ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು
ಕೊಡಗು

ಸರ್ಕಾರಿ ಆದೇಶವಿದ್ದರೂ ಜಮ್ಮಾ ಜಾಗಕ್ಕೆ ಕಂದಾಯ ನಿಗದಿಗೆ ಅಧಿಕಾರಿಗಳ ಹಿಂದೇಟು

June 8, 2018

ಮಡಿಕೇರಿ: ಜಮ್ಮಾಬಾಣೆ ಮತ್ತು ಜಾಗಕ್ಕೆ ಕಂದಾಯ ನಿಗಧಿ ಗೊಳಿಸಲು ಜಿಲ್ಲಾ ಕಂದಾಯ ಇಲಾಖೆ ಹಿಂದೇಟು ಹಾಕುವ ಮೂಲಕ ಅರ್ಜಿ ಗಳನ್ನು ತಿರಸ್ಕರಿಸುತ್ತಿರುವುದು ಜಮ್ಮಾ ಹಿಡುವಳಿದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಮಾಡಲು 1912ನೇ ಇಸವಿಯ ಭೂ ದಾಖ ಲೆಗಳನ್ನು ಉಪವಿಭಾಗ ಅಧಿಕಾರಿಗಳು ಕೇಳುತ್ತಿರುವುದು ಈ ಗೊಂದಲ ಸೃಷ್ಠಿಗೆ ಕಾರಣವಾಗಿದೆ. ಆದರೆ ಜಮ್ಮಾ ಜಾಗಕ್ಕೆ ಕಂದಾಯ ನಿಗಧಿ ಪಡಿಸುವಂತೆ 2013 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ,ಕರ್ನಾಟಕ ಭೂ ಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿತ್ತು. ಬಳಿಕ ಈ ಕಾಯಿದೆಯ ಜಾರಿಗಾಗಿ ಅಂದಿನ ರಾಜ್ಯ ಪಾಲ ಹಂಸರಾಜ್ ಭಾರಧ್ವಾಜ್ ಅವರ ಅಂಕಿತಕ್ಕಾಗಿ ಕಳುಹಿಸಿತ್ತು. ಆದರೆ ರಾಜ್ಯ ಪಾಲರು ಅಂಕಿತ ಹಾಕಲು ಹಿಂದೇಟು ಹಾಕಿದ್ದರಿಂದ, ಮತ್ತೆ ರಾಜ್ಯ ಸರ್ಕಾರ ಈ ಕಾಯಿದೆ ಜಾರಿಗೆ ರಾಷ್ಟ್ರಪತಿಗಳ ಮೊರೆ ಹೋಗಿತ್ತು. ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಕರ್ನಾಟಕ ಭೂಸುಧಾ ರಣಾ ಕಾಯಿದೆ 2013ಕ್ಕೆ ಅಂಕಿತ ಹಾಕುವ ಮೂಲಕ ಹೊಸ ಕಾಯಿದೆ ರಾಜ್ಯದಲ್ಲಿ ಜಾರಿಗೆ ಬಂದಿತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಮಾತ್ರ ಜಮ್ಮಾ ಜಾಗಗಳಿಗೆ ಕಂದಾಯ ವಿಧಿಸಲು ಹಿಂದೇಟು ಹಾಕುತ್ತಿರುವುದು ಭೂ ಹಿಡುವಳಿದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಕಂದಾಯ ಜಾರಿ: ಕೊಡಗು ಜಿಲ್ಲೆಗೆ ಮೊದಲ ಬಾರಿಗೆ ಬ್ರಿಟಿಷರು 1899ರಲ್ಲಿ ಕಂದಾಯ ಜಾರಿ ಮಾಡಿದ್ದರು. ಕೂರ್ಗ್ ಲ್ಯಾಂಡ್ ಆ್ಯಂಡ್ ರೆವಿನ್ಯೂ ರೆಗ್ಯೂಲೇಶನ್ ಆ್ಯಕ್ಟ್‍ನ್ನು ಜಾರಿಗೆ ತರುವ ಮೂಲಕ ಜಮಾ ಬಂದಿ ಖಾತೆ ಮಾಡಿ ಜಮ್ಮಾ ಭೂಮಿ, ಜಮ್ಮಾ ಬಾಣೆ, ಉಂಬಳಿ, ಜಹಗೀರ್ ಬಾಣೆ ಗಳನ್ನು, ವಿಂಗಡಿಸಿ ತೆರಿಗೆ ವಿಧಿಸಿದ್ದರು. ಮಾತ್ರವಲ್ಲದೇ ಜಮ್ಮಾ ಜಾಗಗಳ ವರ್ಗೀಕರಣ ಆಧರಿಸಿ ತೆರಿಗೆ ಹೇರಿಕೆ ಯಲ್ಲಿ ವಿನಾಯಿತಿ ನಿಯಮವನ್ನು ರೂಪಿಸಿ ದ್ದರು. ತದನಂತರ 1-4-1964ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜು ಅರಸು ಅವರು ಕರ್ನಾಟಕ ಲ್ಯಾಂಡ್ ರೆವಿನ್ಯೂ ಆ್ಯಕ್ಟ್‍ನ್ನು ಜಾರಿಗೆ ತಂದಿದ್ದರು. ಈ ಸಂದರ್ಭ ಜಮಾಬಂದಿ ರದ್ದಾಗಿತ್ತ ಲ್ಲದೆ,ನೂತನ ಕಾಯಿದೆಯಂತೆ ರೆಕಾರ್ಡ್ ಆಫ್ ರೈಟ್ಸ್ (ಆರ್.ಟಿ.ಸಿ) ಜಾರಿಯಾಗಿ ಇಂದಿಗೂ ಆರ್.ಟಿ.ಸಿ ಚಾಲ್ತಿಯಲಿದೆ.

