ಧರ್ಮವೊಂದರ ಬಗ್ಗೆ ಅವಹೇಳನ ಹೇಳಿಕೆ ಆರೋಪ ಪತ್ರಕರ್ತನ ಬಂಧನ, ಬಿಡುಗಡೆ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಕೊಡಗು

ಧರ್ಮವೊಂದರ ಬಗ್ಗೆ ಅವಹೇಳನ ಹೇಳಿಕೆ ಆರೋಪ ಪತ್ರಕರ್ತನ ಬಂಧನ, ಬಿಡುಗಡೆ: ಹಿಂದೂಪರ ಸಂಘಟನೆಗಳ ಪ್ರತಿಭಟನೆ

November 14, 2018

ಗೋಣಿಕೊಪ್ಪಲು: ಧರ್ಮ ವೊಂದರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಡಿ ಪತ್ರಕರ್ತನೋರ್ವನನ್ನು ಗೋಣಿಕೊಪ್ಪ ಪೊಲೀಸರು ಬಂಧಿಸಿದ್ದು, ಇದನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ನಾಳೆ (ನ.14) ಒಂದು ಗಂಟೆ ಕಾಲ ಕೊಡಗು ಬಂದ್‍ಗೆ ಕರೆ ನೀಡಿದೆ.

ಗೋಣಿಕೊಪ್ಪದ ಅಂಕಣಕಾರ ಮಾಣಿಪಂಡ ಸಂತೋಷ್ ತಮ್ಮಯ್ಯ (37) ಬಂಧಿತರಾಗಿದ್ದು, ಮಂಗಳವಾರ ಮುಂಜಾನೆ ಸಂತೋಷ್ ಅವರ ಪತ್ನಿ ತವರು ಮನೆ ತುಮಕೂರಿನ ಮಧುಗಿರಿಯ ಮನೆಯಲ್ಲಿ ಬಂಧಿಸಿ ನಂತರ ಮಧ್ಯಾಹ್ನ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ನವೆಂಬರ್ 5 ರಂದು ಗೋಣಿಕೊಪ್ಪದಲ್ಲಿ ಪ್ರಜ್ಞಾ ಕಾವೇರಿ ಸಂಘಟನೆ ವತಿಯಿಂದ ಆಯೋಜಿಸಿದ್ದ ಟಿಪ್ಪು ಕರಾಳ ಮುಖಗಳ ಅನಾವರಣ ಕಾರ್ಯಕ್ರಮದಲ್ಲಿ ಅವಹೇಳನಕಾರಿ ಭಾಷಣ ಮಾಡಿದ್ದರೆಂದು ಆರೋಪಿಸಲಾಗಿದೆ. ಇದನ್ನು ಖಂಡಿಸಿ ಸಂತೋಷ್ ತಮ್ಮಯ್ಯ ವಿರುದ್ಧ ಸಿದ್ದಾಪುರದ ಅಸ್ಕರ್ ಎಂಬುವರು ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಸಂತೋಷ್ ತಮ್ಮಯ್ಯನನ್ನು ಬಂಧಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

ಸಂತೋಷ್ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ, ನ್ಯಾಯಾಲಯಕ್ಕೆ ಕರೆದೊಯ್ಯುವ ಸಂದರ್ಭ ಹಿಂದೂಪರ ಸಂಘಟನೆ ಕಾರ್ಯಕರ್ತರು ಬೋಲೋ ಜೈಭಾರತ್ ಮಾತಾಕಿ ಜೈ ಘೋಷಣೆ ಕೂಗಿದರು. ಕೊಡಗಿನ ಕೇಸರಿ ಸಂತೋಷ್ ಎಂದು ಸಂತೋಷ್ ಪರ ಘೋಷಣೆ ಕೂಗಿ ಅವರ ಬಂಧನವನ್ನು ಖಂಡಿಸಿ, ಅವರ ಬಿಡುಗಡೆಗೆ ನ್ಯಾಯಕ್ಕೆ ಒತ್ತಾಯಿಸಿದರು.

