ಮಂಡ್ಯ: ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಆಂತರಿಕ ಭಿನ್ನಮತ ಸ್ಫೋಟ ಗೊಂಡಿದೆ. ಸಕ್ಕರೆ ನಾಡಿನ ಉಸ್ತುವಾರಿ ಪಟ್ಟಕ್ಕಾಗಿ ಸಚಿವರಿಬ್ಬರ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದ್ದು, ಖಾತೆ ಹಂಚಿಕೆ ಕ್ಯಾತೆ ಮುಗಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ.
ಮಂಡ್ಯ ಜಿಲ್ಲಾ ಉಸ್ತುವಾರಿಗಾಗಿ ಸಚಿವ ಸಿ.ಎಸ್.ಪುಟ್ಟರಾಜು ಪಟ್ಟು ಹಿಡಿದಿದ್ದು, ಬೀಗರಾದ ಸಚಿವ ಡಿ.ಸಿ.ತಮ್ಮಣ್ಣ ಪರ ಜೆಡಿಎಸ್‍ನ ದೊಡ್ಡಗೌಡರು ಬ್ಯಾಟಿಂಗ್ ನಡೆಸುತ್ತಿರುವುದು ಜೆಡಿಎಸ್‍ನೊಳಗಿನ ಭಿನ್ನಮತಕ್ಕೆ ನಾಂದಿಯಾಗಿದೆ.
ಮಂಡ್ಯ ದಳದೊಳಗಿನ ಈ ಆಂತರಿಕ ಕಚ್ಚಾಟ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಹಂಚಿಕೆ ಕೆಲಸ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಖಾತೆ ಕ್ಯಾತೆ ವಿಚಾರದಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಮೊನ್ನೆಯಷ್ಟೇ ಸಿ.ಎಸ್.ಪುಟ್ಟರಾಜುಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಇದೀಗ ಸಮಸ್ಯೆ ಮತ್ತಷ್ಟು ಜಟಿಲ ವಾಗುತ್ತಿರುವುದು ತಲೆನೋವಿಗೆ ಕಾರಣವಾಗಿದೆ. ಜಿಲ್ಲೆಯ 7 ಕ್ಷೇತ್ರಗಳಲ್ಲೂ ಗೆದ್ದು ಬೀಗುತ್ತಿದ್ದ ದಳದೊಳಗೆ ಅಧಿಕಾರಕ್ಕೆ ಬಂದ ನಂತರ ಸದ್ದಿಲ್ಲದ ಕಚ್ಚಾಟ ಶುರುವಾಗಿದೆ.ಅಧಿಕಾರ ಸಿಗುವ ತನಕ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಇದೀಗ ಖಾತೆ ಕ್ಯಾತೆ ವಿಚಾರಕ್ಕೆ ಇಬ್ಭಾಗವಾಗುತ್ತಿದ್ದಾರೆ.!
ಸಚಿವ ಸಿ.ಎಸ್.ಪುಟ್ಟರಾಜು ಬೆಂಬಲಿ ಗರು ತಮ್ಮ ನಾಯಕನ ಪರ ಬ್ಯಾಟಿಂಗ್ ಬೀಸುವ ಭರದಲ್ಲಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ವಿರುದ್ಧ ಹರಿಹಾಯ್ದಿದ್ದು ಜೆಡಿಎಸ್ ಮುಖಂಡರು, ಕಾರ್ಯಕರ್ತರ ನಡುವೆ ವೈಮನಸ್ಸು ಸೃಷ್ಟಿಗೆ ಕಾರಣವಾಗಿದೆ.
ಇದುವರೆಗೂ ಆಂತರಿಕವಾಗಿ ಇದ್ದ ಬೇಗುದಿ ಈಗ ಬಹಿರಂಗವಾಗುತ್ತಿದೆ. ಪರಸ್ಪರ ಆರೋಪಗಳಿಗೂ ಪಕ್ಷದ ಕೆಲ ಮುಖಂಡರು ಮುಂದಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಲು ಕಾರಣ ಕಾಂಗ್ರೆಸ್‍ನ ಆಂತರಿಕ ಕಚ್ಚಾಟ. ಜೊತೆಗೆ ಜೆಡಿಎಸ್‍ನಲ್ಲಿ ಕೆಲವೆಡೆ ಹೊರತು ಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಮೊದಲನೆ ಸಾಲಿನ ನಾಯಕರು ಬೆಳೆಯಲು ಅವಕಾಶವೇ ಸಿಗಲಿಲ್ಲ. ಆದರೆ ಪಕ್ಷ ಅಧಿಕಾರಕ್ಕೆ ಬಂದಾಗ ಕೆಲವರಷ್ಟೇ ಹೀರೋಗಳಾಗುತ್ತಿದ್ದರು. ಇದು ಇತರೆ ಕ್ಷೇತ್ರಗಳ ಶಾಸಕರಿಗೆ ಇರಿ ಸುಮುರಿಸು ಉಂಟು ಮಾಡುತ್ತಿತ್ತು. ಪರಿಣಾಮ ಚುನಾವಣೆ ಸಂದರ್ಭದಲ್ಲಿ ತಮ್ಮವರ ಕಾಲೆಳೆಯುವ ಆಟ ಜಿಲ್ಲೆಯಲ್ಲಿ ಮೂರ್ನಾಲ್ಕು ಚುನಾವಣೆಗಳಿಂದ ಜೆಡಿಎಸ್‍ನಲ್ಲೂ ಆರಂಭವಾಗಿತ್ತು. ಇದರ ಪರಿಣಾಮದಿಂದಲೇ ಸಿ.ಎಸ್.ಪುಟ್ಟರಾಜು, ಚೆಲುವರಾಯಸ್ವಾಮಿ, ಅನ್ನದಾನಿ ಸೋಲು ಕಂಡಿದ್ದರು.
