚಿದ ಕೆಂಡದಂತಿತ್ತು. ಆ ಜೋಡಿ ಕೊಲೆ ಪ್ರಕರಣದಲ್ಲಿ ಪ್ರಕಾಶ್ ಪ್ರಮುಖ ಸಾಕ್ಷಿದಾರನಾಗಿದ್ದು, ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಮಾಡಲಾಗಿದೆ ಎಂಬ ಶಂಕೆ ಪೊಲೀಸರಲ್ಲಿ ವ್ಯಕ್ತವಾಗಿದೆ. ಹಾಡಹಗಲೇ ಜೆಡಿಎಸ್ ಮುಖಂಡ ಪ್ರಕಾಶ್ ಅವರ ಕೊಲೆಯಿಂದ ಮದ್ದೂರು ಜನ ಭಯಭೀತರಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವ ರಾಜ್ ನೇತೃತ್ವದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪ್ರಕಾಶ್ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲದೇ ಮೃತ ಪ್ರಕಾಶ್ ಶವ ನೋಡಲು ಬಿಡುತ್ತಿಲ್ಲ ಹಾಗೂ ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ರವಾನಿಸಲು ಪೋಲಿಸರು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿ ಸಂಬಂಧಿಕರು ಮತ್ತು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಪಟ್ಟಣದ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದರು. ಹರಸಾಹಸ ಪಟ್ಟು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಹೆದ್ದಾರಿ ಬಂದ್, ಪ್ರತಿಭಟನೆ: ಪ್ರಕಾಶ್ ಅವರ ಕೊಲೆ ಸುದ್ದಿ ತಿಳಿಯುತ್ತಿದ್ದಂತೆಯೇ ಜೆಡಿಎಸ್‍ನ ಸಹಸ್ರಾರು ಕಾರ್ಯಕರ್ತರು ಮದ್ದೂರು ಪ್ರವಾಸಿ ಮಂದಿರದ ಬಳಿ ಜಮಾಯಿಸಿ, ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ನಡೆಸಿದರು. ಅಲ್ಲದೆ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಅಲ್ಲದೇ ಈ ವೇಳೆ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಹೆದ್ದಾರಿ ತಡೆ ಪರಿಣಾಮ ರಾತ್ರಿ 7ರವರೆಗೂ ಮೈಸೂರು-ಬೆಂಗಳೂರು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಮದ್ದೂರು ಸಂಪರ್ಕಿಸುವ ರಸ್ತೆಯ ಎರಡೂ ಕಡೆ 10 ಕಿ.ಮೀ.ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು. ರಸ್ತೆ ತೆರವುಗೊಳಿಸಲು ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಮುಸ್ಸಂಜೆ ವೇಳೆಗೆ ಮಂಡ್ಯ ಮತ್ತು ಶಿವಪುರದ ಬಳಿ ಟ್ರಾಫಿಕ್ ಪೊಲೀಸರಿಂದ ಬದಲಿ ಸಂಚಾರ ವ್ಯವಸ್ಥೆ ಮಾಡಲಾಯಿತು. ಸ್ಥಳದಲ್ಲಿ ಕೆಎಸ್‍ಆರ್‍ಪಿ ತುಕಡಿ ಮೊಕ್ಕಾಂ ಹೂಡಿದ್ದು, ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ. ಪ್ರಕಾಶ್ ಅವರ ಕೊಲೆ ಹಿನ್ನೆಲೆಯಲ್ಲಿ ತೊಪ್ಪನಹಳ್ಳಿ ಮತ್ತು ಹೊನ್ನಲಗೆರೆಯಲ್ಲಿಯೂ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗೃತಾ ಕ್ರಮವಾಗಿ ಅಲ್ಲಿಯೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಎಲ್‍ಆರ್‍ಎಸ್ ಖಂಡನೆ: ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಸಂಸದ ಎಲ್.ಆರ್. ಶಿವರಾಮೇಗೌಡ, ಕುಟುಂಬದವರಿಗೆ ಸಾಂತ್ವನ ಹೇಳಿ, ಪ್ರಕಾಶ್ ಹತ್ಯೆಯನ್ನು ಖಂಡಿಸಿದರು. ನಾನು ಮೈಸೂರಿಗೆ ತೆರಳುತ್ತಿದ್ದೆ. ಆದರೆ ಘಟನೆ ಕೇಳಿ ಇಲ್ಲಿಗೆ ಬಂದೆ. ಮೊನ್ನೆ ತಾನೇ ಸಿಕ್ಕಿ ಪ್ರಕಾಶ್‍ನನ್ನು ಮಾತನಾಡಿಸಿದ್ದೆ. ವೈರತ್ವವಿದ್ದರೆ ಹೋರಾಡಬೇಕು. ಈ ರೀತಿ ಘಟನೆ ನಡೆಯಬಾರದು ಎಂದರು.

ಈ ಘಟನೆ ತುಂಬಾ ಬೇಸರ ತಂದಿದೆ. ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರೊಂದಿಗೆ ಮಾತನಾಡಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ರಕ್ಷಣೆ ಮಾಡುವುದು ನಮ್ಮ ಹೊಣೆ. ಆರೋಪಿಗಳನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಡಿ.25ರಂದು ಬೆಳಿಗ್ಗೆ 11 ಗಂಟೆಗೆ ಸಿಎಂ ಹೆÉಚ್.ಡಿ.ಕುಮಾರಸ್ವಾಮಿ ಅವರು ತೊಪ್ಪನಹಳ್ಳಿಗೆ ಆಗಮಿಸಲಿದ್ದಾರೆ. ಘಟನೆ ಬಗ್ಗೆ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಜೆಡಿಎಸ್ ಕಾರ್ಯಕರ್ತರು ಈ ವಿಚಾರವಾಗಿ ದುಡುಕುವುದು ಬೇಡ ಮುಖ್ಯಮಂತ್ರಿಗಳು ಮತ್ತು ನಾವು ಕಾರ್ಯಕರ್ತರನ್ನು ರಕ್ಷಣೆ ಮಾಡುತ್ತೇವೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

Translate »