ಜಿಲ್ಲೆಯಲ್ಲಿ ನಿಲ್ಲದ ಮಳೆ
ಕೊಡಗು

ಜಿಲ್ಲೆಯಲ್ಲಿ ನಿಲ್ಲದ ಮಳೆ

July 13, 2018
  • ಅಲ್ಲಲ್ಲಿ ಬರೆ ಕುಸಿತ, ಮನೆಗಳಿಗೆ ಹಾನಿ
  • ಇಂದು, ನಾಳೆ ಶಾಲಾ-ಕಾಲೇಜಿಗೆ ರಜಾ

ಮಡಿಕೇರಿ:  ಜಿಲ್ಲಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಸಿದ್ದಾಪುರ ಕರಡಿ ಗೋಡು ಬಳಿ ಕಾವೇರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ಬೆಟ್ಟದ ಕಾಡು ಬಳಿ ಕೆಲವು ಮನೆಗಳಿಗೆ ನದಿ ನೀರು ನುಗ್ಗಿದೆ. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಯಲ್ಲಿ 5-6 ಕುಟುಂಬಗಳು, ತಾತ್ಕಲಿಕವಾಗಿ ಬೇರೆ ಕಡೆಗಳಿಗೆ ಸ್ಥಳಾಂತರವಾಗಿದ್ದು, ಕೆಲವು ಮನೆಗಳ ಗೋಡೆಗಳು ಮಳೆಯಿಂದ ಬಿರುಕು ಬಿಟ್ಟ ಬಗ್ಗೆ ವರದಿಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಜು.13 ಮತ್ತು 14ರಂದು ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಕರಡಿಗೋಡು ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಪ್ರವಾಹ ಸಂತ್ರಸ್ಥರು ಜಿಲ್ಲಾಧಿಕಾರಿಗಳ ಬಳಿ ತಮ್ಮ ಅಳಲು ತೋಡಿಕೊಂಡರು. ಹಲವು ವರ್ಷಗಳಿಂದ ಮಳೆಗಾಲದಲ್ಲಿ, ಕಾವೇರಿ ನದಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ದಿಡ್ಡಳ್ಳಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿದಂತೆ ತಮಗೆ ಪರ್ಯಾಯ ವ್ಯವಸ್ಥೆ ಮಾಡಿದಲ್ಲಿ ಕರಡಿಗೋಡುವಿನಿಂದ ತೆರಳಲು ಸಿದ್ಧವಿರುವುದಾಗಿ ಪ್ರವಾಹ ಸಂತ್ರ ಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.

ಸಿದ್ದಾಪುರ ವ್ಯಾಪ್ತಿಯಿಂದ ಪೈಸಾರಿ ಭೂಮಿಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಿ ನದಿ ದಡ ನಿವಾಸಿಗಳಿಗೆ ನಿವೇಶನ ಗಳ ರೀತಿಯಲ್ಲಿ ವಿತರಿಸಿದರೆ ಶಾಶ್ವತ ಪರಿಹಾರ ಕಾಣಬಹುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಮತ್ತು ಕಾರ್ಮಿಕ ಮುಖಂಡ ಪಿ.ಆರ್ . ಭರತ್ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದ ರಿಂದ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಕಂದಾಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸೂಚನೆ ನೀಡಿದರು. ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ಕರಡಿಗೋಡು ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ ಎಂದು ಕಂದಾಯಾಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರಪೇಟೆ ವರದಿ: ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ.

ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಅತಿ ಹೆಚ್ಚಿನ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮಣಿ ಎಂಬುವರ ಮನೆ ಕುಸಿದಿದೆ. ಸುಮತಿ ಮನೆಯ ಪಕ್ಕ ಬರೆ ಕುಸಿದು ಹಾನಿಯಾಗಿದೆ. ಸುಮತಿ, ಗಿರಿಜಮ್ಮ, ಕ್ಲೀನರ್ ರಾಜು, ನೀಲಮ್ಮ, ರಘು ಇವರುಗಳ ಮನೆ ಪಕ್ಕದ ಬರೆ ಕುಸಿದು ಆತಂಕ ಎದುರಾಗಿದೆ. ಸ್ಥಳಕ್ಕೆ ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ಸದಸ್ಯರಾದ ಕೆ.ಎ. ಯಾಕೂಬ್, ವೀಣಾ, ಕವಿತ, ಪಿಡಿಓ ಮತ್ತು ಜಿಲ್ಲಾ ಪಂಚಾಯಿತಿ ಇಂಜಿನಿಯರ್‍ಗಳು ಭೇಟಿ ನೀಡಿ ಪರಿಶೀಲಿಸಿದರು.

ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ಕಿಬಿರಿ ಪೈಸಾರಿ ಗುರುವಾ ಎಂಬುವರ ಮನೆಯ ಮೇಲೆ ಬಂಡೆ ಉರು ಳಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ. ಮಾಧವ, ಕೃಷ್ಣ ಎಂಬುವರ ಮನೆಯ ಸಮೀಪದ ಬರೆ ಕುಸಿದು ಹಾನಿಯಾಗಿದೆ.
ನಂದಿಗುಂದ ಗ್ರಾಮದ ಪುಷ್ಪಾವತಿ ಎಂಬು ವವರ ಮನೆಯ ಗೋಡೆ ಕುಸಿದಿದೆ. ಚೆಟ್ಟಳ್ಳಿ ಗ್ರಾಮದ ಲಕ್ಷ್ಮಮ್ಮ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಪ್ಪಶೆಟ್ಟಳ್ಳಿ ಗ್ರಾಮದ ಲಕ್ಷ್ಮೀ ಪುಟ್ಟಸ್ವಾಮಿ ಯವರ ಮನೆ ಹಾನಿಯಾದ ವರದಿಯಾಗಿದೆ. ಅಬ್ಬಿಮಟ ಬಾಚಳ್ಳಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‍ನ ಒಂದು ಬದಿಯ ಗೋಡೆ ಕುಸಿದು ಹಾನಿಯಾದ ವರದಿಯಾಗಿದೆ.

Translate »