ಚೆಲುವರಾಯಸ್ವಾಮಿ ಪಕ್ಷದಲ್ಲಿರುವ ತನಕ ಜೆಡಿಎಸ್‍ನ ಜಿಲ್ಲಾ ನಾಯಕರಾಗಿದ್ದರು. ರಮೇಶ್ ಬಂಡಿಸಿದ್ದೇಗೌಡ ಕ್ಷೇತ್ರದ ಹೊರಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. 2013ರಲ್ಲಿ ಗೌಡರ ಬೀಗರಾದ ಡಿ.ಸಿ.ತಮ್ಮಣ್ಣ ಜೆಡಿಎಸ್ ಸೇರ್ಪಡೆಯಾಗಿ ಶಾಸಕರಾದರು. ಆರಂಭದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ.
ಸಂತೋಷ್ ಸೋಲಿಗೆ ಕಾರಣ?: 2013ರ ಚುನಾವಣೆಯಲ್ಲಿ ಸೋತಿದ್ದ ಪುಟ್ಟರಾಜು ಲೋಕಸಭೆ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಸೋತು, 2014ರ ಚುನಾವಣೆ ಯಲ್ಲಿ ಸ್ಪರ್ಧೆಗೆ ಸಿದ್ಧರಾಗಿದ್ದರು. ಆದರೆ ಆಗ ತಮ್ಮಣ್ಣ ಪುತ್ರ ಡಿ.ಟಿ.ಸಂತೋಷ್ ಸ್ಪರ್ಧೆ ಬಯಸಿ ಟಿಕೆಟ್‍ಗೆ ಬೇಡಿಕೆ ಇಟ್ಟರು. ಇದರಿಂದಾಗಿ ಪುಟ್ಟರಾಜು ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು. ಅಲ್ಲಿಂದ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ನಂತರ ಬಂದ ಜಿಪಂ ಚುನಾವಣೆಯಲ್ಲಿ ಸಂತೋಷ್ ಕೆ.ಎಂ.ದೊಡ್ಡಿ ಕ್ಷೇತ್ರದಿಂದ ಸ್ಪರ್ಧೆಗಿಳಿದು ಪರಾಜಿತರಾದರು.
ಇದರ ಹಿಂದೆ ಪುಟ್ಟರಾಜು ಪಾತ್ರವಿದೆ ಎಂಬ ಅನುಮಾನ ಮೊಳಕೆಯೊಡೆಯಿತು. ಚೆಲುವರಾಯಸ್ವಾಮಿ ಪಕ್ಷ ಬಿಡುವ ಸೂಚನೆ ಸಿಕ್ಕ ನಂತರ ಜಿಲ್ಲಾ ನಾಯಕತ್ವ ಸಿ.ಎಸ್.ಪುಟ್ಟರಾಜು ಅವರ ಪಾಲು ಎಂಬುದು ಗೊತ್ತಿದ್ದ ತಮ್ಮಣ್ಣ ತಾವು ಹಿಡಿತ ಸಾಧಿಸಲು ಪ್ರಯತ್ನ ಹಾಕಿದ್ದರು ಎನ್ನಲಾಗಿದೆ.
ರವೀಂದ್ರ ಶ್ರೀಕಂಠಯ್ಯ ಟಾಂಗ್: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನ ಸೇವೆ ಮಾಡಲು ಮಂಡ್ಯ ಜಿಲ್ಲೆಯ ಶಾಸಕರಿಗೆ 2 ಉತ್ತಮ ಖಾತೆ ನೀಡಿದ್ದಾರೆ ಎಂದು ಹೇಳುವ ಮೂಲಕ, ಸಣ್ಣ ನೀರಾವರಿ ಖಾತೆ ವಿರೋಧಿಸಿ ಸಚಿವ ಸಿ.ಎಸ್.ಪುಟ್ಟರಾಜು ಪರ ಪ್ರತಿಭಟನೆ ಮಾಡಿದ ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪರೋಕ್ಷ ವಾಗಿ ಟಾಂಗ್ ನೀಡಿದ್ದಾರೆ. ಇದು ಜೆಡಿಎಸ್‍ನೊಳಗೆ ಬೇಗುದಿ ಶುರುವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇದು ಮುಂದೆ ಯಾವ ಹಂತಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.