ಎನ್‍ಸಿಸಿ ಮೈಸೂರು ಘಟಕಕ್ಕೆ  2 ಅತಿ ಹಗುರ ತರಬೇತಿ ವಿಮಾನ
ಮೈಸೂರು

ಎನ್‍ಸಿಸಿ ಮೈಸೂರು ಘಟಕಕ್ಕೆ 2 ಅತಿ ಹಗುರ ತರಬೇತಿ ವಿಮಾನ

January 18, 2019

ಮೈಸೂರು: ನ್ಯಾಷನಲ್ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಮೈಸೂರು ಘಟಕ 2 ಆಸನಗಳ ಪುಟ್ಟ ತರಬೇತಿ ವಿಮಾನಗಳನ್ನು ಪಡೆದುಕೊಂಡು ಭಾರೀ ಹರ್ಷದಲ್ಲಿದೆ. ದಕ್ಷಿಣ ಭಾರತದಲ್ಲೇ ಇಂತಹ 2 ವಿಮಾನ ಗಳನ್ನು ಪಡೆದ ಮೊದಲ ಎನ್‍ಸಿಸಿ ಘಟಕ ಎನಿಸಿಕೊಂಡಿದೆ.

ಮೈಸೂರು ಭಾಗದ ವಿವಿಧ ಕಾಲೇಜುಗಳ ಎನ್‍ಸಿಸಿ ಕೆಡೆಟ್‍ಗಳಿಗೆ `ಪೈಪಿಸ್ಟ್ರೆಲ್ ವೈರಸ್ ಎಫ್.ಡಬ್ಲ್ಯು-80’ ಅತಿ ಹಗುರ ವಿಮಾನ ಗಳಿಂದ ವಿಮಾನ ಹಾರಾಟದ ತರಬೇತಿ ಪಡೆಯುವ ಸದವಕಾಶ ಒದಗಿಬಂದಿದೆ.

ದೇಶಾದ್ಯಂತದ ಎನ್‍ಸಿ ಘಟಕಗಳಿಗೆ ಒಟ್ಟು 100 ಅತಿ ಹಗುರ ತರಬೇತಿ ವಿಮಾನಗಳನ್ನು ಖರೀದಿಸಿ ಹಂಚುವ ಯೋಜನೆಯನ್ನು ಎನ್‍ಸಿಸಿ ಹಾಕಿಕೊಂಡಿದೆ. ಅದರ ಮೊದಲ ಭಾಗವಾಗಿ ಮೈಸೂರು ಘಟಕಕ್ಕೆ 2 ವಿಮಾನಗಳ ಪೂರೈಕೆ ಯಾಗಿದೆ. ಕರ್ನಾಟಕ-ಗೋವಾದ ಎನ್‍ಸಿಸಿ ನಿರ್ದೇಶನಾಲಯದ ಡೆಪ್ಯುಟಿ ಡೈರೆಕ್ಟರ್ ಜನ ರಲ್ ಆದ ಬ್ರಿಗೇಡಿಯರ್ ಡಿ.ಎಂ.ಪೂರ್ವಿ ಮಠ್ (ವಿಎಸ್‍ಎಂ) ಮತ್ತು ಎನ್‍ಸಿಸಿ ಮೈಸೂರು ಗ್ರೂಪ್‍ನ ಗ್ರೂಪ್ ಕಮಾಂಡರ್ ಆಗಿರುವ ಕರ್ನಲ್ ಎಂ.ಕೆ.ಬೆಳ್ಳಿಯಪ್ಪ ಅವರು ಮೈಸೂರು ವಿಮಾನ ನಿಲ್ದಾಣದಲ್ಲಿ ಈ ಎರಡೂ ವಿಮಾನಗಳನ್ನು ಇತ್ತೀಚೆಗೆ ಬರಮಾಡಿಕೊಂಡು ಎನ್‍ಸಿಸಿ ಮೈಸೂರು ಘಟಕಕ್ಕೆ ಸೇರ್ಪಡೆ ಮಾಡಿಕೊಂಡರು. ಈವರೆಗೂ ಮೈಸೂರಿನ ಎನ್‍ಸಿಸಿ ಕೆಡೆಟ್‍ಗಳೆಲ್ಲಾ ವಿಮಾನ ಹಾರಾಟದ ತರಬೇತಿ ಪಡೆಯಲು ಬೆಂಗಳೂರಿಗೇ ತೆರಳಬೇಕಿತ್ತು. ಇನ್ನು ಮುಂದೆ ಎನ್‍ಸಿಸಿ ಏರ್‍ವಿಂಗ್ ಕೆಡೆಟ್‍ಗಳಿಗೆ ಬಹಳ ಸುಲಭದಲ್ಲಿ ಮೈಸೂರಿನಲ್ಲಿಯೇ ವಿಮಾನ ಹಾರಾಟ ತರಬೇತಿ ದೊರೆಯಲಿದೆ ಎಂದು ಕರ್ನಲ್ ಬೆಳ್ಳಿಯಪ್ಪ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ್ದಾರೆ.

ಮೈಸೂರು ಎನ್‍ಸಿಸಿ ಗ್ರೂಪ್ ಪ್ರಧಾನ ಕಚೇರಿಯಲ್ಲಿ ಒಬ್ಬರು ಏರ್ ಸ್ಕ್ವಾಡ್ರನ್ ಇದ್ದು, ಕೆಡೆಟ್‍ಗಳಿಗೆ ಪಠ್ಯ ಮತ್ತು ಪ್ರಾಯೋಗಿಕ ತರಬೇತಿ ನೀಡಲಿದ್ದಾರೆ. ಈ ಘಟಕದಲ್ಲಿ ಒಟ್ಟು 10 ಸಾವಿರ ಎನ್‍ಸಿಸಿ ಕೆಡೆಟ್‍ಗಳಿದ್ದು, ಅವರಲ್ಲಿ 1300 ಮಂದಿ ಮಾತ್ರ ಏರ್‍ಫೋರ್ಸ್ ವಿಂಗ್‍ಗೆ ಸೇರಿದವರಾಗಿದ್ದಾರೆ. ಈ ವಿಭಾಗದಲ್ಲಿನ ಕಿರಿಯ ಕೆಡೆಟ್‍ಗಳಿಗೂ ಈ 2 ಆಸನಗಳ ವಿಮಾನದಿಂದ ತರಬೇತಿ ನೀಡಲಾಗುತ್ತದೆ. ಹಿರಿಯ ಕೆಡೆಟ್‍ಗಳು `ಸಿ’ ಪ್ರಮಾಣ ಪತ್ರ ಪಡೆಯಲು 4 ಬಾರಿಯಾದರೂ ವಿಮಾನ ಹಾರಾಟ ತರಬೇತಿಯಲ್ಲಿ ಪಾಲ್ಗೊಳ್ಳಬೇಕಿದೆ.

Translate »