ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ
ಕೊಡಗು

ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ

July 19, 2018

ಮಡಿಕೇರಿ: ಅತಿವೃಷ್ಟಿಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆ 2 ದಿನಗಳಿಂದ ಸಹಜ ಸ್ಥಿತಿಯತ್ತ ಹೊರಳುತ್ತಿದೆಯಾ ದರೂ, ಬಿರುಗಾಳಿಗೆ ಹಾನಿಯ ಪ್ರಮಾಣ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ಮರಗಳು ಮುರಿದು ಬಿದ್ದಿದ್ದು, ಕಾಫಿ ತೋಟಗಳು ಮತ್ತು ವಾಸದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಮಡಿಕೇರಿಯ ಡೈರಿ ಫಾರಂ ಬಳಿ ಮನೆ ಯೊಂದರ ಮೇಲ್ಛಾವಣಿ ಸಹಿತ ಗೋಡೆ ಕುಸಿದು ಬಿದ್ದಿದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಗ್ಗೆ 7.30ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಮಕ್ಬುಲ್ ಎಂಬವರ ಮನೆಗೆ ಹಾನಿ ಸಂಭವಿಸಿದ್ದು, ದಿನಸಿ ಪದಾರ್ಥ ಸೇರಿದಂತೆ ಗೃಹ ಬಳಕೆಯ ವಸ್ತುಗಳಿಗೆ ಹಾನಿಯಾಗಿದೆ. ಮನೆಯ ಗೋಡೆಗಳೆಲ್ಲ ಬಿರುಕು ಬಿಟ್ಟಿದ್ದು, ಯಾವ ಕ್ಷಣದಲ್ಲಾದರು ಮನೆ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ. ಮಳೆ ಹಾನಿ ಅಡಿ ಪರಿಹಾರ ವಿತರಿಸಲು ಮಡಿಕೇರಿ ನಗರ ಸಭೆ ಮನೆಯ ದಾಖಲೆ ಪತ್ರ ಕೇಳುತ್ತಿದ್ದು, ಮನೆಯ ಮೂಲ ಮಾಲೀಕರು ಮೃತ ಪಟ್ಟಿರುವ ಹಿನ್ನೆಲೆಯಲ್ಲಿ ಬಡ ಕುಟುಂಬವೊಂದು ನಷ್ಟ ಪರಿಹಾರಕ್ಕೆ ಪರಿತಪಿಸುವಂತಾಗಿದೆ. ನಗರದ ಎ.ವಿ.ಶಾಲೆಯ ಹಿಂಬ ದಿಯಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಛಾವಣೆ ಗಾಳಿಗೆ ಹಾರಿ ಹೋಗಿದ್ದು, ಅಂಗನವಾಡಿ ಕೇಂದ್ರ ಜಲಾವೃತಗೊಂಡಿದೆ. ಗೋಡೆಗಳು ತೇವಾಂಶ ಹೀರಿ ಕುಸಿಯುವ ಸ್ಥಿತಿ ತಲುಪಿದ್ದು, ನಷ್ಟ ಉಂಟಾಗಿದೆ.

ಹಟ್ಟಿಹೊಳೆ ಸಮೀಪ ಬೃಹತ್ ಗಾತ್ರದ ಮರವೊಂದರ ರಾತ್ರಿ ವೇಳೆ ಮುರಿದು ಬಿದ್ದ ಪರಿಣಾಮ ಮರದ ಕೆಳಗಿದ್ದ ಮನೆಯೊಂದರ ಮೇಲ್ಛಾವಣಿಗೆ ಹಾನಿ ಸಂಭವಿಸಿದ್ದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ರಸ್ತೆಯಲ್ಲಿ ಮಾರುತಿ ಓಮ್ನಿ ವಾಹನದ ಮೇಲೆ ಮರ ಬಿದ್ದಿದ್ದು, ವಾಹನಕ್ಕೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.

ಭಾಗಮಂಡಲ ಮತ್ತು ಪುಷ್ಟಗಿರಿ ವ್ಯಾಪ್ತಿಯಲ್ಲಿ ದಾಖಲೆಯ ಮಳೆ ಸುರಿದಿದ್ದು, ಕೃಷಿ ಫಸಲಿಗೆ ಅತೀವ ಹಾನಿಯಾಗಿದೆ. ಭಾಗಮಂಡಲ -ನಾಪೋಕ್ಲು ರಸ್ತೆ ಕಳೆದ 8 ದಿನಗಳಿಂದಲೂ ನದಿ ನೀರಿನಿಂದ ಬಂದ್ ಆಗಿದೆ. ಸ್ಥಳೀಯರು ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಬೋಟ್ ಅನ್ನೇ ಅವಲಂಬಿಸಬೇಕಾದ ದುಸ್ಥಿತಿ ಮುಂದುವರಿದಿದೆ.