ಪ್ರತಿಭಟನೆ, ಬಂದ್: ಸಂತೋಷ್ ತಮ್ಮಯ್ಯ ಬಂಧನ ಖಂಡಿಸಿ ಹಿಂದೂಪರ ಸಂಘ ಟನೆಗಳು ಇಂದು ಪ್ರತಿಭಟನಾ ಮೆರವಣಿಗೆ ನಡೆಸಿದವು. ಸರ್ಕಾರದ ಮಲತಾಯಿ ಧೋರಣೆಯಿಂದ ಸಂತೋಷ್ ಬಂಧನವಾಗಿದೆ ಎಂದು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಉಮಾಮಹೇಶ್ವರಿ ದೇವಸ್ಥಾನ ಆವರಣದಿಂದ ಬಸ್ ನಿಲ್ದಾಣದವರೆಗೆ ನೂರಾರು ಹಿಂದೂ ಪರ ಕಾರ್ಯಕರ್ತರು, ವಿವಿಧ ಸಂಘಟನೆಗಳ ಪ್ರಮುಖರು ಮೆರವಣಿಗೆ ಯಲ್ಲಿ ಸಾಗಿದರು. ಹಿಂದೂಪರ ಘೋಷಣೆ ಕೂಗುವ ಮೂಲಕ ನ್ಯಾಯಕ್ಕೆ ಆಗ್ರಹಿಸಿದರು. ಹಿಂದೂಪರ ಎಷ್ಟೇ ಅವಹೇಳನಕಾರಿ ಹೇಳಿಕೆ ಅನ್ಯ ಕೋಮಿನಿಂದ ಬಂದರೂ ಅವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಮಾತ್ರ ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ದೂರಿದರು. ಬಸ್ ನಿಲ್ದಾಣದ ಎದುರು ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಲಾಯಿತು. ನಂತರ ಹಿಂದೂ ಸಂಘಟನೆಗಳ ಕರೆಯಂತೆ ಮಧ್ಯಾಹ್ನ 12 ಗಂಟೆಯಿಂದ 1 ಗಂಟೆವರೆಗೆ ಅಂಗಡಿ-ಮುಂಗಟ್ಟು ಬಂದ್ ಮಾಡಿ ಸಂತೋಷ ಬಂಧನಕ್ಕೆ ವಿರೋಧ ವ್ಯಕ್ತಪಡಿಸಲಾಯಿತು.

ಸಂಘ ಚಾಲಕ ಚೆಕ್ಕೇರ ಮನು ಕಾವೇರಪ್ಪ ಮಾತನಾಡಿ, ದೇಶದ್ರೋಹಿಗಳಿಗೆ ಮಣೆ ಹಾಕಲಾಗುತ್ತಿದೆ. ದೇಶಭಕ್ತರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಇದರಿಂದ ನಮ್ಮ ವಿರೋಧಿಗಳು ಮೆರೆಯುವಂತಾಗಿದೆ ಎಂದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಒಂದು ವರ್ಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಇದಾಗಿದೆ ಎಂದರು. ಈ ಸಂದರ್ಭ ಪ್ರಮುಖರು ಗಳಾದ ಐನಂಡ ಜಪ್ಪು, ಸುಬ್ರಮಣಿ, ಕೊಣಿಯಂಡ ಬೋಜಮ್ಮ, ಸಿ.ಕೆ. ಬೋಪಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಾಮೀನು ನೀಡಿದ ಕೋರ್ಟ್: ಅವಹೇಳನಕಾರಿ ಭಾಷಣ ಮಾಡಿದ ಆರೋಪ ದಡೀ ಬಂಧಿಸಲಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ಪೊನ್ನಂಪೇಟೆ ಜೆಎಂಎಫ್‍ಸಿ ಹಾಗೂ ಸಿವಿಲ್ ನ್ಯಾಯಾಲಯ ಜಾಮೀನು ನೀಡಿದೆ.

ನ್ಯಾಯಾಧೀಶ ಮೋಹನ್‍ಗೌಡ ಅವರು ಅರ್ಧ ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿ 2 ಬಾರಿ ತೀರ್ಪು ಕಾಯ್ದಿರಿಸಿದ್ದರು. ಸಂಜೆ 6.30ಕ್ಕೆ ನಡೆದ ವಿಚಾರಣೆಯಲ್ಲಿ ಜಾಮೀನು ನೀಡಲಾಯಿತು. ಸಂತೋಷ್ ಪರ ಮಡಿಕೇರಿಯ ವಕೀಲ ಜಿ. ಕೃಷ್ಣಮೂರ್ತಿ ವಾದ ಮಂಡಿಸಿದ್ದರು.

Translate »