ಅಧಿಕಾರಿಗಳ ಹಿಂದೇಟು: 2013ರಲ್ಲಿ ಕರ್ನಾಟಕ ಭೂಸುಧಾರಣಾ ಕಾಯಿದೆ ಪ್ರಕಾರ ಕಂದಾಯ ಇಲಾಖೆ ಜಮ್ಮಾ ಬಾಣೆ, ಮತ್ತು ಜಾಗಗಳಿಗೆ ಕಂದಾಯ ನಿಗಧಿಗೊಳಿಸಬೇಕಿತ್ತು. ಆದರೆ ಅಧಿಕಾರಿ ಗಳು ಮಾತ್ರ ಹಳೆಯ ದಾಖಲೆಗಳ ನೆಪವೊಡ್ಡಿ ತೆರಿಗೆ ವಿಧಿಸಲು ಹಿಂದೇಟು ಹಾಕುತ್ತಿದ್ದು ಭೂ ಹಿಡುವಳಿದಾರರು ಪರಿತಪಿಸುತ್ತಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಅತಿ ಹೆಚ್ಚು ಜಮ್ಮಾ ಭೂಮಿ ಹಿಡುವಳಿದಾರರಿದ್ದು ಜಮ್ಮಾ ಭೂಮಿಗೆ ಕಂದಾಯ ವಿಧಿಸದ್ದ ರಿಂದ ಅವು ಕೇವಲ ವಾರಸುದಾರಿಕೆಗೆ ಮಾತ್ರ ಮೀಸಲಾದಂತಾಗಿದೆ.ಇದರಿಂದಾಗಿ ಭೂಪರಿವರ್ತನೆ ಮತ್ತು ಬ್ಯಾಂಕ್ ಸಾಲ ಪಡೆಯಲು ತೊಡಕಾಗು ತ್ತಿದ್ದು ಜಮ್ಮಾ ಹಿಡುವಳಿದಾರರು ಪ್ರತಿಭಟ ನೆಯ ಹಾದಿ ಹಿಡಿಯಲು ಸಜ್ಜಾಗುತ್ತಿದ್ದಾರೆ.

Translate »