ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ
ಮೈಸೂರು

ಗೋಮಾಂಸ ತಿನ್ನುವುದಿಲ್ಲ ಅನ್ನುವವರು ಬೇರೆ ಪ್ರಾಣಿ ಮಾಂಸವನ್ನೂ ತಿನ್ನಬಾರದು : ಡಾ.ಎಸ್.ಎಲ್.ಭೈರಪ್ಪ

January 21, 2019

ಮೈಸೂರು: ಗೋ ಮಾಂಸ ತಿನ್ನುವುದಿಲ್ಲ, ತಿನ್ನಬಾರದು ಎನ್ನುವವರು ಬೇರೆ ಯಾವುದೇ ಪ್ರಾಣಿ ಮಾಂಸವನ್ನೂ ತಿನ್ನಬಾರದು ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.

ಮೈಸೂರಿನ ಕಲಾಮಂದಿರಲ್ಲಿ ಹಮ್ಮಿಕೊಂಡಿದ್ದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋ ತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ಕಾದಂಬರಿ `ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಕೇವಲ ಗೋವಿನ ಕಥೆ ಮಾತ್ರ ಹೇಳಿಲ್ಲ. ಅಲ್ಲಿ ಮಾಂಸಾ ಹಾರ ಹಾಗೂ ಸಸ್ಯಾಹಾರ ಪರಿಕಲ್ಪನೆ ಬಗ್ಗೆಯೂ ಹೇಳಿದಿದ್ದೇನೆ ಎಂದು ತಿಳಿಸಿದರು.

ಈ ಕಾದಂಬರಿ ಬರೆಯುವ ವೇಳೆಗೆ ಜೈನ ಧರ್ಮದ ತತ್ವಶಾಸ್ತ್ರ ಓದುಕೊಂಡಿದ್ದೆ. ಸಸ್ಯಾಹಾರ ಪರಿಕಲ್ಪನೆಗೆ ಹೆಚ್ಚು ಪ್ರಚಾರ ನೀಡಿದ್ದು ಜೈನ ಧರ್ಮ. ಕಾದಂಬರಿಯಲ್ಲಿ ಹಸುವಿನ ಮಹತ್ವದ ಬಗ್ಗೆ ಚಿತ್ರಿಸಿದ್ದೇನೆ. ಗೋ ಮಾಂಸ ತಿನ್ನುವುದನ್ನು ವಿರೋಧಿಸು ವವರು ಇನ್ನಾವುದೇ ಪ್ರಾಣಿ ಮಾಂಸ ತಿನ್ನುವುದಕ್ಕೂ ವಿರೋಧಿಸಬೇಕು. ಕಾರಣ ನಮ್ಮ ದೇಶದಲ್ಲಿ ಉದಯಿಸಿದ ಎಲ್ಲಾ ಧರ್ಮಗಳು ಪುನರ್ ಜನ್ಮದ ಮೇಲೆ ನಂಬಿಕೆ ಇಟ್ಟಿದ್ದು, ಯಾವುದೇ ಪ್ರಾಣಿ ನಮ್ಮದೇ ಸಂಬಂಧಿಯಾಗಿದ್ದು ಬಳಿಕ ಮರು ಜನ್ಮದಲ್ಲಿ ಪ್ರಾಣಿಯಾಗಿರುವ ಸಾಧ್ಯತೆ ಇರುತ್ತದೆ ಎಂಬ ನಂಬಿಕೆ ನಮ್ಮೆಲ್ಲಾ ಧರ್ಮಗಳಲ್ಲೂ ಇದೆ. ಈ ನಂಬಿಕೆ ಹಿನ್ನೆಲೆಯಲ್ಲಿ ಗೋ ಮಾಂಸ ತಿನ್ನುವುದಿಲ್ಲ, ತಿನ್ನಬಾರದು ಎನ್ನುವವರು ಯಾವುದೇ ಪ್ರಾಣಿ ಮಾಂಸ ತಿನ್ನದಿರುವುದೇ ಸೂಕ್ತ ಎಂದು ನುಡಿದರು.

ಭಾರತದಲ್ಲಿ ಉದಯಿಸಿದ ವೈದಿಕ, ಬೌದ್ಧ, ಜೈನ ಸೇರಿದಂತೆ ಎಲ್ಲಾ ಧರ್ಮದಲ್ಲಿ ಪುನರ್ ಜನ್ಮದ ನಂಬಿಕೆ ಇದೆ. ಮಾಂಸಾಹಾರ ತ್ಯಜಿಸಬೇಕೆಂಬುದನ್ನು ತಾರ್ಕಿಕ ಸವಾಲಾಗಿ ಸ್ವೀಕರಿಸಿದವರು ಜೈನ ಧರ್ಮಿಯರು. ಇದರಿಂದ ದೇಶದ ಬೇರೆ ಧರ್ಮದಲ್ಲಿ ಪರಿಣಾಮ ಉಂಟಾಯಿತು. ಅಲ್ಲದೆ, ಯಜ್ಞ-ಯಾಗಾದಿಗಳಲ್ಲೂ ಪ್ರಾಣಿ ಹಿಂಸೆ ತ್ಯಜಿಸಲಾಯಿತು ಎಂದು ಅವರು ವಿವರಿಸಿದರು.