ಚೇರಂಬಾಣೆ ಬೇಂಗೂರು ಗ್ರಾಮ ಕಳೆದ 5 ದಿನಗಳಿಂದ ಹೊರ ಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ. ಕಾವೇರಿ ನದಿ ಪ್ರವಾಹ ಬೇಂಗೂರು ಗ್ರಾಮವನ್ನು ಸಂಪೂರ್ಣ ಆವರಿಸಿದ್ದು, ಸಂಪರ್ಕ ಸೇತುವೆಗಳು ನದಿ ನೀರಿನಲ್ಲಿ ಮುಳುಗಿದೆ. ಈ ಗ್ರಾಮದ ರಸ್ತೆಗಳ ಮೇಲೆ 5 ಅಡಿ ಹೆಚ್ಚಿನ ನೀರು ಹರಿಯುತ್ತಿದ್ದು, ಇಂದಿಗೂ ನದಿ ನೀರು ಇಳಿಕೆಯಾಗಿಲ್ಲ. ಪರಿಣಾಮ ವೆಂಬಂತೆ ಗ್ರಾಮದ ನಿವಾಸಿಗಳಿಗೆ ಆರೋಗ್ಯ ಹದಗೆಟ್ಟರೆ ದೇವರು ಕೂಡ ಸಹಾಯಕ್ಕೆ ಬರಲಾರದ ಪರಿಸ್ಥಿರಿ ತಲೆದೋರಿದೆ.

ಕೊಳೆತ ಕಾಫಿ: ಜಿಲ್ಲೆಯಾದ್ಯಂತ ಎಡೆ ಬಿಡದೆ ಸುರಿದ ಧಾರಕಾರ ಮಳೆಯಿಂದ ಕಾಫಿ ಬೆಳೆಗೆ ಕೆಲವೆಡೆ ಕೊಳೆ ರೋಗ ತಗುಲಿದ್ದು, ಸಂಪೂರ್ಣ ಫಸಲು ನೆಲಕ ಚ್ಚುವ ಸ್ಥಿತಿಗೆ ತಲುಪಿದೆ. ಚೇರಂಬಾಣೆ ಬೇಂಗೂರು, ಶಾಂತಳ್ಳಿ, ಬಿರುನಾಣಿ, ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ವ್ಯಾಪ್ತಿಯಲ್ಲಿ ಕೊಳೆರೋಗ ಕಂಡು ಬಂದಿದ್ದು ಬೆಳೆ ಗಾರರು ಕಂಗಾಲಾಗಿದ್ದಾರೆ. ಈ ಬಾರಿ ಕಾಫಿ ಹೂ ಮತ್ತು ಕಾಯಿ ಕಟ್ಟಲು ಮಳೆ ಸಹಕರಿ ಸಿತ್ತಲ್ಲದೇ, ಬೆಳೆಗಾರರು ಕೂಡ ಉತ್ತಮ ಫಸಲಿನ ನಿರೀಕ್ಷೆ ಹೊಂದಿದ್ದರು. ಆದರೆ ಅತಿ ವೃಷ್ಟಿಯಿಂದ ಕಾಫಿ ಕಾಯಿ ಕಪ್ಪುಗಟ್ಟಿದ್ದು, ಇದೀಗ ಉದುರಲು ಪ್ರಾರಂಭಿಸಿದೆ. ಬಿರುಗಾಳಿಗೆ ಕಾಫಿ ತೋಟಗಳ ಒಳಗೆ ಮರಗಳು ಬುಡಮೇಲಾಗಿ ಉರುಳಿ ಬೀಳುತ್ತಿದ್ದು, ಕಾಫಿ ಗಿಡಗಳು ಕೂಡ ಧ್ವಂಸಗೊಂಡಿದೆ. ವರುಣನ ವಕ್ರದೃಷ್ಟಿಯಿಂದ ಕಾಫಿ ಬೆಳೆಗಾರರು ದಿಕ್ಕೆ ತೋಚದಂತಾಗಿದ್ದಾರೆ.

Translate »