ತಬ್ಬಲಿಯು ನೀನಾದೆ ಮಗನೆ’ಯಲ್ಲಿ ಕೇವಲ ಒಂದು ಕಥೆ ಮಾತ್ರವಲ್ಲದೆ ಮೌಲ್ಯ ಮೀಮಾಂಸೆಯನ್ನೂ ಹೊಂದಿದೆ. ಪ್ರತಿಯೊಂದು ನನ್ನ ಬರವಣಿಗೆಯಲ್ಲಿ ನನಗೆ ಅರಿವಿಲ್ಲದೆಯೇ ಮೌಲ್ಯ ಮೀಮಾಂಸೆ ಇದೆ. ಸಂಗೀತಗಾರನ ಜೀವನ ಆಧಾರಿಸಿಮಂದ್ರ’ ಕಾದಂಬರಿ ಬರೆದೆ. ಸಂಗೀತದ ಮೂಲಕ ಕೆಲ ಮತ್ತು ಜೀವನ ಮೌಲ್ಯದ ಸಂಬಂಧದ ಮೇಲೆ ಬೆಳಕು ಚೆಲ್ಲುವ ಕಾದಂಬರಿ ಅದು. ನಾವು ಯಾವುದನ್ನೇ ಬರೆಯಲು ಹೊರಟರೂ ಜೀವನ ಮೌಲ್ಯಗಳ ಸಮಸ್ಯೆಗೆ ಸಿಲುಕಿರುವುದು ಎದುರಾಗುತ್ತವೆ ಎಂದು ಹೇಳಿದರು.

ಎರಡು ದಿನಗಳ ಕಾಲ ನಡೆದ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದಲ್ಲಿ ಸಾಹಿತ್ಯಾ ಸಕ್ತರು, ಅಭಿಮಾನಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅಗ್ರಗಣ್ಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ ಸಾಹಿತ್ಯ ಸೇವೆ ಅಪಾರ ಮನ್ನಣೆ ವ್ಯಕ್ತಪಡಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್, ಮೈಸೂರು ಮಿತ್ರ’ ಮತ್ತುಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ (ಕೆಬಿಜಿ), ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ಗೋ.ಮಧುಸೂದನ್, ಪುಣೆ ಮೂಲದ ಲೇಖಕಿ ಶೆಫಾಲಿ ವೈದ್ಯ, ಲೇಖಕ ಡಾ.ನಂದಕಿಶೋರ್ ಆಚಾರ್ಯ, ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಪ್ರೊ.ಎಂ.ಕೃಷ್ಣೇಗೌಡ, ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಿ.ಎಲ್.ಶೇಖರ್ ಸೇರಿದಂತೆ ಗಣ್ಯರು, ಭೈರಪ್ಪನವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಸಾಹಿತ್ಯದ ವಿಷಯ ಎಲ್ಲ ಕಾಲಕ್ಕೂ ಅನ್ವಯಿಸುವಂತಿರಬೇಕು: ನಿಜವಾದ ಸಾಹಿತ್ಯದ ವಿಷಯ ಎಲ್ಲ ಕಾಲಕ್ಕೂ ಅನ್ವಯಿಸುವಂತಿರಬೇಕು. ಆಗ ಮಾತ್ರ ಆ ಸಾಹಿತ್ಯದ ಆಯಸ್ಸು ಹೆಚ್ಚಲು ಸಾಧ್ಯ. ಆರ್ಥಿಕ, ಸಾಮಾಜಿಕ ಹಾಗೂ ಕಾನೂನಾತ್ಮಕ ವಿಷಯಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ಸಾಹಿತ್ಯದ ಮೂಲಕ ಸಾಧ್ಯವಿಲ್ಲ. ಮಾನವ ಕುಲದ ಸಮಸ್ಯೆಗಳು ಎಲ್ಲಾ ಕಾಲದಲ್ಲೂ ಇದ್ದು, ಮಹಾಭಾರತ ಹಾಗೂ ಆನಂತರದ ಐತಿಹಾಸಿಕ ಕಾಲದಲ್ಲಿ ಮಾತ್ರವಲ್ಲದೆ, ಮುಂದೆಯೂ ಇರುವುದನ್ನು ಗ್ರಹಿಸಿ ಬರೆದರೆ ಸಾಹಿತ್ಯ ಉಳಿಯುತ್ತದೆ ಎಂದು ಡಾ.ಎಸ್.ಎಲ್.ಭೈರಪ್ಪ ಹೇಳಿದರು.

Translate »